ADVERTISEMENT

ಬೆಂಗಳೂರು–ಮೈಸೂರು ಹೆದ್ದಾರಿ: ಜಿಪಿಎಸ್ ಆಧರಿತ ಟೋಲ್ ವ್ಯವಸ್ಥೆ ಶೀಘ್ರ!

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಜಾರಿಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 20:27 IST
Last Updated 8 ಜನವರಿ 2024, 20:27 IST
ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಶೇಷಗಿರಿಹಳ್ಳಿಯಲ್ಲಿರುವ ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್ ಪ್ಲಾಜಾ
ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಶೇಷಗಿರಿಹಳ್ಳಿಯಲ್ಲಿರುವ ಬೆಂಗಳೂರು-ಮೈಸೂರು ಹೆದ್ದಾರಿಯ ಟೋಲ್ ಪ್ಲಾಜಾ   

ರಾಮನಗರ: ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು–ಮೈಸೂರು ಹೆದ್ದಾರಿ 275ರಲ್ಲಿ ಸಂಚರಿಸುವ ವಾಹನ ಸವಾರರು ಇನ್ನು ಮುಂದೆ ಹೆದ್ದಾರಿಯಲ್ಲಿ ಎಷ್ಟು ದೂರ ಸಂಚರಿಸುತ್ತಾರೊ ಅಷ್ಟು ದೂರಕ್ಕಷ್ಟೇ ಟೋಲ್ ಪಾವತಿಸುವ ವ್ಯವಸ್ಥೆ ಸದ್ಯದಲ್ಲೇ ಜಾರಿಗೆ ಬರಲಿದೆ.

ಹೌದು, ಹೆದ್ದಾರಿಯಲ್ಲಿ ಜಿಪಿಎಸ್ ತಂತ್ರಜ್ಞಾನ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂದಾಗಿದೆ. ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಸುಧಾರಣೆ ಜೊತೆಗೆ ಸಂಚಾರ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಸಚಿವಾಲಯ ಇಂತಹದ್ದೊಂದು ಹೆಜ್ಜೆ ಇಟ್ಟಿದೆ.

ಜಿಪಿಎಸ್ ಸಾಧನ ಕಡ್ಡಾಯ: ‘ಹೊಸ ವ್ಯವಸ್ಥೆಯು ಈ ವರ್ಷದಿಂದಲೇ ಪ್ರಾಯೋಗಿಕವಾಗಿ ಹೆದ್ದಾರಿಯಲ್ಲಿ ಜಾರಿಗೆ ಬರಲಿದೆ. ಇದಕ್ಕಾಗಿ, ಉಪಗ್ರಹದೊಂದಿಗೆ ಸಂಪರ್ಕ ಹೊಂದಿರುವ ಜಿಪಿಎಸ್ ಸಾಧನವನ್ನು ಸವಾರರು ಕಡ್ಡಾಯವಾಗಿ ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ADVERTISEMENT

‘ಜಿಪಿಎಸ್ ಸಾಧನದಿಂದ ವಾಹನದ ಹೆದ್ದಾರಿ ಪ್ರವೇಶ ಮತ್ತು ನಿರ್ಗಮನವು ಸ್ಥಳದ ಮಾಹಿತಿ ಸಮೇತ ದಾಖಲಾಗಲಿದ್ದು, ಸಂಚಾರದ ಅಂತರಕ್ಕೆ ಅನುಗುಣವಾಗಿ ವಾಹನದ ಮಾಲೀಕನ ಬ್ಯಾಂಕ್ ಖಾತೆಯಿಂದ ಟೋಲ್ ಕಡಿತವಾಗಲಿದೆ. ಇದರಿಂದಾಗಿ ಕಡಿಮೆ ದೂರ ಸಂಚರಿಸುವ ಸವಾರರು ಹೆಚ್ಚು ಟೋಲ್ ಪಾವತಿಸುವ ವ್ಯವಸ್ಥೆ ಕೊನೆಯಾಗಲಿದೆ’ ಎಂದು ಮೂಲಗಳು ಹೇಳಿವೆ.

ಮೂರು ವರ್ಷಗಳ ಹಿಂದೆ ಟೋಲ್‌ ಪ್ಲಾಜಾಗಳಲ್ಲಿ ವಾಹನಗಳ ಕಾಯುವಿಕೆಯ ಅವಧಿ ಎಂಟು ನಿಮಿಷ ಇತ್ತು. ಫಾಸ್‌ಟ್ಯಾಗ್‌ ಜಾರಿಗೆ ಬಂದ ನಂತರ ಅದು 48 ಸೆಕೆಂಡ್‌ಗೆ ಇಳಿದಿತ್ತು. ಆದರೂ, ಹಬ್ಬ ಮತ್ತು ವಾರಾಂತ್ಯದಲ್ಲಿ ಟೋಲ್‌ ಪ್ಲಾಜಾಗಳಲ್ಲಿ ವಾಹನಗಳ ದಟ್ಟಣೆ ಸಾಮಾನ್ಯವಾಗಿದೆ. ಹೊಸ ವ್ಯವಸ್ಥೆಯಿಂದ ದಟ್ಟನೆ ತಪ್ಪಲಿದೆ.

ದೇಶದ ಹೆದ್ದಾರಿಗಳಲ್ಲಿ ಜಿಪಿಎಸ್ ಆಧರಿಸಿ ಟೋಲ್ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ತರುವ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇದೇ ಡಿಸೆಂಬರ್‌ನಲ್ಲಿ ಸುಳಿವು ನೀಡಿದ್ದರು.

‘ಅಧಿಕೃತ ಆದೇಶ ಬಂದಿಲ್ಲ’

‘ಹೆದ್ದಾರಿಗಳಲ್ಲಿ ಜಿಪಿಎಸ್ ತಂತ್ರಜ್ಞಾನ ಆಧರಿಸಿ ಟೋಲ್ ಸಂಗ್ರಹಿಸುವ ಬಗ್ಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಪ್ರಸ್ತಾಪ ಮಾಡಿದ್ದರು. ಆದರೆ ಬೆಂಗಳೂರು–ಮೈಸೂರು ಟೋಲ್ ಪ್ಲಾಜಾದಲ್ಲಿ ಹೊಸ ವ್ಯವಸ್ಥೆ ಜಾರಿ ಕುರಿತು ನಮಗೆ ಇದುವರೆಗೂ ಯಾವುದೇ ಅಧಿಕೃತ ಆದೇಶ ಅಥವಾ ಸೂಚನೆ ಬಂದಿಲ್ಲ. ಕೇಂದ್ರೀಕೃತ ವ್ಯವಸ್ಥೆ ಮೂಲಕ ಇದನ್ನು ನಿರ್ವಹಿಸುವ ಸಾಧ್ಯತೆ ಇದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೆಂಗಳೂರು–ಮೈಸೂರು ಹೆದ್ದಾರಿಯ ಯೋಜನಾ ನಿರ್ದೇಶಕರ ಕಚೇರಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.