ರಾಮನಗರ: ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಅವರೊಂದಿಗೆ ಬೆಂಗಳೂರು- ಮೈಸೂರು ದಶಪಥ ಎಕ್ಸ್‌ಪ್ರೆಸ್ ಹೆದ್ದಾರಿಯ ಕುಂಬಳಗೂಡು ಬಳಿಯ ಕಣಮಿಣಿಕಿ ಟೋಲ್ ಪ್ಲಾಜಾ ಸಿಬ್ಬಂದಿ ಏಕವಚನದಲ್ಲಿ ವಾಗ್ವಾದ ನಡೆಸಿದ ಘಟನೆ ಇತ್ತೀಚೆಗೆ ನಡೆದಿದೆ.
ನರೇಂದ್ರ ಸ್ವಾಮಿ ಅವರು ಭಾನುವಾರ (ಜೂನ್ 4) ಬೆಂಗಳೂರಿನಿಂದ ಮಳವಳ್ಳಿ ಕಡೆಗೆ ಹೊರಟಿದ್ದರು. ಟೋಲ್ ಪ್ಲಾಜಾದಲ್ಲಿ ಅವರ ಕಾರನ್ನು ತಡೆದ ಸಿಬ್ಬಂದಿ, ಪಾಸ್ ಇದ್ದರೂ ಮುಂದಕ್ಕೆ ಬಿಡಲಿಲ್ಲ. ಈ ಕುರಿತು, ಪ್ರಶ್ನೆ ಮಾಡಿದ ಕಾರು ಚಾಲಕ ಹಾಗೂ ಶಾಸಕರೊಂದಿಗೆ ಏಕವಚನದಲ್ಲಿ ಮಾತನಾಡಿದ್ದಾರೆ.
ಈ ಕುರಿತು 'ಪ್ರಜಾವಾಣಿ' ಜೊತೆ ಮಾತನಾಡಿದ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಕಾರನ್ನು ತಡೆದ ಟೋಲ್ ಸಿಬ್ಬಂದಿ ಅನಗತ್ಯವಾಗಿ ನಮ್ಮೊಂದಿಗೆ ವಾಗ್ವಾದ ನಡೆಸಿದರು. ಕಾರು ಬಿಡದೆ ದುರಹಂಕಾರದಿಂದ ವರ್ತಿಸಿದರು. ಗೌರವದಿಂದ ಮಾತನಾಡಿ ಎಂದಿದ್ದಕ್ಕೆ, ನೀ ಯಾರಾದರೇನು, ನಾನಿಲ್ಲಿ ಮ್ಯಾನೇಜರ್. ನಿನ್ನ ಪಾಸ್ ತೋರಿಸು ಎಂದು ಏಕವಚನದಲ್ಲಿ ಹೇಳಿದರು' ಎಂದು ಘಟನೆಯನ್ನು ಹಂಚಿಕೊಂಡರು.
'ಘಟನೆಯನ್ನು ಸ್ಥಳೀಯ ಪೊಲೀಸರ ಗಮನಕ್ಕೆ ತಂದೆ. ಯಾರಾದರೂ ಬರಲಿ. ನಾವು ನೋಡದ ಪೊಲೀಸರಾ ಎಂದರು. ಜನಪ್ರತಿನಿಧಿಗಳ ಜೊತೆಯೇ ಗೌರವದಿಂದ ವರ್ತಿಸದ ಸಿಬ್ಬಂದಿ, ಇನ್ನು ಸಾರ್ವಜನಿಕರ ಜೊತೆ ಯಾವ ರೀತಿ ವರ್ತಿಸುತ್ತಾರೆ ಎಂದು ಊಹಿಸಿಕೊಳ್ಳಿ. ಟೋಲ್ ನಲ್ಲಿ ಅತಿ ಗಣ್ಯರು ತೆರಳಲು ಪ್ರತ್ಯೇ ಮಾರ್ಗವಿಲ್ಲ. ಈ ಬಗ್ಗೆ ಸ್ಪೀಕರ್ ಗೆ ಪತ್ರ ಬರೆಯಲಾಗುವುದು' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.