ಬಿಡದಿ: ಪಟ್ಟಣದ ಕೆಂಚನಗುಪ್ಪೆ ಗ್ರಾಮದಲ್ಲಿ ಮುಚ್ಚಿ ಹೋಗಿದ್ದ ಕುಂಬಾರ ಕಟ್ಟೆಯನ್ನು ಕೂಡಲೇ ಯಥಾಸ್ಥಿತಿಗೆ ತಂದು ಉಪಯೋಗಕ್ಕೆ ಮುಕ್ತಗೊಳಿಸಬೇಕೆಂದು ರಾಮನಗರ ತಹಶೀಲ್ದಾರ್ ತೇಜಸ್ವಿನಿ ಸೂಚನೆ ನೀಡಿದ್ದಾರೆ.
ವರ್ಷಗಳಿಂದ ಕುಂಬಾರ ಕಟ್ಟೆಯನ್ನು ಜಾನುವಾರಗಳ ಕುಡಿಯುವ ನೀರಿಗಾಗಿ ಬಳಸಲಾಗುತ್ತಿತ್ತು. ಆದರೆ, ಸ್ಥಳೀಯ ಕೆಲ ಮುಖಂಡರು ಇತ್ತೀಚೆಗೆ ಕೆಂಚನಗುಪ್ಪೆ ಗ್ರಾಮದ ಕುಂಬಾರ ಕಟ್ಟೆಯನ್ನು ಮುಚ್ಚಿ ಹಾಕಿ, ಬಡಾವಣೆ ಮಾಡಿದ್ದರು. ಇದರ ಸುತ್ತಲೂ ಇದ್ದ ಜಮೀನನ್ನು ನಿವೇಶನ ಮಾಡಲು ಸಂಸ್ಥೆಯೊಂದು ಕಾಮಗಾರಿ ಆರಂಭಿಸಿತ್ತು. ಇದರಿಂದಾಗಿ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ತೊಂದರೆಯಾಗಿತ್ತು.
ಈ ಎಲ್ಲಾ ವಿಚಾರವನ್ನು ಕೆಂಚನಕುಪ್ಪೆ ಗ್ರಾಮಸ್ಥರು ತಹಶೀಲ್ದಾರ್ ಅವರ ಗಮನಕ್ಕೆ ತಂದಿದ್ದರು. ಕೂಡಲೇ ಸ್ಪಂದಿಸಿದ ತಹಶೀಲ್ದಾರ್ ತೇಜಸ್ವಿನಿ ಬುಧವಾರ ಕೆಂಚನಕುಪ್ಪೆ ಗ್ರಾಮಕ್ಕೆ ಉಪ ತಹಶೀಲ್ದಾರ ಮಲ್ಲೇಶ ಮತ್ತು ಸರ್ವೆ ಅಧಿಕಾರಿಗಳನ್ನು ಕಳುಹಿಸಿದರು. ಸ್ಥಳ ಪರಿಶೀಲನೆ ಮಾಡಿದ ಅಧಿಕಾರಿಗಳು, ಮುಚ್ಚಿ ಹೋಗಿದ್ದ ಕುಂಬಾರ ಕಟ್ಟೆಯನ್ನು ಸರಿಪಡಿಸಿ, ಯಥಾಸ್ಥಿತಿ ಕಾಪಾಡುವಂತೆ ಸ್ಥಳೀಯ ಮುಖಂಡರಿಗೆ ಮತ್ತು ಸಂಸ್ಥೆಯವರಿಗೆ ತಿಳಿಹೇಳಿದರು.
ಈ ಸಂದರ್ಭದಲ್ಲಿ ಕೆಂಚನಕುಪ್ಪೆ ಗ್ರಾಮಸ್ಥರು ಸ್ಥಳೀಯ ಮುಖಂಡರು ಹಾಗೂ ಉಪ ತಹಶೀಲ್ದಾರ ಮತ್ತು ಸರ್ವೆ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.