ADVERTISEMENT

ಮಾಗಡಿ: ಭಾರ್ಗಾವತಿ ಕೆರೆಗೆ ಕಾಯಕಲ್ಪ ಎಂದು?

ದೊಡ್ಡಬಾಣಗೆರೆ ಮಾರಣ್ಣ
Published 9 ಡಿಸೆಂಬರ್ 2023, 6:22 IST
Last Updated 9 ಡಿಸೆಂಬರ್ 2023, 6:22 IST
ಮಾಗಡಿ ತಾಲ್ಲೂಕಿನ ಪರಂಗಿ ಚಿಕ್ಕನಪಾಳ್ಯದ ಭಾರ್ಗಾವತಿ ಕೆರೆಯ ವಿಹಂಗಮನೋಟ. (ಸಂಗ್ರಹ ಚಿತ್ರ)
ಮಾಗಡಿ ತಾಲ್ಲೂಕಿನ ಪರಂಗಿ ಚಿಕ್ಕನಪಾಳ್ಯದ ಭಾರ್ಗಾವತಿ ಕೆರೆಯ ವಿಹಂಗಮನೋಟ. (ಸಂಗ್ರಹ ಚಿತ್ರ)   

ಮಾಗಡಿ: ನೇತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಡುವೆಗೆರೆ ಮತ್ತು ಪರಂಗಿ ಚಿಕ್ಕನ ಪಾಳ್ಯದ ನಡುವೆ ಇರುವ ಭಾರ್ಗಾವತಿ ಕೆರೆಗೆ 17 ವರ್ಷಗಳಿಂದ ಒಳಚರಂಡಿ ನೀರು ಹರಿಯುತ್ತಿದ್ದು, ಕೆರೆಯು ಮಲಿನಗೊಂಡಿದೆ. 

2006ರಿಂದ ಮಾಗಡಿ ಪಟ್ಟಣದ ಒಳ ಚರಂಡಿ ಕಲುಷಿತ ನೀರು ಹರಿದು ಕೆರೆಯಲ್ಲಿ 10 ಅಡಿಗಳಷ್ಟು ಕಲುಷಿತ ಸಂಗ್ರಹವಾಗಿದೆ. ಸುತ್ತಲಿನ ಹಳ್ಳಿಗಳ ರೈತರ ಪಾಲಿಗೆ ತವನಿಧಿಯಂತಿದ್ದ ಕೆರೆಯಲ್ಲಿ ಕಲುಷಿತ ಸಂಗ್ರಹವಾಗಿ ಮಲಿನಗೊಂಡಿದೆ. ವಿಷಪೂರಿತ ನೀರು ಜಲಚರಗಳಿಗೆ ಕಂಟಕವಾಗಿದೆ.

ಬಹುಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು. ಕೆರೆಯ ಬಳಿ ಸಕ್ಕಿಂಗ್‌ ಸೆಂಟ್ರರ್‌ ನಿರ್ಮಿಸಲಾಯಿತು. ದೊಡ್ಡ ವಿದ್ಯುತ್‌ ಮೋಟಾರು ಬಳಿಸಿ 15 ಅಡಿ ಎತ್ತರಕ್ಕೆ ಪಂಪ್‌ವೆಲ್‌ನಿಂದ ಕಲುಷಿತ ಮೇಲೆತ್ತಿ ಮೂರು ಕಿ.ಮಿ.ದೂರದ ಬೆಟ್ಟದ ಮೇಲಿನ ಸಕ್ಕಿಂಗ್‌ ಸಂಗ್ರಹ ತೊಟ್ಟಿಗೆ ರವಾನಿಸುವಂತೆ ಅಧಿಕಾರಿಗಳು ಅವೈಜ್ಞಾನಿಕ ಯೋಜನೆ ತಯಾರಿಸಿದರು.

ADVERTISEMENT

ಬೆಂಗಳೂರು ಒಳಚರಂಡಿ ಮಂಡಳಿ ವತಿಯಿಂದ ನಿರ್ಮಿಸಲಾದ ಸಕ್ಕಿಂಗ್ ಸಂಗ್ರಹ ತೊಟ್ಟಿಗೆ ಒಂದು ದಿನವೂ ಪಂಪ್‌ ವೆಲ್‌ನಿಂದ ಕಲುಷಿತ ಮೇಲೆತ್ತಲಿಲ್ಲ. ಮಾಗಡಿಯಿಂದ ರಾಜಕಾಲುವೆಯ ಮೂಲಕ ನಿತ್ಯ ಹರಿದು ಬರುವ ಒಳಚರಂಡಿ ಕಲುಷಿತ ಕೆರೆಗೆ ಸೇರುವುದು ಇಂದಿಗೂ ಮುಂದುವರೆದಿದೆ.

ಹಿನ್ನೆಲೆ: ನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಇಮ್ಮಡಿ ಕೆಂಪೇಗೌಡ, ಗಗನಧಾರ್ಯರಿಂದ ಲಿಂಗದೀಕ್ಷೆ ಪಡೆದು, ಉಡುವೆಗೆರೆಯ ಸಾದ್ವಿ ಭಾರ್ಗಾವತಿಯನ್ನು ಮದುವೆಯಾದರು. ಮುದ್ದಿನ ಮಡದಿಗೆ ಮನವಿಯಂತೆ ಕ್ರಿ.ಶ.1628 ರಲ್ಲಿ ಕಣ್ವ, ಅರ್ಕಾವತಿ, ಕುಮುದ್ವತಿ ನದಿಗಳ ಸಂಗಮ ಸ್ಥಳ ಪರಂಗಿ ಚಿಕ್ಕನಪಾಳ್ಯದ ಬಳಿ ಕೆರೆಯನ್ನು ನಿರ್ಮಿಸಿ, ಕೋಡಿ ಮಲ್ಲೇಶ್ವರ ಗುಡಿ ಕಟ್ಟಿಸಿದ್ದ ಬಗ್ಗೆ ಚಾರಿತ್ರಿಕ ದಾಖಲೆಗಳಿವೆ.

ಹೋರಾಟ: ಭಾರ್ಗಾವತಿ ಕೆರೆಗೆ ಹರಿಯುತ್ತಿರುವ ಒಳಚರಂಡಿ ಕಲುಷಿತ ತಡೆಗಟ್ಟಿ ಕೆರೆಯನ್ನು ಉಳಿಸುವಂತೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ನೇತೃತ್ವದಲ್ಲಿ ಕೆಂಪೇಗೌಡ ಗುರುಮಠ ಜಡೇದೇವರ ಮಠಾಧ್ಯಕ್ಷ ಇಮ್ಮಡಿ ಬಸವರಾಜು ಸ್ವಾಮೀಜಿ ಮತ್ತು ನೇತೇನಹಳ್ಳಿ ಗ್ರಾಮಪಂಚಾಯಿತಿ ಸದಸ್ಯರು, ರೈತರು, ಪರಿಸರವಾದಿಗಳು ಬೃಹತ್‌ ಪ್ರತಿಭಟನೆ ನಡೆಸಿದ್ದರು.

ರಾಜ್ಯ ಪರಿಸರ ಮಂಡಳಿ ಅಧ್ಯಕ್ಷರು ಕೆರೆಗೆ ಭೇಟಿ ನೀಡಿ ಕಲುಷಿತ ನಿಲ್ಲಿಸುವ ಭರವಸೆ ನೀಡಿದ್ದರು.ಆದರೆ, ಅದು ಭರವಸೆಯಾಗಿಯೇ ಉಳಿಯಿತು. ಜಿಲ್ಲಾಕೇಂದ್ರದಿಂದ ಕೇವಲ 36 ಕಿ.ಮಿ.ದೂರದಲ್ಲಿರುವ ಈ ಸಿಹಿನೀರಿನ ಕೆರೆಯತ್ತ ಜಿಲ್ಲಾಡಳಿತ ಗಮನಿಸಲೇ ಇಲ್ಲ. ದೂರದ ಹೇಮಾವತಿ ನದಿ ನೀರನ್ನು ಬಹುಕೋಟಿ ಖರ್ಚು ಮಾಡಿ ತಾಲ್ಲೂಕಿನ ಕೆರೆಗಳಿಗೆ ಹರಿಸುವುದಾಗಿ ವೇದಿಕೆ ಮೇಲೆ ಭಾಷಣ ಮಾಡುವ ಜನಪ್ರತಿನಿಧಿಗಳು ಮಾಗಡಿಯ ಭಾರ್ಗಾವತಿ ಕೆರೆಗೆ ವಿಷಮಯವಾಗಿರುವುದನ್ನು ತಡೆಯಲು ಮುಂದಾಗದಿರುವುದು ವಿಪರ್ಯಾಸ.

ಮಾಗಡಿ ತಾಲ್ಲೂಕಿನ ಭಾರ್ಗಾವತಿ ಕೆರೆಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯ
ಮಾಗಡಿ ಪಟ್ಟಣದ ಒಳಚರಂಡಿ ಕಲುಷಿತ ಭಾರ್ಗಾವತಿ ಕೆರೆಗೆ ಹರಿಯುತ್ತಿರುವುದು
ಕೆರೆಗೆ ಕೈ ಇಟ್ಟರೆ ಬೊಬ್ಬೆ ನವೆ...
ಈ ಹಿಂದೆ ಭಾರ್ಗಾವತಿ ಕೆರೆಯಲ್ಲಿ ವರ್ಷಪೂರ್ತಿ ನೀರು ತುಂಬಿರುತ್ತಿತ್ತು. ಸುಮಾರು 189 ಎಕರೆ ವಿಸ್ತೀರ್ಣದಲ್ಲಿ ಸಂಗ್ರಹವಾಗುತ್ತಿದ್ದ ನೀರು 176 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಭತ್ತ ಕಬ್ಬು ರಾಗಿ ತರಕಾರಿ ಬಾಳೆ ಬೆಳೆಯುತ್ತಿದ್ದರು. ಪರಂಗಿ ಚಿಕ್ಕನ ಪಾಳ್ಯದಲ್ಲಿ ನೂರಾರು ಬೆಸ್ತರ ಕುಟುಂಬಗಳು ಕೆರೆಯಲ್ಲಿ ಮೀನು ಮರಿ ಸಾಕಿ ಜೀವನೋಪಾಯ ಮಾಡುತ್ತಿದ್ದರು ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್‌ ತಿಳಿಸಿದರು. ಆದರೆ ಇಂದು ಕೆರೆಯ ನೀರಿಗೆ ಕೈ ಇಟ್ಟರೆ ಬೊಬ್ಬೆಗಳು ಏಳುತ್ತಿವೆ. ನವೆಯಾಗುತ್ತಿದೆ. ಕೆರೆಯಲ್ಲಿನ ಮೀನುಗಳು ಸಾಯುತ್ತಿವೆ. ಕೆರೆಯ ಸುತ್ತಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಕೊಳವೆಬಾವಿ ಕೊರೆದರೆ ಕಲುಷಿತ ದುರ್ಗಂಧಯುಕ್ತ ನೀರು ಬರುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.