ADVERTISEMENT

ನವಜಾತ ಶಿಶು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 5:11 IST
Last Updated 12 ಜುಲೈ 2024, 5:11 IST

ಕನಕಪುರ: ಇಲ್ಲಿನ ತಾಯಿ ಮತ್ತು ಮಗು ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನವಜಾತ ಶಿಶು ಸಾವನ್ನಪ್ಪಿದ್ದು, ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ.

ಕಸಬಾ ಹೋಬಳಿ ಚೌಕಸಂದ್ರ ಗ್ರಾಮದ ಯೋಗಿತಾ ಅವರ ಮೂರು ದಿನದ ನವಜಾತ ಶಿಶು ಸಾವನ್ನಪ್ಪಿದೆ. ಯೋಗಿತಾ ಅವರು ಭಾನುವಾರ ತಾಯಿ ಮತ್ತು ಮಗುವಿನ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದರು.
ಸೋಮವಾರ ಬೆಳಗ್ಗೆ ಎಂಟು ಗಂಟೆಗೆ ಅವರಿಗೆ ಸಹಜ ಹೆರಿಗೆಯಾಗಿತ್ತು. ಆಗ ತಾಯಿ ಮತ್ತು ಮಗು  ಇಬ್ಬರೂ ಆರೋಗ್ಯವಾಗಿದ್ದರು. ಮಂಗಳವಾರ ಬೆಳಗ್ಗೆ ಮಗುವಿನ ಆರೋಗ್ಯ ತಪಾಸಣೆ ನಡೆಸಿದ್ದ  ಡಾ.ಸಂತೋಷ್ ಅವರು ಬುಧವಾರ ಮನೆಗೆ ಕಳುಹಿಸುವುದಾಗಿ ಹೇಳಿದ್ದರು.

‘ಆದರೆ ಮಂಗಳವಾರ ರಾತ್ರಿ ಮಗುವಿಗೆ ಜ್ವರ ಕಾಣಿಸಿಕೊಂಡಿದೆ. ಆಗ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ನರ್ಸ್ ಮಗುವಿಗೆ ಸಿರಪ್ ಕೊಟ್ಟಿದ್ದರು. ಒಂದು ಗಂಟೆಯಾದರೂ ಜ್ವರ ಕಡಿಮೆ ಆಗಿರಲಿಲ್ಲ, ಅದನ್ನು ಯೋಗಿತಾ ಅವರು ನರ್ಸ್ ಗಮನಕ್ಕೆ ತಂದಿದ್ದರು. ಈಗ ಆಸ್ಪತ್ರೆಗೆ ವೈದ್ಯರು ಬರುವುದಿಲ್ಲ, ಬೆಳಗ್ಗೆ ಬರುತ್ತಾರೆ ಎಂದು ಹೇಳಿದ ನರ್ಸ್‌ಗಳು, ಎರಡನೇ ಬಾರಿಗೆ ಮಗುವಿಗೆ ಸಿರಪ್ ಕೊಟ್ಟಿದ್ದರು. ಅದಾದ ಐದು ನಿಮಿಷಗಳಲ್ಲಿ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ಆಗ ಮಗುವನ್ನು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ಪೋಷಕರು ಕರೆದೊಯ್ದಿದ್ದಾರೆ. ಆದರೆ, ಮಗು ಮಾರ್ಗಮಧ್ಯೆದಲ್ಲಿ ಮೃತಪಟ್ಟಿದೆ’ ಎಂದು ಪೋಷಕರು ತಿಳಿಸಿದ್ದಾರೆ.

ADVERTISEMENT

‘ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರುವುದು ಮತ್ತು ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಮಗು ಸಾವನಪ್ಪಿದೆ’ ಎಂದು ಮಗುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.