ಕನಕಪುರ: ಸಾತನೂರಿನ ಸೋರೆಕಾಯಿ ದೊಡ್ಡಿ ಗ್ರಾಮದ ಬಳಿ ಶುಕ್ರವಾರ ಆಟೊ ರಿಕ್ಷಾ ಕೆರೆಗೆ ಉರುಳಿ ಬಿದ್ದು 12 ಕ್ಕೂ ಹೆಚ್ಚು ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಾಲ್ಲೂಕಿನ ಸಾತನೂರು ಹೋಬಳಿಯ ಸೋರೆಕಾಯಿ ದೊಡ್ಡಿ ಗ್ರಾಮದ ಕೆರೆಯ ಬಳಿ ಈ ಘಟನೆ ನಡೆದಿದೆ.
ಸಾತನೂರು ಕಡೆಯಿಂದ ಪಾಳ್ಯ, ಸೋರೆಕಾಯಿದೊಡ್ಡಿ ಕಡೆಗೆ ಖಾಸಗಿ ಶಾಲೆಯ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೊ ಅಪಘಾತಕ್ಕೀಡಾಗಿದೆ. ಆಟೊ ಮಗುಚಿ ಕೆರೆಗೆ ಉರುಳಿದೆ. ಶಾಲಾ ಮಕ್ಕಳು ಪವಾಡದ ಪ್ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸೋರೆಕಾಯಿದೊಡ್ಡಿ ಗ್ರಾಮದ ವ್ಯಕ್ತಿಯೊಬ್ಬರು ಆಟೊ ರಿಕ್ಷಾವನ್ನಿಟ್ಟುಕೊಂಡಿದ್ದು ಮಕ್ಕಳನ್ನು ಪ್ರತಿ ನಿತ್ಯ ಸಾತನೂರಿನ ಖಾಸಗಿ ಶಾಲೆಗೆ ಬಿಟ್ಟು ಮತ್ತು ಕರೆತರುತ್ತಿದ್ದರು.
ಶುಕ್ರವಾರ ಸಂಜೆ ಶಾಲೆ ಬಿಟ್ಟ ನಂತರ ಸಾತನೂರಿನಿಂದ 12 ಮಕ್ಕಳನ್ನು ಆಟೊ ರಿಕ್ಷಾದಲ್ಲಿ ಕರೆತರುವಾಗ ಸೋರೆಕಾಯಿದೊಡ್ಡಿ ಗ್ರಾಮದ ಬಳಿ ಎದುರುಗಡೆ ಬರುತ್ತಿದ್ದ ಕಾರನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದಿದೆ.
ಆಟೊ ಕೆರೆಗೆ ಉರುಳಿ ಬೀಳುವುದನ್ನು ಕಂಡ ಗ್ರಾಮಸ್ಥರು ತಕ್ಷಣ ಸಹಾಯಕ್ಕೆ ಬಂದು ಶಾಲಾ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಅಪಘಾತದಲ್ಲಿ ಕೆಲವು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.