ಕನಕಪುರ: ‘ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶೈಕ್ಷಣಿಕ ಸವಲತ್ತು ಕಲ್ಪಿಸಲಾಗುವುದು. ಜೊತೆಗೆ, ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಸಿದ್ಧ’ ಎಂದು ಐ ವ್ಯಾಲ್ಯೂ ಇನ್ಫೊ ಸಲ್ಯೂಷನ್ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣರಾಜ್ ಶರ್ಮ ತಿಳಿಸಿದರು.
ತಾಲ್ಲೂಕಿನ ಸಾತನೂರು ಹೋಬಳಿಯ ವೆಂಕಟರಾಯನದೊಡ್ಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ರೋಟರಿ ಬೆಂಗಳೂರು ರಾಜಮಹಲ್ ವಿಲಾಸ್, ರೋಟರಿ ಎಚ್‌ಎಲ್‌ಆರ್, ರೋಟರಿ ಕನಕಪುರ ಹಾಗೂ ಐ ವ್ಯಾಲ್ಯೂ ಇನ್ಫೊ ಸಲ್ಯೂಷನ್ ಕಂಪನಿ ಸಹಯೋಗದಡಿ ಶುಕ್ರವಾರ ನಡೆದ ಉಚಿತ ಬೈಸಿಕಲ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ ಸ್ಪರ್ಧೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ಗ್ರಾಮೀಣ ಮಕ್ಕಳನ್ನು ಸಿದ್ಧಗೊಳಿಸಬೇಕಿದೆ. ಗ್ರಾಮೀಣ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ನಾವೆಲ್ಲರೂ ಹೊಣೆಗಾರಿಕೆಯಿಂದ ಕೆಲಸ ಮಾಡಬೇಕಿದೆ. ಅವರಿಗೆ ಅಗತ್ಯ ಸೌಕರ್ಯ ಕಲ್ಪಿಸಿಕೊಡಬೇಕಿದೆ ಎಂದರು.
ಕನಕಪುರ ರೋಟರಿ ಅಧ್ಯಕ್ಷ ಆನಮಾನಹಳ್ಳಿ ನಟೇಶ್ ಮಾತನಾಡಿ, ರೋಟರಿ ಸಂಸ್ಥೆಯು ಸೇವಾ ಚಟುವಟಕೆ ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡುತ್ತಿದೆ. ಸರ್ಕಾರಿ ಶಾಲೆಯಲ್ಲಿ ಓದುವ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ತಿಳಿಸಿದರು.
ಪ್ರೌಢಶಾಲೆಯಲ್ಲಿ 35 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲರಿಗೂ ಬೈಸಿಕಲ್ ನೀಡಿದ್ದಾರೆ. ಇದೇ ಶಾಲೆಯಲ್ಲಿ ಐ ವ್ಯಾಲ್ಯೂ ಸಂಸ್ಥೆಯ ಸಹಯೋಗದಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು ಎಂದು ಹೇಳಿದರು.
ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಎಲ್ಲಾ ಮಕ್ಕಳಿಗೆ ಬೈಸಿಕಲ್‌ನ ಅವಶ್ಯಕತೆಯಿದೆ. ಕೆಲವು ಮಕ್ಕಳಿಗೆ ಆರ್ಥಿಕ ಪ್ರೋತ್ಸಾಹ ಬೇಕಿದೆ. ಶಾಲೆಗಳಲ್ಲಿ ಮೂಲ ಸೌಕರ್ಯದ ಕೊರತೆಯಿದೆ ಎಂದರು.
ಎಫ್‌ಎಸ್‌ಐಟಿ, ಟಿಸಿಎಸ್ ಹೆಡ್ ಟೆಕ್ನಾಲಜಿಯ ರವೀಂದ್ರ ನವದ ಪಿ.ಎಸ್., ಉದಯ್ ಭಾಸ್ಕರ್, ರೋಟರಿ ಅಧ್ಯಕ್ಷ ಕೆ.ಸಿ. ನಾಗಭೂಷಣ ರೆಡ್ಡಿ, ಶಂಕರ್ ಸುಬ್ರಮಣಿಯನ್ ವಿ.ಟಿ. ಸರಂಗನ್, ಟೆಕ್ ಕಮಿಟಿಯ ಕಾರ್ಯದರ್ಶಿಗಳಾದ ಸಂತೋಷ್‌ಕುಮಾರ್, ಜಯಪಾಲ್ ರೆಡ್ಡಿ, ವೆಂಕಟೇಶ್, ರಾಜೀವ್ ಥಯ್‌ಕಟ್, ಚೂಡಳ್ಳಿ ಪಿಡಿಒ ಅರ್ಜುನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.