ADVERTISEMENT

ಬಂದ್‌ಗೆ ರಾಮನಗರದಲ್ಲಿ ಭಾಗಶಃ ಬೆಂಬಲ, ವ್ಯಾಪಾರಿಗಳಿಂದ ಮಿಶ್ರ ಪ್ರತಿಕ್ರಿಯೆ

ಬಸ್ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2018, 12:11 IST
Last Updated 10 ಸೆಪ್ಟೆಂಬರ್ 2018, 12:11 IST
ರಾಮನಗರದ ಬಸ್ ನಿಲ್ದಾಣ ಸೋಮವಾರ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು
ರಾಮನಗರದ ಬಸ್ ನಿಲ್ದಾಣ ಸೋಮವಾರ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು   

ರಾಮನಗರ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಸೋಮವಾರ ಕರೆ ನೀಡಲಾಗಿದ್ದ ಬಂದ್‌ಗೆ ಜಿಲ್ಲೆಯಲ್ಲಿ ಭಾಗಶಃ ಬೆಂಬಲ ವ್ಯಕ್ತವಾಯಿತು.

ರಾಮನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು, ಖಾಸಗಿ ಬಸ್‌ಗಳು ಬೆಳಗ್ಗೆಯಿಂದಲೇ ರಸ್ತೆಗೆ ಇಳಿಯಲಿಲ್ಲ. ಇದರಿಂದಾಗಿ ಸಹಜವಾಗಿಯೇ ಜನರಿಗೆ ಬಂದ್ ಬಿಸಿ ಮುಟ್ಟಿತು. ಜನರು ರೈಲು ನಿಲ್ದಾಣದತ್ತ ಹೆಜ್ಜೆ ಇಟ್ಟರು. ಇನ್ನೂ ಕೆಲವರು ಖಾಸಗಿ ವಾಹನಗಳ ಮೊರೆ ಹೋದರು. ಡಿಪೊಗೆ ಬದಲಾಗಿ ಬಸ್‌ ನಿಲ್ದಾಣದಲ್ಲಿಯೇ ಬಸ್‌ಗಳನ್ನು ನಿಲ್ಲಿಸಿದ್ದು, ಚಾಲಕ–ನಿರ್ವಾಹಕರು ಕೆಲಸವಿಲ್ಲದೇ ನಿಂತಿದ್ದರು.

ಶಾಲೆ–ಕಾಲೇಜುಗಳಿಗೆ ಮುಂಚೆಯೇ ರಜೆ ಘೋಷಿಸಲಾಗಿತ್ತು. ಬಹುತೇಕ ಹೋಟೆಲ್‌ಗಳು ಮುಂಜಾನೆ ತೆರೆದಿದ್ದವು. ಪೆಟ್ರೋಲ್‌ ಬಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ರೇಷ್ಮೆಗೂಡು ಮಾರುಕಟ್ಟೆ, ಎಪಿಎಂಸಿಗಳಲ್ಲಿ ವಹಿವಾಟು ನಡೆಯಿತು.

ADVERTISEMENT

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬಸ್‌ಗಳನ್ನು ಹೊರತುಪಡಿಸಿ ಖಾಸಗಿ ವಾಹನಗಳ ಸಂಚಾರವು ಎಂದಿನಂತೆ ಒತ್ತು. ಆಟೊಗಳಿಗೆ ಬೇಡಿಕೆ ಹೆಚ್ಚಿದ್ದು, ಗ್ರಾಹಕರಿಗೆ ಅಭಾದಿತವಾಗಿ ಸೇವೆ ಒದಗಿಸಿದವು.

ಬ್ಯಾಂಕುಗಳು, ಸರ್ಕಾರಿ ಕಚೇರಿಗಳು ಎಂದಿನಂತೆಯೇ ಕಾರ್ಯ ನಿರ್ವಹಿಸಿದವು. ಸಿಬ್ಬಂದಿ ಹಾಜರಾತಿ ಇತ್ತಾದರೂ ಜನರ ಓಡಾಟ ಕಡಿಮೆ ಇತ್ತು. ಹಳೆ ಬಸ್ ನಿಲ್ದಾಣದಲ್ಲಿನ ಹೂವು–ಹಣ್ಣಿನ ವ್ಯಾಪಾರಿಗಳು ಗ್ರಾಹಕರಿಗಾಗಿ ಕಾಯುತ್ತಿದ್ದರು. ಎಂ.ಜಿ. ರಸ್ತೆಯಲ್ಲಿನ ಕೆಲವು ಅಂಗಡಿಗಳ ಮಾಲೀಕರು ಬಾಗಿಲು ಮುಚ್ಚಿ ಸ್ವಯಂ ಪ್ರೇರಿತರಾಗಿ ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ತೆರೆದಿದ್ದರು.

ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವಹಿವಾಟು ಎಂದಿನಂತೆಯೇ ಇತ್ತು. ದೂರದ ಊರುಗಳ ಕೆಲ ರೈತರು ಖಾಸಗಿ ವಾಹನಗಳ ಮೊರೆ ಹೋಗಿದ್ದರು. ಸ್ಥಳೀಯ ರೈತರು ಆಟೊಗಳಲ್ಲಿ ಗೂಡು ಹೊತ್ತು ತಂದಿದ್ದರು.ಚಿತ್ರಮಂದಿರಗಳಲ್ಲಿ ಪ್ರದರ್ಶನ ಎಂದಿನಂತೆ ಇತ್ತು.

ಆಸ್ಪತ್ರೆಗಳು, ಔಷಧ ಅಂಗಡಿಗಳು ಸೇರಿದಂತೆ ತುರ್ತು ಸೇವಾ ವಲಯದ ವಹಿವಾಟಿಗೆ ಯಾವುದೇ ಅಡ್ಡಿ ಆಗಲಿಲ್ಲ. ಮಧ್ಯಾಹ್ನದ ನಂತರ ಜನಜೀವನವು ಸಹಜ ಸ್ಥಿತಿಗೆ ಬಂದಿತು. ವ್ಯಾಪಾರ ಮಳಿಗೆಗಳು ತೆರೆದಿದ್ದವು. ನಂತರದಲ್ಲಿ ಬಸ್ ಸಂಚಾರವೂ ಆರಂಭಗೊಂಡಿತು.

ಬಲವಂತದ ಬಂದ್
ಬೆಳಿಗ್ಗೆ 10.30ರ ಸುಮಾರಿಗೆ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಬೈಕ್‌ ರ್‍ಯಾಲಿ ನಡೆಸಿದರು. ಯುವಕರ ಗುಂಪು ಬೈಕುಗಳಲ್ಲಿ ತೆರೆಳಿ ಅಲ್ಲಲ್ಲಿ ತೆರೆದಿದ್ದ ಅಂಗಡಿ–ಮುಂಗಟ್ಟುಗಳನ್ನು ಮುಚ್ಚಿಸಿದರು. ಪೆಟ್ರೋಲ್‌ ಬಂಕ್‌ಗಳ ವಹಿವಾಟನ್ನೂ ನಿಲ್ಲಿಸಿದರು. ಕೆಲವೆಡೆ ಬಲವಂತವಾಗಿ ಅಂಗಡಿಗಳಿಗೆ ಬೀಗ ಜಡಿಯಲಾಯಿತು.

ಮುಖ್ಯಾಂಶಗಳು
* ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಸೇವೆ ಸ್ಥಗಿತ
* ಶಾಲೆ, ಕಾಲೇಜಿಗೆ ರಜೆ ಘೋಷಣೆ
* ಬ್ಯಾಂಕ್, ಮಾರುಕಟ್ಟೆ, ಹೋಟೆಲ್‌ ಸೇವೆ ಎಂದಿನಂತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.