ಬಿಡದಿ: ‘ಬೆಳೆಯುವ ಸಿರಿ ಮೊಳಕೆಯಲ್ಲಿ...’ ಎಂಬ ಮಾತಿನಂತೆ, ಇಲ್ಲಿನ ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬರು ಶಾಲಾವಧಿಯಲ್ಲೇ ಎತ್ತರ ಜಿಗಿತ ಮತ್ತು ಓಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಆ ಮೂಲಕ, ತನ್ನ ಊರಿಗೆ ಮತ್ತು ಓದಿದ ಶಾಲೆಗೆ ಕೀರ್ತಿ ತಂದಿದ್ದಾಳೆ.
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ವಾಜರಹಳ್ಳಿಯ ಸಂಜೀವ ಮೂರ್ತಿ ಮತ್ತು ಚಂದ್ರಕಲಾ ಅವರ ಪುತ್ರಿಯಾದ ನಿತ್ಯಾ ಎಸ್. ಕ್ರೀಡೆಯಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿನಿ. ಸದ್ಯ, ಕುಂಬಳಗೋಡಿನ ಡಾನ್ ಬೋಸ್ಕೊ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ನಿತ್ಯಾ, ಕ್ರೀಡಾ ಸಾಧನೆ ಮೂಲಕವೇ ತನ್ನ ಊರು ಮತ್ತು ಶಾಲೆಗೆ ಪರಿಚಿತ. ಜೊತೆಗೆ, ಓದಿನಲ್ಲೂ ಛಾಪು ಮೂಡಿಸಿದ್ದಾಳೆ.
ಶ್ರೀ ಬಸವೇಶ್ವರ ಶಾಲೆಯಲ್ಲಿ ಪ್ರೌಢಶಾಲೆಯಲ್ಲಿ ಎಸ್ಎಸ್‌ಎಲ್‌ಸಿವರೆಗೆ ಓದಿರುವ ನಿತ್ಯಾ, ಶಾಲಾವಧಿಯಿಂದಲೇ ಕ್ರೀಡಾಸಕ್ತಿ ಬೆಳೆಸಿಕೊಂಡಳು. ಆರಂಭದಲ್ಲಿ ಅಥ್ಲೆಟಿಕ್ಸ್ ಮತ್ತು ಗುಂಪು ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದ ನಿತ್ಯಾ, ನಂತರ ಎತ್ತರ ಜಿಗಿತ ಮತ್ತು ಓಟದಲ್ಲಿ ಭಾಗವಹಿಸತೊಡಗಿದಳು. ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಪ್ರಥಮ ಸ್ಥಾನದ ಸಾಧನೆ ಮಾಡಿ, ನಂತರ ರಾಜ್ಯಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದಳು.
ಎತ್ತರ ಜಿಗಿತದಲ್ಲಿ ರಾಜ್ಯಮಟ್ಟಕ್ಕೆ: ‘ಐದನೇ ತರಗತಿಯಿಂದಲೇ ಕ್ರೀಡೆಯತ್ತ ಆಸಕ್ತಿ ಬೆಳೆಸಿಕೊಂಡೆ. ಎತ್ತರ ಜಿಗಿತ, ಉದ್ದ ಜಿಗಿತ, ವಾಲಿಬಾಲ್, ಕೊಕ್ಕೆ, ಓಟದಲ್ಲಿ (100 ಮೀ., 400 ಮೀ., 3 ಸಾವಿರ ಮೀಟರ್) ಭಾಗವಹಿಸುತ್ತಾ ಬಂದೆ. ಎತ್ತರ ಜಿಗಿತದಲ್ಲಿ ನನ್ನ ಸಾಮರ್ಥ್ಯ ಗುರುತಿಸಿದ ಜ್ಞಾನ ವಿಕಾಸ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಿವರುದ್ರಪ್ಪ ಅವರು, ಅದರಲ್ಲೇ ನನಗೆ ಹೆಚ್ಚಿನ ತರಬೇತಿ ನೀಡಿದರು’ ಎಂದು ನಿತ್ಯಾ ‘ಪ್ರಜಾವಾಣಿ’ಗೆ ತಿಳಿಸಿದಳು.
‘ಎಸ್‌ಎಸ್‌ಎಲ್‌ಸಿಯಲ್ಲಿದ್ದಾಗ 2023ರಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದೆ. ಎತ್ತರ ಜಿಗಿತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದೆ’ ಎಂದು ಹೇಳಿದರು.
ಸನ್ಮಾನ: ‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬಂತೆ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಮಗಳ ಸಾಧನೆ ಗುರುತಿಸಿ, ಶಾಲೆಗಳು, ಸ್ಥಳೀಯ ಸಂಘ–ಸಂಸ್ಥೆಗಳು ಸಹ ಸನ್ಮಾನ ಮಾಡಿವೆ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯಿಸಿದ ಪದಕಗಳು, ಟ್ರೋಫಿಗಳು, ಪ್ರಮಾಣಪತ್ರಗಳ ರಾಶಿಯೇ ಮನೆಯಲ್ಲಿವೆ’ ಎಂದು ನಿತ್ಯಾ ತಂದೆ–ತಾಯಿ ಸಂಜೀವ ಮೂರ್ತಿ ಮತ್ತು ಚಂದ್ರಕಲಾ ದಂಪತಿ ಹೇಳಿದರು.
‘ಕ್ರೀಡೆಯಷ್ಟೇ ಓದಿನಲ್ಲೂ ಮುಂದಿರುವ ನಿತ್ಯಾ ಸಾಧನೆಗೆ ನಮ್ಮ ಕುಟುಂಬ ಬೆನ್ನೆಲುಬಾಗಿ ನಿಂತಿದೆ. ಮುಂದೊಂದು ದಿನ ನನ್ನ ಮಗಳು ಭಾರತವನ್ನು ಪ್ರತಿನಿಧಿಸಿ ಪದಕ ತರುತ್ತಾಳೆಂಬ ಗ್ಯಾರಂಟಿ ನನಗಿದೆ. ಅದಕ್ಕಾಗಿ, ಬೇಕಾದ ತರಬೇತಿ ಕೊಡಿಸಲು ತಯಾರಿ ಮಾಡಿಕೊಂಡಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಶಾಲಾವಧಿಯಲ್ಲಿ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ಪದಕ–ಪ್ರಶಸ್ತಿ ಗಳಿಸುತ್ತಿದ್ದ ನಾನೀಗ ಎತ್ತರ ಜಿಗಿತದಲ್ಲೇ ಸಾಧನೆ ಮಾಡುವತ್ತ ಗಮನ ಹರಿಸಿದ್ದೇನೆ. ಅದರಲ್ಲೂ ದೇಶವನ್ನು ಪ್ರತಿನಿಧಿಸಿ ಪದಕ ತರಬೇಕೆಂಬ ಹೆಬ್ಬಯಕೆ ಇದೆ. ಆ ನಿಟ್ಟಿನಲ್ಲಿ ಸೂಕ್ತ ತರಬೇತಿ ಪಡೆಯುವ ಪ್ರಯತ್ನದಲ್ಲಿದ್ದೇನೆ. ಇಲ್ಲಿಯವರೆಗಿನ ನನ್ನ ಸಾಧನೆಗೆ ಅಪ್ಪ–ಅಮ್ಮನ ಬೆಂಬಲದ ಜೊತೆಗೆ ನಾನು ಓದಿದ ಶಾಲೆಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಪ್ರೋತ್ಸಾಹ ಮರೆಯುವಂತಿಲ್ಲ’ ಎಂದು ನಿತ್ಯಾ ಕೃತಜ್ಞತೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.