ADVERTISEMENT

Bengaluru-Mysuru Expressway| ಬೈಪಾಸ್‌ ರಸ್ತೆಯಲ್ಲಿ ಸುರಕ್ಷತೆಯೇ ಸವಾಲು

ಇನ್ನೂ ಆರಂಭವಾಗದ ಹೈವೆ ಗಸ್ತು ವ್ಯವಸ್ಥೆ: ಸರ್ವೀಸ್‌ ರಸ್ತೆಯೂ ಅಪೂರ್ಣ

ಆರ್.ಜಿತೇಂದ್ರ
Published 10 ಮಾರ್ಚ್ 2023, 5:18 IST
Last Updated 10 ಮಾರ್ಚ್ 2023, 5:18 IST
ರಾಮನಗರ– ಚನ್ನಪಟ್ಟಣ ನಡುವಿನ ಬೈಪಾಸ್‌ ಹೆದ್ದಾರಿ
ರಾಮನಗರ– ಚನ್ನಪಟ್ಟಣ ನಡುವಿನ ಬೈಪಾಸ್‌ ಹೆದ್ದಾರಿ   

ರಾಮನಗರ: ಬೆಂಗಳೂರು–ಮೈಸೂರು ನಡುವಿನ ಹತ್ತು ಪಥಗಳ ಹೆದ್ದಾರಿಯಲ್ಲಿ ಹೊಸದಾಗಿ ನಿರ್ಮಿಸಲಾದ ಬೈಪಾಸ್‌ಗಳಲ್ಲಿ ಸುರಕ್ಷತೆಯೇ ಸವಾಲಾಗಿದೆ.

ಒಟ್ಟು 117 ಕಿ.ಮೀ. ಉದ್ದದ ದಶಪಥ ರಸ್ತೆಯಲ್ಲಿ 52 ಕಿ.ಮೀ. ಉದ್ದದಷ್ಟು ಬೈಪಾಸ್‌ ರಸ್ತೆಯನ್ನು ಹೊಸದಾಗಿ ನಿರ್ಮಿಸಲಾಗಿದೆ. ಇದಲ್ಲದೆ ಕುಂಬಳಗೋಡು ಹಾಗೂ ಮದ್ದೂರು ಪಟ್ಟಣದ ಮೇಲೆ ಎಲಿವೇಟೆಡ್ ಕಾರಿಡಾರ್‌ಗಳು ಹಾದುಹೋಗಿವೆ. ನಗರ–ಹಳ್ಳಿಗಳಿಗೆ ಸಂಪರ್ಕವೇ ಇಲ್ಲದಂತೆ ನಿರ್ಮಿಸಲಾದ ಈ ಹೊಸ ಬೈಪಾಸ್‌ಗಳಲ್ಲಿ ಜನವಸತಿ ವಿರಳವಾಗಿದೆ.

ರಾತ್ರಿ ಹೊತ್ತು ಸಂಚಾರ ಕೈಗೊಳ್ಳಲು ಪ್ರಯಾಣಿಕರು ಹೆದರುತ್ತಿದ್ದಾರೆ. ಕೆಲವು ಕಡೆಗಳಲ್ಲಿ ವಾಹನಗಳನ್ನು ಅಡ್ಡಗಟ್ಟುವ ಪ್ರಯತ್ನಗಳೂ ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿವೆ. ಮಂಡ್ಯ ಜಿಲ್ಲೆಯ ಹಳೇ ಬೂದನೂರು, ಇಂಡುವಾಳು, ರಾಮನಗರದ ರಾಮದೇವರ ಬೆಟ್ಟ ಮೊದಲಾದ ಕಡೆಗಳಲ್ಲಿ ಕತ್ತಲು ಇರುವ ಕಡೆಗಳಲ್ಲಿ ಈ ರೀತಿಯ ಪ್ರಯತ್ನಗಳು ನಡೆದಿವೆ ಎಂದು ವಾಹನ ಸವಾರರು ದೂರುತ್ತಾರೆ.

ADVERTISEMENT

ಸುರಕ್ಷತೆಯ ಕೊರತೆ ಕಾರಣಕ್ಕೆ ಹೊಸ ರಸ್ತೆಗಳಲ್ಲಿ ರಾತ್ರಿ ಹೊತ್ತು ಸಂಚಾರ ಕೈಗೊಳ್ಳಲು ವಾಹನ ಸವಾರರು ಹಿಂದೇಟು ಹಾಕುತ್ತಿದ್ದು, ಹಳೇ ಹೆದ್ದಾರಿಯತ್ತಲೇ ಮುಖ ಮಾಡುತ್ತಿದ್ದಾರೆ. ಬೈಪಾಸ್‌ಗಳಲ್ಲಿ ಸಂಪೂರ್ಣ ಕತ್ತಲು ಆವರಿಸಿದ್ದು, ಎಲ್ಲಿಯೂ ಬೀದಿದೀಪಗಳ ವ್ಯವಸ್ಥೆ ಇಲ್ಲ. ಹೀಗಾಗಿ ರಾಮನಗರ, ಚನ್ನಪಟ್ಟಣ, ಮಂಡ್ಯದಂತಹ ನಗರಗಳಲ್ಲಿ ಹಳೇ ಹೆದ್ದಾರಿಯಲ್ಲಿ ಹಗಲಿಗಿಂತ ರಾತ್ರಿ
ಹೊತ್ತು ವಾಹನಗಳ ಸಂಚಾರ ಹೆಚ್ಚುತ್ತಿದೆ.

ಗಸ್ತಿನ ಕೊರತೆ: ಹೆದ್ದಾರಿ ಉದ್ಘಾಟನೆಗೆ ಮುನ್ನವೇ ಬೈಪಾಸ್‌ಗಳಲ್ಲಿ ವಾಹನಗಳ ಓಡಾಟಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅವಕಾಶ ಕಲ್ಪಿಸಿದೆ. ಆದರೆ, ಅದಕ್ಕೆ ತಕ್ಕಂತೆ ಮೂಲಸೌಕರ್ಯವನ್ನು ಮಾತ್ರ ಕಲ್ಪಿಸಿಲ್ಲ.

ಸದ್ಯ ಎರಡು ಕಿ.ಮೀ.ಗೆ ಒಂದರಂತೆ ಅಲ್ಲಲ್ಲಿ ಕೃತಕ ಬುದ್ಧಿಮತ್ತೆ ಸಾಮರ್ಥ್ಯವುಳ್ಳ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಇದರೊಟ್ಟಿಗೆ ಹೈವೆ ಪೆಟ್ರೋಲಿಂಗ್‌ ಸಹ ಆರಂಭ ಆಗಬೇಕಿತ್ತು. ಆದರೆ, ಅದರತ್ತ ಪ್ರಾಧಿಕಾರ ಗಮನ ನೀಡಿಲ್ಲ. ಪೊಲೀಸರನ್ನು ಪ್ರಶ್ನಿಸಿದರೆ ಪ್ರಾಧಿಕಾರದತ್ತ ಬೆಟ್ಟು ಮಾಡುತ್ತಾರೆ. ಪೊಲೀಸರ ಸಲಹೆಯ ನಡುವೆಯೂ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಬೈಪಾಸ್‌ಗಳಲ್ಲಿ ವಾಹನಗಳ ಗಸ್ತು ವ್ಯವಸ್ಥೆ ಮಾಡಿಲ್ಲ.

ಸೌಕರ್ಯ ಮರೀಚಿಕೆ

ಕಳೆದ ವರ್ಷ ಸೆಪ್ಟೆಂಬರ್‌ನಿಂದಲೇ ಕೆಲವು ಬೈಪಾಸ್‌ಗಳಲ್ಲಿ ವಾಹನ ಸಂಚಾರ ಆರಂಭಗೊಂಡಿದ್ದರೂ ಇನ್ನೂ ಮೂಲ ಸೌಕರ್ಯ ಕಲ್ಪಿಸಿಲ್ಲ. ಬೈಪಾಸ್ ಮಧ್ಯೆ ವಾಹನ ಕೆಟ್ಟು ನಿಂತರೆ, ಪೆಟ್ರೋಲ್‌–ಡೀಸೆಲ್‌ ಖಾಲಿ ಆದರೆ ಕಡುಕಷ್ಟ. ಹೊಸ ರಸ್ತೆಗಳಲ್ಲಿ ಎಲ್ಲಿಯೂ ಪೆಟ್ರೋಲ್‌ ಬಂಕ್‌ಗಳು ಸಿಗುವುದಿಲ್ಲ. ಟೈರ್‌ಗಳು ಪಂಕ್ಚರ್‌ ಆದರೂ ಕಷ್ಟ. ಆರು ಪಥಗಳ ಎಕ್ಸ್‌ಪ್ರೆಸ್‌ ವೇ ನಿಯಂತ್ರಿತ ಕಾರಿಡಾರ್‌ ಆಗಿದ್ದು, ತುರ್ತು ಸಂದರ್ಭಗಳಲ್ಲಿ ವಾಹನಗಳು ಸರ್ವೀಸ್‌ ರಸ್ತೆಗೆ ಹೊರಳಿಕೊಳ್ಳಲು ಅವಕಾಶ ಇಲ್ಲ.

ಇನ್ನೂ ಕೆಲವು ಕಡೆಗಳಲ್ಲಿ ಸರ್ವೀಸ್ ರಸ್ತೆಗಳ ನಿರ್ಮಾಣ ಕಾರ್ಯ ನಡೆದಿದೆ. ಅಧಿಕಾರಿಗಳು ಹೆದ್ದಾರಿ ಉದ್ಘಾಟನೆಗೆ ಮುನ್ನ ಈ ಕಾಮಗಾರಿಗಳನ್ನು ಮುಗಿಸುವ ತರಾತುರಿಯಲ್ಲಿ ಇದ್ದರೂ ಮುಗಿಯುವ ಸಾಧ್ಯತೆ ಕಡಿಮೆ. ಹೆದ್ದಾರಿ ಬದಿಯಲ್ಲಿ ಕನಿಷ್ಠ ಪೆಟ್ರೋಲ್ ಬಂಕ್, ಶೌಚಾಲಯ, ಹೋಟೆಲ್‌, ಆಸ್ಪತ್ರೆಯಂತಹ ಸೌಕರ್ಯ ಸಿಗಬೇಕು ಎನ್ನುವುದು ಈ ಭಾಗದ ಪ್ರಯಾಣಿಕರ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.