ಬಿಡದಿ: ಗುಂಡಿ ಮತ್ತು ಧೂಳಿನಿಂದ ತುಂಬಿದ ಪಟ್ಟಣದ ರಸ್ತೆ. ನೋಡಿದಲ್ಲೆಲ್ಲಾ ಕಸದ ರಾಶಿ. ಆಸ್ತಿ ಇ-ಖಾತೆ ಪಡೆಯಲು ಜನರ ಪರದಾಟ...
ಕುಡಿಯುವ ನೀರು, ಬೀದಿದೀಪ, ಯುಜಿಡಿ ಸಮಸ್ಯೆ. ಪೂರ್ಣಗೊಳ್ಳದ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಕಾಮಗಾರಿ. ಹೀಗೆ ಬಿಡದಿ ಪಟ್ಟಣದ ಅವಾಂತರಗಳ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಲೇ ಹೋಗುತ್ತದೆ.
ಪುರಸಭೆಗೆ ಕಳೆದ ಎರಡು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯೇ ಆಡಳಿತ ನಡೆಸುತ್ತಿದ್ದರು.
ಬಿಡದಿ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುಕ್ಕಾಣಿ ಹಿಡಿದ ಜೆಡಿಎಸ್ ಅಭ್ಯರ್ಥಿಗಳು ತಿಂಗಳಾದರೂ ಪುರಸಭೆ ಕಚೇರಿಯತ್ತ ತಿರುಗಿಯೂ ನೋಡಿಲ್ಲ. ಹಾಗಾಗಿ ಜನರ ಅಹವಾಲು ಕೇಳುವವರಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿಲ್ಲ.
ಪುರಸಭೆ ವ್ಯಾಪ್ತಿಯ ಎಲ್ಲಾ 23 ವಾರ್ಡ್‌ಗಳಲ್ಲಿ ಈಗಾಗಲೇ ನಗರೋತ್ಥಾನ ಯೋಜನೆಯ ಯುಜಿಡಿ ಕೆಲಸ ಆರಂಭವಾಗಿದೆ. ಆದರೆ, ಅದು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ಪುರಸಭೆ ವ್ಯಾಪ್ತಿಯ ಬಹುತೇಕ ವಾರ್ಡ್‌ಳಲ್ಲಿ ರಸ್ತೆಗಳು ಗುಂಡಿ ಮತ್ತು ಧೂಳಿನಿಂದ ತುಂಬಿವೆ. ಮಳೆ ಬಂದರೆ ರಸ್ತೆಗಳು ಕೆಸರು ಗದ್ದೆಗಳಂತಾಗುತ್ತವೆ. ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಗೋಳು ಇನ್ನೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಕಸಮಯ ಪಟ್ಟಣ
ಬಿಡದಿಯಾದ್ಯಂತ ಕಸದ ಸಮಸ್ಯೆಯೂ ದಿನೇ ದಿನೇ ತೀವ್ರ ಸ್ವರೂಪ ಪಡೆಯುತ್ತಿದೆ. ಸರಿಯಾದ ಸಮಯಕ್ಕೆ ಕಸ ಸಂಗ್ರಹಿಸುವ ಗಾಡಿಗಳು ಮನೆ ಬಾಗಿಲಿಗೆ ಬರುತ್ತಿಲ್ಲ. ಹೀಗಾಗಿ, ಕಚೇರಿ, ಕೆಲಸದ ಮೇಲೆ ಮನೆಯಿಂದ ಹೊರ ಹೋಗುವವರು ಕಸದ ಚೀಲಗಳನ್ನು ಮಾರ್ಗಮಧ್ಯೆ ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಾರೆ.
ಪುರಸಭೆ ವ್ಯಾಪ್ತಿಯಲ್ಲಿ ಕಸದ ಬ್ಲ್ಯಾಕ್ ಸ್ಪಾಟ್ ಮೇಲೆ ನಿಗಾ ಇಡಲು ಅಳವಡಿಸಿರುವ ಕ್ಯಾಮರಾಗಳಲ್ಲಿ ಹೆಚ್ಚಿನವು ಕೆಲಸ ಮಾಡುತ್ತಿಲ್ಲ. ಅವುಗಳ ನಿರ್ವಹಣೆಯೂ ಆಗುತ್ತಿಲ್ಲ. ಎಲ್ಲೆಂದರಲ್ಲಿ ಕಸ ಸುರಿಯುವ ಅಂಗಡಿ, ಹೋಟೆಲ್‌ಗಳ ಮೇಲೆ ಕ್ರಮ ಕೈಗೊಳ್ಳುವವರೂ ಇಲ್ಲ.
ಪಟ್ಟಣದ ವ್ಯಾಪ್ತಿಯಲ್ಲಿರುವ ಹೊಸ ಬಡಾವಣೆಗಳ ಸಮಸ್ಯೆಗಳನ್ನಂತೂ ಕೇಳುವವರೇ ಇಲ್ಲ. ಚರಂಡಿ ವ್ಯವಸ್ಥೆ, ರಸ್ತೆ ವಿದ್ಯುತ್ ದೀಪಗಳು ಇಲ್ಲ. ಕಸದ ಗಾಡಿಗಳು ಹೊಸ ಬಡಾವಣೆಗಳತ್ತ ಸುಳಿಯುತ್ತಿಲ್ಲ. ಹೊಸ ಬಡಾವಣೆಗಳ ನಿವೇಶನಗಳು ಹಾಗೂ ಮನೆಗಳು ಕೇವಲ ಕಂದಾಯ ಸಂಗ್ರಹಕ್ಕೆ ಸೀಮಿತವಾಗಿವೆ. ಮೂಲ ಸೌಲಭ್ಯಗಳಿಂದ ಹೊಸ ಬಡಾವಣೆಗಳು ವಂಚಿತವಾಗಿವೆ.
ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ 30 ದಿನಗಳಲ್ಲಿ ಸಾಮಾನ್ಯ ಸಭೆ ಕರೆದು ಚುನಾಯಿತ ಪುರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಾರ್ಡ್ ಸಮಸ್ಯೆ, ಆಡಳಿತಾತ್ಮಕ ಸಮಸ್ಯೆ ಹಾಗೂ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಬೇಕು. ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ ಆಗಬೇಕಿತ್ತು. ಯಾವುದೂ ಆಗುತ್ತಿಲ್ಲ.
ಬಿಡದಿ ಪುರಸಭೆ ಜನಪ್ರತಿನಿಧಿಗಳ ಅಸಡ್ಡೆ ಹೀಗೆ ಮುಂದುವರೆದಲ್ಲಿ ಏನಾದರೂ ಅಭಿವೃದ್ಧಿ ಕೆಲಸ ಆಗುತ್ತದೆ ಎನ್ನುವ ಭರವಸೆಯೇ ಇಲ್ಲದಾಗಿದೆ. ಪುರಸಭೆ ಕಚೇರಿಯಲ್ಲಿ ವಿಳಂಬ ಮತ್ತು ಅಪೂರ್ಣ ಕಾಮಗಾರಿಗಳನ್ನು ಯಾರೂ ಕೇಳುವವರೇ ಇಲ್ಲ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ನಂತರ ಸಾಮಾನ್ಯ ಸಭೆ ಮಾಡಬೇಕಾಗಿತ್ತು. ಅದೂ ಆಗಿಲ್ಲ, ಅಧಿಕಾರಿಗಳು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ.ಉಮಾಶಂಕರ್, ನಿವಾಸಿ ಬಿಡದಿ
ಸಾಮಾನ್ಯ ಸಭೆ ಮಾಡಬೇಕು. ಅಧ್ಯಕ್ಷರ ಜೊತೆ ಮಾತನಾಡಿದ್ದು ದಿನಾಂಕ ನಿಗದಿಪಡಿಸಬೇಕಿದೆ. ಅಧ್ಯಕ್ಷರು ದಿನಾಂಕ ನಿಗದಿಪಡಿಸಿದ ಕೂಡಲೇ ಸಾಮಾನ್ಯ ಸಭೆ ಮಾಡುತ್ತೇವೆ.ರಮೇಶ್, ಪುರಸಭೆ ಮುಖ್ಯಾಧಿಕಾರಿ
ಸಾಮಾನ್ಯ ಸಭೆಯ ಬಗ್ಗೆ ಚರ್ಚೆ ಮಾಡಲಾಗಿದೆ. ಶಾಸಕ ಎಚ್.ಸಿ ಬಾಲಕೃಷ್ಣ ಅವರ ಸಮಯ ಕೇಳಿದ್ದೇವೆ. ಅವರು ದಿನಾಂಕ ತಿಳಿಸಿದ ಕೂಡಲೇ ಸಭೆ ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು.ಹರಿಪ್ರಸಾದ, ಪುರಸಭೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.