ADVERTISEMENT

ವಾಸ್ತವ ಮರೆಮಾಚುತ್ತಿರುವ ಧರ್ಮಾಂಧತೆ: ಡಾ.ಪರಕಲಾ ಪ್ರಭಾಕರ್ ಕಳವಳ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 15:02 IST
Last Updated 23 ಜನವರಿ 2024, 15:02 IST
   

ಮಾಗಡಿ (ರಾಮನಗರ): ‘ದೇಶವನ್ನು ಕಾಡುತ್ತಿರುವ ಅಸಮಾನತೆ, ನಿರುದ್ಯೋಗ, ಹಣದುಬ್ಬರ, ಪ್ರಾದೇಶಿಕ ಅಸಮತೋಲನದ ವಾಸ್ತವವನ್ನು ಧರ್ಮಾಂಧತೆ ಮರೆಮಾಚುತ್ತಿದೆ. ಸರ್ಕಾರ ಅಭಿವೃದ್ಧಿ ಕುರಿತು ತೋರಿಸುತ್ತಿರುವ ಅಂಕಿ–ಅಂಶಗಳಿಗೂ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ರಾಜಕೀಯ ಅರ್ಥಶಾಸ್ತ್ರಜ್ಞ ಡಾ.ಪರಕಾಲ ಪ್ರಭಾಕರ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ ಘಟಕ ಅಜ್ಜೀಸ್ ಲರ್ನಿಂಗ್ ಸೆಂಟರ್ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ‘ಸಮಕಾಲೀನ ಭಾರತದಲ್ಲಿ ಆರ್ಥಿಕತೆಯ ಸವಾಲುಗಳು’ ವಿಷಯ ಕುರಿತು ಮಾತನಾಡಿದ ಅವರು, ‘ವಾಸ್ತವ ಮರೆ ಮಾಚಿದ ಅಭಿವೃದ್ಧಿ ಕುರಿತು ನಾಗರಿಕರು ಎಚ್ಚೆತ್ತುಕೊಳ್ಳಬೇಕಿದೆ’ ಎಂದರು.

‘ಧರ್ಮಾಂಧತೆಯ ಸವಾಲು ಎದುರಿಸುತ್ತಲೇ, ಸಂವಿಧಾನದ ಆಶಯ ಉಳಿಸುವ ಕೆಲಸವಾಗಬೇಕಿದೆ. ಭಾರತದ ಮೂಲತತ್ವವಾಗಿರುವ ಸೌಹಾರ್ದತೆಯು ಪ್ರಜಾಪ್ರಭುತ್ವದ ಜೀವಾಳ. ಅದನ್ನು ಕಾಪಾಡುತ್ತಲೇ, ದೇಶವನ್ನು ಧರ್ಮಾಂಧತೆಯಿಂದ ರಕ್ಷಿಸಬೇಕಿದೆ’ ಎಂದು ಹೇಳಿದರು.

ADVERTISEMENT

‘ಜಾತಿ–ಧರ್ಮದ ಕಾರಣಕ್ಕಾಗಿ ಯಾವುದೇ ಆತಂಕವಿಲ್ಲದೆ ಸೌಹಾರ್ದದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಬೇಕು. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಕಡಿಮೆಯಾಗಬೇಕು. ಎಲ್ಲ ಕ್ಷೇತ್ರಗಳಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿರಬೇಕು. ಜಾತಿ, ಧರ್ಮ ಅಥವಾ ಲಿಂಗದ ಕಾರಣಕ್ಕೆ ನಿರ್ಬಂಧ ಇರಬಾರದು. ಸರ್ಕಾರದ ಯೋಜನೆಗಳು ಸುಸ್ಥಿರ ಮತ್ತು ಸರ್ವರ ಅಭಿವೃದ್ಧಿ ಪರಿಕಲ್ಪನೆ ಹೊಂದಿರಬೇಕು’ ಎಂದು ಪ್ರತಿಪಾದಿಸಿದರು.

‘ಯಾವುದೇ ದೇಶದ ಪ್ರಜಾಪ್ರಭುತ್ವ ಅಲ್ಲಿನ ಸಂವಿಧಾನದ ಮೇಲೆ ನಿಂತಿರುತ್ತದೆ. ಸಂವಿಧಾನ ಉದಾತ್ತ ಆಶಯಗಳನ್ನು ಒಳಗೊಂಡಿದ್ದರೂ ಅವುಗಳ ಪರಿಪಾಲನೆಯಲ್ಲಿ ಎಡವುತ್ತಲೇ ಇದೆ. ಇದೇ ಕಾರಣಕ್ಕೆ ದೇಶ ಅಭಿವೃದ್ಧಿ ರಾಜಕೀಯದ ಬದಲು, ಧರ್ಮ ರಾಜಕೀಯದ ಹಾದಿಯಲ್ಲಿ ಸಾಗುತ್ತಿದೆ. ಇದು ಪ್ರಜಾಪ್ರಭುತ್ವದ ಆಶಯಗಳಿಗೆ ಮಾರಕವಾಗಿದೆ’ ಎಂದರು.

ಅಜ್ಜಿಸ್ ಲರ್ನಿಂಗ್ ಸೆಂಟರ್‌ನ ಟ್ರಸ್ಟಿ ಶಬ್ನಮ್ ಹಾಶ್ಮಿ, ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಣ್ಣ ಡಿ, ಐಕ್ಯೂಎಸಿ ಸಂಚಾಲಕಿ ಡಾ.ಸೀಮಾ ಕೌಸರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.