ADVERTISEMENT

ಶ್ರದ್ಧಾ–ಭಕ್ತಿಯ ಈದ್ ಉಲ್ ಅದಾ

ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ; ಹಬ್ಬದ ಶುಭಾಶಯ ವಿನಿಮಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 5:14 IST
Last Updated 18 ಜೂನ್ 2024, 5:14 IST
ಈದ್ ಉಲ್ ಅದಾ ಹಬ್ಬದ ಅಂಗವಾಗಿ, ರಾಮನಗರದ ಬೆಂಗಳೂರು–ಮೈಸೂರು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ  ಮುಸ್ಲಿಮರು ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಈದ್ ಉಲ್ ಅದಾ ಹಬ್ಬದ ಅಂಗವಾಗಿ, ರಾಮನಗರದ ಬೆಂಗಳೂರು–ಮೈಸೂರು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ  ಮುಸ್ಲಿಮರು ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು   

ರಾಮನಗರ: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಈದ್ ಉಲ್ ಅದಾ ಹಬ್ಬವನ್ನು ನಗರದಲ್ಲಿ ಸೋಮವಾರ ಮುಸ್ಲಿಮರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಬೆಂಗಳೂರು– ಮೈಸೂರು ರಸ್ತೆಯ ಎಪಿಎಂಸಿ ಮಾರುಕಟ್ಟೆ ಬಳಿ ಇರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮಂದಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮಕ್ಕಳಿಂದಿಡಿದು ಹಿರಿಯರವರೆಗೆ ಎಲ್ಲರೂ ಶ್ವೇತವಸ್ತ್ರಧಾರಿಗಳಾಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಧರ್ಮ ಸಂದೇಶ ನೀಡಿದ ರಾಮನಗರದ ಜಾಮಿಯಾ ಮಸೀದಿಯ ಮೌಲಾನಾ ಅಸ್ಗರ್ ಅಲಿ ಸಾಬ್ ಮನುಕುಲದ ಒಳಿತಿಗಾಗಿ ಪ್ರವಾದಿ ಮಹಮ್ಮದ್ ಅವರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿದರು.

‘ಈದ್ ಉಲ್ ಅದಾ ಹಬ್ಬವನ್ನು ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಆಚರಣೆ ಮಾಡಲಾಗುತ್ತದೆ. ಪ್ರವಾದಿ ಅವರ ಬೋಧನೆಗಳು ಹಾಗೂ ಬದುಕಿನ ಆದರ್ಶಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ, ಪ್ರಪಂಚವು ಶಾಂತಿ ಮತ್ತು ಸೌಹಾರ್ದ ದಿಕ್ಕಿನಲ್ಲಿ ಸಾಗುತ್ತದೆ. ಆಗ ಮಾತ್ರ ಮನುಕುಲವು ಉದ್ಧಾರವಾಗುತ್ತದೆ ’ ಎಂದರು.

ADVERTISEMENT

‘ಸಮಾಜದಲ್ಲಿ ಉಳ್ಳವರು ಮತ್ತು ಇಲ್ಲದವರು ಸಹ ಇದ್ದಾರೆ. ಉಳ್ಳವರು ಇಲ್ಲದವರ ಬಗ್ಗೆ ಕರುಣೆ ಬೆಳೆಸಿಕೊಳ್ಳಬೇಕು. ತಮ್ಮ ದುಡಿಮೆಯಲ್ಲಿ ಬಡವರಿಗೆ ಕೈಲಾದಷ್ಟು ದಾನ ಮಾಡಬೇಕು. ನಿಜವಾದ ಸಾರ್ಥಕತೆ ಇರುವುದು ದಾನ–ಧರ್ಮದಲ್ಲೇ. ಅದನ್ನೇ ಪ್ರವಾದಿ ಅವರು ಬೋಧನೆ ಮಾಡಿದರು. ಧಾನ–ಧರ್ಮದ ಶಾಂತಿ ಹಾಗೂ ಸೌಹಾರ್ದದ ಬದುಕು ನಮ್ಮದಾಗಬೇಕು’ ಎಂದು ಕರೆ ನೀಡಿದರು.

ಹಬ್ಬದ ಅಂಗವಾಗಿ ಮಧ್ಯಾಹ್ನ ಭೋಜನಕ್ಕೆ ತಯಾರಿಸಿದ್ದ ಶೀರ್ ಕುರ್ಮಾ, ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಕಬಾಬ್, ಕೀಮಾ ಸೇರಿದಂತೆ ಬಗೆಬಗೆಯ ಮಾಂಸಾಹಾರದ ಖಾದ್ಯಗಳನ್ನು ಕುಟುಂಬದವರೊಂದಿಗೆ ಸವಿದರು. ನೆರೆಹೊರೆಯವರು ಹಾಗೂ ನೆಂಟರಿಷ್ಟರನ್ನು ಸಹ ಮನೆಗೆ ಕರೆದು ಹಬ್ಬವನ್ನು ಸಂಭ್ರಮಿಸಿದರು.

ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಹಿನ್ನೆಲೆಯಲ್ಲಿ ಬೆಂಗಳೂರು–ಮೈಸೂರು ರಸ್ತೆಯಲ್ಲಿ ಕೆಲ ಹೊತ್ತು ಸಂಚಾರ ದಟ್ಟಣೆ ಕಂಡುಬಂತು. ಅಹಿತಕರ ಘಟನೆಗೆ ಅವಕಾಶ ಇಲ್ಲದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.