ರಾಮನಗರ: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯ ಟೋಲ್ ದರವನ್ನು 15 ದಿನದಲ್ಲೇ ಏರಿಕೆ ಮಾಡಲಾಗಿದೆ.
ನಾಳೆಯಿಂದಲೇ (ಏಪ್ರಿಲ್ 1) ಈ ಪರಿಷ್ಕೃತ ದರವು ಜಾರಿಗೆ ಬರಲಿದೆ. ಕಾರ್, ವ್ಯಾನ್, ಜೀಪ್‌ಗಳ ಏಕಮುಖ ಟೋಲ್ ಅನ್ನು ₹135ರಿಂದ ₹165ಕ್ಕೆ ಏರಿಸಲಾಗಿದೆ. ದ್ವಿಮುಖ ಸಂಚಾರ ದರವು ₹205ರಿಂದ ₹250ಕ್ಕೆ ಏರಿಕೆಗೊಂಡಿದೆ. ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್ ₹220ರಿಂದ ₹270ಕ್ಕೆ ಹಾಗೂ ದ್ವಿಮುಖ ಸಂಚಾರಕ್ಕೆ ₹405 (₹75 ಹೆಚ್ಚಳ) ನಿಗದಿ ಆಗಿದೆ.
ಟ್ರಕ್, ಬಸ್, ಎರಡು ಆಕ್ಸೆಲ್ ವಾಹನಗಳ ಏಕಮುಖ ಟೋಲ್ ಬರೋಬ್ಬರಿ ₹565ಕ್ಕೆ ಏರಿಕೆ ಆಗಿದೆ (₹105 ಹೆಚ್ಚಳ). ದ್ವಿಮುಖ ಸಂಚಾರಕ್ಕೆ ₹850 ನಿಗದಿಪಡಿಸಲಾಗಿದೆ (₹ 160 ಹೆಚ್ಚಳ).
3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ದರವು ₹615 (₹115 ಏರಿಕೆ) ಹಾಗೂ ದ್ವಿಮುಖ ಸಂಚಾರಕ್ಕೆ ₹925 (₹225 ಹೆಚ್ಚಳ) ಏರಿದೆ. ಭಾರಿ ವಾಹನಗಳ ಏಕಮುಖ ಟೋಲ್ ₹885 (₹165 ಹೆಚ್ಚಳ), ದ್ವಿಮುಖ ಸಂಚಾರಕ್ಕೆ ₹1,330 (₹250 ಹೆಚ್ಚಳ) ನಿಗದಿ ಆಗಿದೆ. 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳ ದರವು ₹1,080 (₹200 ಹೆಚ್ಚಳ) ಹಾಗೂ ದ್ವಿಮುಖ ಸಂಚಾರಕ್ಕೆ ₹1,620 (₹305 ಏರಿಕೆ) ನಿಗದಿ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಇದೇ ಮಾರ್ಚ್ 12ರಂದು ಈ ಹೆದ್ದಾರಿಯನ್ನು ಉದ್ಘಾಟಿಸಿದ್ದರು. ಮಾ. 14ರಿಂದ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಮಿಣಕಿ ಹಾಗೂ ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಆರಂಭಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.