ADVERTISEMENT

ಬಗರ್‌ಹುಕುಂ ಅರ್ಜಿ ತ್ವರಿತ ವಿಲೇವಾರಿಗೆ ಸೂಚನೆ

ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 5:05 IST
Last Updated 26 ಜೂನ್ 2024, 5:05 IST
ರಾಮನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಮಂಗಳವಾರ ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತಹಶೀಲ್ದಾರ್ ತೇಜಸ್ವಿನಿ ಇದ್ದಾರೆ
ರಾಮನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಮಂಗಳವಾರ ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತಹಶೀಲ್ದಾರ್ ತೇಜಸ್ವಿನಿ ಇದ್ದಾರೆ   

ರಾಮನಗರ: ‘ಬಗರ್‌ಹುಕುಂ ಸಾಗುವಳಿ ಚೀಟಿ ಕೋರಿ ನಮೂನೆ–50, ನಮೂನೆ–53 ಹಾಗೂ ನಮೂನೆ –57ರಲ್ಲಿ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳನ್ನು ಪುನರ್ ಪರಿಶೀಲನೆ ನಡೆಸಿ, ತ್ವರಿತವಾಗಿ ವಿಲೇವಾರಿ ಮಾಡಬೇಕು. ಇದಕ್ಕಾಗಿ ಸ್ಥಳ ಪರಿಶೀಲನೆ ನಡೆಸಿ, ವಸ್ತು ಸ್ಥಿತಿ ಅರಿಯಲಾಗುವುದು’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಹೇಳಿದರು.

ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬಗರ್ ಹುಕುಂ ಸಾಗುವಳಿಗೆ ಸಂಬಂಧಿಸಿದಂತೆ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾಗುವಳಿ ಅರ್ಜಿಗಳನ್ನು ಪುನರ್ ಪರಿಶೀಲನೆಯ ನೆಪವೊಡ್ಡಿ ಅಧಿಕಾರಿಗಳು ತಡೆ ಹಿಡಿದಿರುವುದು ಗಮನಕ್ಕೆ ಬಂದಿದೆ. ಈ ಕುರಿತು, ಅಧಿಕಾರಿಗಳಿಂದ ಮಾಹಿತಿ ಪಡೆದು ರೈತರಿಗೆ ಸಾಗುವಳಿ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ’ ಎಂದರು.

‘ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವಂತೆ ಕೋರಿ ಕರ್ನಾಟಕ ಭೂ ಕಂದಾಯ ಕಾಯ್ದೆಯ ನಮೂನೆ– 50 ಮತ್ತು ನಮೂಲೆ –53ರಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ, ಸುಮಾರು 2 ಸಾವಿರಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗಿಲ್ಲ. ಇನ್ನು ನಮೂನೆ –57ರ ಅಡಿಯಲ್ಲಿ 2,499 ಅರ್ಜಿಗಳು ಬಂದಿವೆ. ಇದರಲ್ಲಿ 1,564 ಅರ್ಜಿಗಳು ತಿರಸ್ಕೃತವಾಗಿವೆ. ಬಾಕಿ ಉಳಿದಿರುವ 935 ಅರ್ಜಿಗಳ ಪೈಕಿ, 355 ಅರ್ಜಿಗಳು ಜಿಲ್ಲಾಕಾರಿಗೆ ರವಾನೆಯಾಗಿದ್ದು, 580 ಅರ್ಜಿಗಳು ಬಾಕಿ ಉಳಿದಿವೆ’ ಎಂದು ಮಾಹಿತಿ ನೀಡಿದರು.

ADVERTISEMENT

ಸಭೆ ನಡೆಸದ ಹಿಂದಿನ ಶಾಸಕರು: ‘ಹಿಂದಿನ ಶಾಸಕರಾದ ಎಚ್‌.ಡಿ. ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರು ಬಗರ್‌ಹುಕುಂ ಸಾಗುವಳಿ ಸಮಿತಿ ಸಭೆಯನ್ನು ಸರಿಯಾಗಿ ನಡೆಸಿಲ್ಲ. ಕುಮಾರಸ್ವಾಮಿ ಅವರು 14 ವರ್ಷದಲ್ಲಿ 3ರಿಂದ 4 ಸಭೆ ಮಾತ್ರ ನಡೆಸಿದ್ದಾರೆ. ಆ ಪೈಕಿ, 2ರಲ್ಲಿ ಮಾತ್ರ ಸಹಿ ಹಾಕಿದ್ದಾರೆ’ ಎಂದು ಆರೋಪಿಸಿದರು.

‘ಅನಿತಾ ಅವರು 5 ವರ್ಷಗಳ ಅವಧಿಯಲ್ಲಿ 1 ಬಾರಿ ಮಾತ್ರ ಸಭೆ ನಡೆಸಿ, 7 ಮಂದಿಗೆ ಸಾಗುವಳಿ ಚೀಟಿ ವಿತರಣೆ ಮಾಡಿದ್ದಾರೆ. ಈ ಕಾರಣದಿಂದಾಗಿಯೇ ಅಧಿಕಾರಿಗಳು ಪುನರ್ ಪರಿಶೀಲನೆಯ ನೆಪವೊಡ್ಡಿ ಸಾವಿರಾರು ಸಾಗುವಳಿ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಅರ್ಜಿ ಸಲ್ಲಿಸಿರುವ ರೈತರು ಜಮೀನು ಸಿಗುವ ಆಸೆಯಲ್ಲಿ ಇದ್ದರು. ಹಿಂದಿನ ಶಾಸಕರು ಅ‍ವರಿಗೆ ನ್ಯಾಯ ದೊರಕಿಸಿಸುವ ಕೆಲಸ ಮಾಡಿಲ್ಲ. ತಾವು ಸಾಗುವಳಿದಾರರಿಗೆ ಅನ್ಯಾಯವಾಗದಂತೆ ಕಾನೂನು ಚೌಕಟ್ಟಿನಲ್ಲಿ ಸಾಗುವಳಿ ಚೀಟಿ ವಿತರಣೆಗೆ ಕ್ರಮ ವಹಿಸುವೆ’ ಎಂದು ಭರವಸೆ ನೀಡಿದರು.

‘ತಾಲ್ಲೂಕಿನ ಕಸಬಾ ಮತ್ತು ಕೈಲಾಂಚ ಹೋಬಳಿ ವ್ಯಾಪ್ತಿಯಲ್ಲಿ ಕಳೆದ 19 ವರ್ಷಗಳಲ್ಲಿ ಸ್ವೀಕೃತವಾದ ಸಾವಿರಾರು ಅರ್ಜಿಗಳಲ್ಲಿ ಕೇವಲ 7 ಅರ್ಜಿಗಳಷ್ಟೇ ವಿಲೇವಾರಿಯಾಗಿವೆ. ಇದು ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರಿಗೆ ರೈತರ ಬಗೆಗಿರುವ ಕಾಳಜಿ ಎಂತಹದ್ದು ಎಂಬುದನ್ನು ತೋರಿಸುತ್ತದೆ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.