ADVERTISEMENT

ರಾಮನಗರ | ‘ಡಿ ಬಾಸ್, ಡಿ ಬಾಸ್’ ಎಂದು ಕೂಗಬೇಡಿ ಅಂದಿದ್ದಕ್ಕೆ ಕೊಲೆಗೆ ಯತ್ನ

‘ಡಿ ಬಾಸ್, ಡಿ ಬಾಸ್’ ಎಂದು ಕೂಗಾಡುತ್ತಿದ್ದ ದರ್ಶನ್ ಅಭಿಮಾನಿಗಳಿಂದ ಕೃತ್ಯ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 5:09 IST
Last Updated 29 ಸೆಪ್ಟೆಂಬರ್ 2024, 5:09 IST
   

ರಾಮನಗರ: ‘ಡಿ ಬಾಸ್, ಡಿ ಬಾಸ್’ ಎಂದು ಕೂಗಾಡುತ್ತಿದ್ದ ನಟ ದರ್ಶನ್ ಅಭಿಮಾನಿಗಳಿಬ್ಬರು, ತಮಗೆ ಬುದ್ಧಿವಾದ ಹೇಳಿದ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆಗೆ ಯತ್ನಿಸಿದ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಸೂಲಿಕೆರೆಪಾಳ್ಯದಲ್ಲಿ ಇತ್ತೀಚೆಗೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ರಾಮನಗರದ ಐಜೂರಿನ ಕಿರಣ್ ಮತ್ತು ಮಹದೇವ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ದೊಡ್ಡಮಣ್ಣಗುಡ್ಡೆಯ ವೆಂಕಟಸ್ವಾಮಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೂಲಿಕೆರೆಪಾಳ್ಯದಲ್ಲಿ ನಡೆಯುತ್ತಿದ್ದ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಮೇಸ್ತ್ರಿಯಾಗಿರುವ ವೆಂಕಟಸ್ವಾಮಿ ಅವರೊಂದಿಗೆ ಆರೋಪಿಗಳಿಬ್ಬರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕೆಲಸದ ಸ್ಥಳದಲ್ಲೇ ಶೆಡ್‌ ನಿರ್ಮಿಸಿಕೊಂಡು ವಾಸವಾಗಿದ್ದರು. ಸೆ. 26ರಂದು ರಾತ್ರಿ 8ರ ಸುಮಾರಿಗೆ ನಟ ದರ್ಶನ್ ವಿಚಾರವಾಗಿ ಮಾತನಾಡುತ್ತಿದ್ದ ಆರೋಪಿಗಳು ‘ಡಿ ಬಾಸ್, ಡಿ ಬಾಸ್’ ಎಂದು ಜೋರಾಗಿ ಕೂಗಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ADVERTISEMENT

ಆಗ ವೆಂಕಟಸ್ವಾಮಿ ಅವರು, ‘ಅಕ್ಕಪಕ್ಕದಲ್ಲಿ ಮನೆಗಳಿವೆ. ಯಾಕೆ ಡಿ ಬಾಸ್ ಎಂದು ಕೂಗಾಡುತ್ತಿದ್ದೀರಾ? ಸುಮ್ಮನೆ ಮಲಗಿ’ ಎಂದು ಬುದ್ಧಿಮಾತು ಹೇಳಿದ್ದಾರೆ. ಅದಕ್ಕೆ ಕೆರಳಿದ ಇಬ್ಬರೂ, ‘ನಮ್ಮ ಡಿ ಬಾಸ್ ಬಗ್ಗೆಯೇ ಮಾತನಾಡುತ್ತೀಯಾ? ಅವರ ಬಗ್ಗೆ ನಿನಗೇನು ಗೊತ್ತು?’ ಎಂದು ವೆಂಕಟಸ್ವಾಮಿ ಅವರ ಮೇಲೆ ಏಕಾಏಕಿ ಹಲ್ಲೆಗೆ ಮುಂದಾದರು ಎಂದು ಹೇಳಿದರು.

ಈ ವೇಳೆ ಕಿರಣ, ‘ನಿನ್ನನ್ನು ಸುಮ್ಮನೆ ಬಿಡುವುದಿಲ್ಲ’ ಎನ್ನುತ್ತಾ ಸ್ಥಳದಲ್ಲಿದ್ದ ಚಾಕುವಿನಿಂದ ವೆಂಕಟಸ್ವಾಮಿ ಅವರ ಕುತ್ತಿಗೆ ಕೊಯ್ದಿದ್ದಾನೆ. ಮಹದೇವ ಕೈಗಳಿಂದ ಹಲ್ಲೆ ನಡೆಸಿದ್ದು, ಇಬ್ಬರೂ ಕೊಲೆಗೆ ಯತ್ನಿಸಿದ್ದಾರೆ. ಅದೇ ಸಮಯಕ್ಕೆ ಸ್ಥಳಕ್ಕೆ ಬಂದ ಕಾಳಯ್ಯ ಜಗಳ ಬಿಡಿಸಿದ್ದಾರೆ. ಗಾಯಗೊಂಡು ಕುತ್ತಿಗೆಯಲ್ಲಿ ರಕ್ತ ಸೋರುತ್ತಿದ್ದ ವೆಂಕಟಸ್ವಾಮಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿಕ ಆರೋಪಿಗಳಿಬ್ಬರು ತಲೆ ಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.