ADVERTISEMENT

ಸಕಾಲದಲ್ಲಿ ಕೈ ಸೇರದ ಜನನ– ಮರಣ ಪ್ರಮಾಣಪತ್ರ

ನವೀಕರಣಗೊಳ್ಳದ ಗ್ರಾಮ ಲೆಕ್ಕಾಧಿಕಾರಿಗಳ ಜಿಟಲ್ ಸಿಗ್ನೇಚರ್ ಕಾರ್ಡ್

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 8:28 IST
Last Updated 26 ಜೂನ್ 2024, 8:28 IST
<div class="paragraphs"><p>ಚಿತ್ತಾಪುರ ತಾಲ್ಲೂಕಿನ ಭಂಕಲಗಾ ಗ್ರಾಮದ ಮಲ್ಲಿಕಾರ್ಜುನ ಎಮ್ಮೆನೋರ್ ಅವರು ತಮ್ಮ ತಂದೆಯವರ ಮರಣ ಪ್ರಮಾಣ ಪತ್ರಕ್ಕಾಗಿ ತಹಶೀಲ್ದಾರ್ ಅವರಿಗೆ ನೀಡಿರುವ ಅರ್ಜಿ ( ಸಾಂಕೇತಿಕ ಚಿತ್ರ)</p></div>

ಚಿತ್ತಾಪುರ ತಾಲ್ಲೂಕಿನ ಭಂಕಲಗಾ ಗ್ರಾಮದ ಮಲ್ಲಿಕಾರ್ಜುನ ಎಮ್ಮೆನೋರ್ ಅವರು ತಮ್ಮ ತಂದೆಯವರ ಮರಣ ಪ್ರಮಾಣ ಪತ್ರಕ್ಕಾಗಿ ತಹಶೀಲ್ದಾರ್ ಅವರಿಗೆ ನೀಡಿರುವ ಅರ್ಜಿ ( ಸಾಂಕೇತಿಕ ಚಿತ್ರ)

   

ಹಾರೋಹಳ್ಳಿ: ತಾಲ್ಲೂಕಿನ ಕೆಲವು ಕಂದಾಯ ವೃತ್ತಗಳಲ್ಲಿ ನಾಲ್ಕೈದು ತಿಂಗಳಿಂದ ಜನನ ಮತ್ತು ಮರಣ ದಾಖಲೆ ಪ್ರಮಾಣಪತ್ರಗಳು ಸಿಗದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಪ್ರಮಾಣಪತ್ರಕ್ಕೆ ಸಾರ್ವಜನಿಕರು ಅರ್ಜಿ ಸಲ್ಲಿಸಿದ 21 ದಿನದೊಳಗೆ ಗ್ರಾಮ ಲೆಕ್ಕಾಧಿಕಾರಿಗಳು  ಪರೀಶೀಲನೆ ನಡೆಸಿ ಜನನ– ಮರಣ ಪ್ರಮಾಣಪತ್ರ ನೀಡಬೇಕು.

ಆದರೆ, ಸಾರ್ವಜನಿಕ ಕೆಲಸಕ್ಕೆ ನಿಗದಿಪಡಿಸಿರುವ ಗಡುವು ನೆಪ ಮಾತ್ರಕ್ಕೆ ಇದೆ. 21 ದಿನದೊಳಗೆ ಜನರ ಕೈಗೆ ಪ್ರಮಾಣಪತ್ರ ತಲುಪುತ್ತಿಲ್ಲ. ಇದರಿಂದಾಗಿ, ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಪ್ರಮಾಣಪತ್ರಕ್ಕಾಗಿ ಕಚೇರಿಗಳಿಗೆ ಅಲೆಯುವ ಸ್ಥಿತಿ ಬಂದಿದೆ.

ADVERTISEMENT

ಎಲ್ಲೆಲ್ಲಿ ವಿಳಂಬ: ತಾಲ್ಲೂಕಿನ ಬನವಾಸಿ, ತಟ್ಟೆಕೆರೆ, ಟಿ. ಹೊಸಹಳ್ಳಿ, ಕಲ್ಲನಕುಪ್ಪೆ, ಅವರೆಮಾಳ ರಾಂಪುರ ಕಂದಾಯ ವೃತ್ತಗಳ ಗ್ರಾಮಗಳಲ್ಲಿ ಕಳೆದ ನಾಲ್ಕೈದು ತಿಂಗಳುಗಳಿಂದ ಜನನ– ಮರಣ ಪ್ರಮಾಣಪತ್ರಕ್ಕೆ ಕೋರಿ ಸಾರ್ವಜನಿಕರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದೂವರೆಗೆ ಯಾರ ಕೈಗೂ ಪ್ರಮಾಣಪತ್ರ ಸೇರಿಲ್ಲ. ಕಚೇರಿಗೆ ಬರುವ ಜನರಿಗೆ ಅಧಿಕಾರಿಗಳು ಇಲ್ಲದ ನೆಪ ಹೇಳಿ ಕಳಿಸುತ್ತಿದ್ದಾರೆ.

‘ಜನನ– ಮರಣ ದಾಖಲೆಯ ಪ್ರಮಾಣಪತ್ರ ನೀಡಲು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸರ್ಕಾರವು ಡಿಜಿಟಲ್ ಸಿಗ್ನೇಚರ್ ಕಾರ್ಡ್ ನೀಡಿದೆ. ಇದರ ಅವಧಿ ಒಂದು ವರ್ಷದವರೆಗೆ ಇರುತ್ತದೆ. ಅವಧಿ ಮುಗಿದ ಬಳಿಕ ನವೀಕರಣ ಮಾಡಬೇಕು. ಆಗ ಗ್ರಾಮ ಲೆಕ್ಕಾಧಿಕಾರಿಗಳು ದಾಖಲೆಗಳ ಪರೀಶೀಲನೆ ನಡೆಸಿ, ತಮ್ಮ ಸಿಗ್ನೇಚರ್ ಕಾರ್ಡ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆದರೆ, ಕೆಲ ಗ್ರಾಮ ಲೆಕ್ಕಾಧಿಕಾರಿಗಳ ದಾಖಲೆಗಳಲ್ಲಿ ದೋಷ ಕಂಡುಬಂದಿರುವುರಿಂದ ಅವರ ಡಿಜಿಟಲ್ ಸಿಗ್ನೇಚರ್ ಕಾರ್ಡ್ ನವೀಕರಣವಾಗಿಲ್ಲ. ಇದರಿಂದಾಗಿ, ಸಾರ್ವಜನಿಕರಿಗೆ ಅಗತ್ಯವಿರುವ ಜನನ –ಮರಣ ಪ್ರಮಾಣಪತ್ರ ವಿತರಣೆ ಮಾಡುವಲ್ಲಿ ವಿಳಂಬವಾಗುತ್ತಿದೆ. ಅಧಿಕಾರಿಗಳು ಸಹ ದೋಷ ಪತ್ತೆಹಚ್ಚಿ ಸರಿಪಡಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಹೇಳಿದರು.

ಹಲವು ಕೆಲಸ ವಿಳಂಬ: ಜನನ ಮತ್ತು ಮರಣ ಪ್ರಮಾಣಪತ್ರಗಳು ಸರಿಯಾದ ಸಮಯದಲ್ಲಿ ಕೈ ಸೇರದಿರುವುದರಿಂದ ಜನರ ಹಲವು ಕೆಲಸಗಳು  ವಿಳಂಬವಾಗುತ್ತವೆ. ಆಸ್ತಿ ಹಕ್ಕು, ಉತ್ತರಾಧಿಕಾರದ ಇತ್ಯರ್ಥ, ವಿಮೆ, ಬ್ಯಾಂಕಿನ ಕೆಲಸಗಳು, ಪಿಂಚಣಿ, ಶಿಕ್ಷಣ, ಉದ್ಯೋಗ ಸೇರಿದಂತೆ ಹಲವು ರೀತಿಯ ಸರ್ಕಾರಿ ಮತ್ತು ಖಾಸಗಿ ಕೆಲಸಗಳಿಗೂ ತೊಂದರೆಯಾಗುತ್ತಿದೆ.

ಅಧಿಕಾರಿಗಳ ಯಡವಟ್ಟಿನಿಂದಾಗಿ ಜನರು ನಾಲ್ಕೈದು ತಿಂಗಳಿಂದ ತೊಂದರೆ ಅನುಭವಿಸುವಂತಾಗಿದೆ. ನಿತ್ಯ ಕಚೇರಿಗೆ ಹೋದವರು ನೆಪ ಕೇಳಿ ಸಾಕಾಗಿದೆ. ಈಗಲಾದರೂ ಅಧಿಕಾರಗಳು ಎಚ್ಚೆತ್ತುಕೊಂಡು ಡಿಜಿಟಲ್ ಸಿಗ್ನೇಚರ್ ಕಾರ್ಡ್ ನವೀಕರಣ ಮಾಡಿಕೊಂಡು ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲವನ್ನು ತಪ್ಪಿಸಬೇಕು. ಸಂಬಂಧಪಟ್ಟ ಇಲಾಖೆಗಳ ಮೇಲಧಿಕಾರಿಗಳು ಸಹ ಈ ಕುರಿತು ಗಮನ ಹರಿಸಬೇಕು ಎಂದು ಸ್ಥಳೀಯ ನಿವಾಸಿ ರಮೇಶ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.