ರಾಮನಗರ: ಬೆಂಗಳೂರಿನ ಸಿಸಿಬಿ ಇನ್‌ಸ್ಪೆಕ್ಟರ್ ತಿಮ್ಮೇಗೌಡ ಅವರ ಶವ ತಾಲ್ಲೂಕಿನ ಕಗ್ಗಲಿಪುರ ಬಳಿಯ ಖಾಸಗಿ ಜಮೀನಿನ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ.
ಯಾದಗಿರಿಯಲ್ಲಿ ಪಿಎಸ್‌ಐ ಪರಶುರಾಮ್ ಸಾವಿನ ಬೆನ್ನಿಗೇ ಸಿಸಿಬಿ ಇನ್‌ಸ್ಪೆಕ್ಟರ್ ಆತ್ಮಹತ್ಯೆ ಚರ್ಚೆಗೆ ಗ್ರಾಸವಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.
‘ಬೆಳಿಗ್ಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸ್ಥಳೀಯರು ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಕಂಡು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದಾಗ ಅದು ಸಿಸಿಬಿ ಇನ್‌ಸ್ಪೆಕ್ಟರ್ ತಿಮ್ಮೇಗೌಡ ಎಂಬುದು ಗೊತ್ತಾಯಿತು. ಸ್ಥಳದಲ್ಲಿ ಯಾವುದೇ ಮರಣಪತ್ರ ಕಂಡುಬಂದಿಲ್ಲ. ಕುಟುಂಬದವರು ಸಾವಿನ ಕುರಿತು ಶಂಕೆ ವ್ಯಕ್ತಪಡಿಸಿದ್ದು, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದ್ದಾರೆ.
ತಿಳಿದು ಸ್ಥಳಕ್ಕೆ ಬಂದ ತಿಮ್ಮೇಗೌಡ ಅವರ ಸಂಬಂಧಿಯೊಬ್ಬರು, ತಿಮ್ಮೇಗೌಡರ ಸಾವಿನ ಬಗ್ಗೆ ಅನುಮಾನವಿದೆ. ಸ್ಥಳಕ್ಕೆ ಗೃಹ ಸಚಿವರು ಬರುವವರೆಗೆ ಶವವನ್ನು ಸ್ಥಳಾಂತರಿಸಬಾರದು ಎಂದು ಪಟ್ಟು ಹಿಡಿದರು. ಅವರನ್ನು ಸಮಾಧಾನಪಡಿಸಿದ ಪೊಲೀಸರು ಮಧ್ಯಾಹ್ನದ ಹೊತ್ತಿಗೆ ಶವವನ್ನು ಮರದಿಂದ ಇಳಿಸಿ ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಿದರು.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಡಿವೈಎಸ್‌ಪಿ ದಿನಕರ ಶೆಟ್ಟಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚನ್ನಪಟ್ಟಣ ತಾಲ್ಲೂಕಿನ ಕರಲಹಳ್ಳಿಯವರಾದ ತಿಮ್ಮೇಗೌಡ ಅವರು 1998ರಲ್ಲಿ ಪೊಲೀಸ್ ಇಲಾಖೆ ಸೇರಿದರು. ಇನ್‌ಸ್ಪೆಕ್ಟರ್ ಆಗಿ ಬಡ್ತಿ ಪಡೆದಿದ್ದ ಅವರು ಹಾಸನ, ರಾಮನಗರ, ಬೆಂಗಳೂರು ಜಿಲ್ಲೆ ಸೇರಿದಂತೆ ವಿವಿಧೆಡೆ ಕಾರ್ಯನಿರ್ವಹಿಸಿದ್ದರು. ಅವರ ಕುಟುಂಬ ಮೈಸೂರಿನಲ್ಲಿ ನೆಲೆಸಿತ್ತು.
ತಿಮ್ಮೇಗೌಡ ಅವರು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಬಿಡದಿಯಲ್ಲಿದ್ದ ಬಾಡಿಗೆ ಮನೆಯಿಂದಲೇ ಓಡಾಡುತ್ತಿದ್ದರು. ಅವರಿಗೆ ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರಿದ್ದಾರೆ. ಪುತ್ರಿ ಪಿಯು ಓದುತ್ತಿದ್ದಾಳೆ. ಒಬ್ಬ ಪುತ್ರ ಎಂಟನೇ ತರಗತಿಯಲ್ಲಿ, ಮತ್ತೊಬ್ಬ ಪುತ್ರ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸಿಸಿಬಿ ಇನ್‌ಸ್ಪೆಕ್ಟರ್ ತಿಮ್ಮೇಗೌಡ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪತ್ನಿ ನೀಡಿದ ದೂರಿನ ಮೇರೆಗೆ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ– ಕಾರ್ತಿಕ್ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ತಿಮ್ಮೇಗೌಡ ಅವರು 2000–2004ರ ಅವಧಿಯಲ್ಲಿ ಹಾಸನ ಜಿಲ್ಲೆಯ ದುದ್ದ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಗ ಮಹಿಳೆಯೊಬ್ಬರ ಜೊತೆ ಸಂಬಂಧ ಹೊಂದಿದ್ದರು. ಗರ್ಭಿಣಿಯಾಗಿದ್ದ ಆಕೆಯನ್ನು ಮದುವೆಯಾಗಲು ನಿರಾಕರಿಸಿದಾಗ ಮಹಿಳೆ 2004ರಲ್ಲಿ ಹಾಸನ ನಗರ ಪೊಲೀಸ್ ಠಾಣೆಗೆ ದೂರ ಕೊಟ್ಟಿದ್ದರು. ತಿಮ್ಮೇಗೌಡ ವಿರುದ್ಧ ನಂಬಿಸಿ ವಂಚನೆ ಹಾಗೂ ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ಕಡೆಗೆ ಡಿಎನ್‌ಎ ಪರೀಕ್ಷೆ ಕೂಡ ನಡೆದು ವರದಿ ತಿಮ್ಮೇಗೌಡರಿಗೆ ವ್ಯತಿರಿಕ್ತವಾಗಿ ಬಂದಿತ್ತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿ ಮತ್ತೆ ಕೆಳಹಂತದ ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಾಗಿತ್ತು. ಇವರ ವಿರುದ್ಧ ಅತ್ಯಾಚಾರ ಆರೋಪವನ್ನು ಸೇರಿಸುವಂತೆ ಕೋರ್ಟ್ ಸೂಚಿಸಿತ್ತು. ಹಾಸನದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಜುಲೈನಲ್ಲಿ ನಡೆದಿದ್ದ ಪ್ರಕರಣದ ವಿಚಾರಣೆಗೆ ತಿಮ್ಮೇಗೌಡ ಹಾಜರಾಗಿದ್ದರು. ಆಗಸ್ಟ್ 31ಕ್ಕೆ ಪ್ರಕರಣದ ವಿಚಾರಣೆ ನಿಗದಿಯಾಗಿತ್ತು. ಇದರಿಂದ ಕುಗ್ಗಿದ್ದ ತಿಮ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನಗಳಿವೆ ಎಂದು ಮೂಲಗಳು ತಿಳಿಸಿವೆ. ಒತ್ತಡವಿತ್ತೇ?: ಸಿಸಿಬಿಯಲ್ಲಿದ್ದ ತಿಮ್ಮೇಗೌಡ ಇತ್ತೀಚೆಗೆ ಅತ್ಯಂತ ಮಹತ್ವದ ಪ್ರಕರಣವೊಂದರಲ್ಲಿ ವಕೀಲ ಸೇರಿದಂತೆ ಇಬ್ಬರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಅವರ ಮೇಲೆ ಪ್ರಭಾವಿಗಳಿಂದ ಏನಾದರೂ ಒತ್ತಡ ಇತ್ತೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.