ರಾಮನಗರ: ‘ಬಿಜೆಪಿ–ಜೆಡಿಎಸ್ ಮೈತ್ರಿಯ ರಾಜಕೀಯ ಸುನಾಮಿಯಲ್ಲಿ ಕಾಂಗ್ರೆಸ್ ಪಕ್ಷ ನಿರ್ಮೂಲನೆಯಾಗಲಿದೆ. ಮತದಾರರಿಗೆ ಕುಕ್ಕರ್, ತವಾ, ಗಿಫ್ಟ್ ಕಾರ್ಡ್ ಕೊಟ್ಟು 136 ಸೀಟು ಗೆದ್ದಿರುವ ಕಾಂಗ್ರೆಸ್ ಮುಂದೆ 36 ಸ್ಥಾನಗಳಿಗೆ ಇಳಿಯುವ ದಿನ ದೂರವಿಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
‘ಮೈತ್ರಿ ಒಗ್ಗಟ್ಟಿನಿಂದ ರಾಜ್ಯದಲ್ಲಿ ನಾವು ಮತ್ತೆ ಸರ್ಕಾರ ರಚಿಸುವುದು ಖಚಿತ. ಮುಡಾದಲ್ಲಿ ಲೂಟಿ ಮಾಡಿರುವ ಸಿದ್ದರಾಮಯ್ಯಗೆ ಮುಖ್ಯಮಂತಿಯಾಗಿ ಮುಂದುವರಿಯುವ ನೈತಿಕತೆ ಇಲ್ಲ. ಪಾದಯಾತ್ರೆ ಮೈಸೂರು ತಲುಪುವುದಕ್ಕೆ ಮುಂಚೆಯೇ ಸಿದ್ದರಾಮಯ್ಯ ರಾಜೀನಾಮೆ ನೀಡಿ ಮರ್ಯಾದೆ ಉಳಿಸಿಕೊಳ್ಳಬೇಕು’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಗುಡುಗಿದರು.
ಮುಡಾ ಹಗರಣದ ವಿರುದ್ಧದ ಪಾದಯಾತ್ರೆಯ ಎರಡನೇ ದಿನವಾದ ಭಾನುವಾರ ರಾಮನಗರದ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿದ್ದ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಉದ್ದೇಶಿಸಿ ಇಬ್ಬರೂ ನಾಯಕರು ಮಾತನಾಡಿದರು. ಭಾಷಣದ ಉದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಇಬ್ಬರೂ ವಾಗ್ದಾಳಿ ನಡೆಸಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಕಿತ್ತೊಗೆಯುವುದಕ್ಕಾಗಿಯೇ ನಾನು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇನೆ. ಅವರ ನಿರ್ಮೂಲನೆ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಎಚ್‌ಡಿಕೆ ಎಚ್ಚರಿಕೆ ನೀಡಿದರು.
‘ಡಿ.ಕೆ. ಶಿವಕುಮಾರ್ ಅವರು, ನನ್ನ ಆಸ್ತಿ ಮತ್ತು ಯಡಿಯೂರಪ್ಪನವರ ಆಡಳಿತ ವೈಖರಿ ಪ್ರಶ್ನಿಸಿ ಕೆಣಕಿದ್ದಾರೆ. ಅವರ ಸರ್ಕಾರದ ಎಲ್ಲಾ ಎಲ್ಲಾ ತನಿಖೆಗೆ ನಾನು ಸಿದ್ದ. ಅದೇನು ಮಾಡ್ತಿರೊ ಮಾಡಿ. ನಿಮ್ಮ ಪಾಪದ ಕೊಡ ತುಂಬಿ, ಅಂತಿಮ ಕಾಲ ಶುರುವಾಗಿದೆ. ಮುಂದೆ ಕರ್ನಾಟಕದ ರಥ ಎಳೆಯುವ ಅಶ್ವಮೇಧಕ್ಕೆ ವಿಜಯೇಂದ್ರ ಮತ್ತು ನಿಖಿಲ್ ಜೋಡಿ ನೇತೃತ್ವದಲ್ಲಿ ಚಾಲನೆ ಕೊಟ್ಟಿದ್ದೇವೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.
ಪಾದಯಾತ್ರೆಯಿಂದಾಗಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವ ಭಯಕ್ಕೆ ಹಾಗೂ ನನಗೆ ಯಾವಾಗ ಸಿ.ಎಂ ಕುರ್ಚಿ ಸಿಗುತ್ತದೊ ಎಂಬ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಅವರಿಗೆ ನಿದ್ರೆ ಬರುತ್ತಿಲ್ಲ-ಬಿ.ವೈ. ವಿಜಯೇಂದ್ರ ಅಧ್ಯಕ್ಷ ಬಿಜೆಪಿ ರಾಜ್ಯ ಘಟಕ
ಸಮಾಜವಾದಿ ಎಂದು ಹೇಳಿಕೊಂಡೇ ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಾಜವಾದಿತನದ ಕುರಿತು ಜನ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಅವರು ಉತ್ತರಿಸಬೇಕು-ನಿಖಿಲ್ ಕುಮಾರಸ್ವಾಮಿ ಅಧ್ಯಕ್ಷ ಜೆಡಿಎಸ್ ಯುವ ಘಟಕ
‘ಸಹೋದರನ ವ್ಯವಹಾರಕ್ಕೆ ನಾನ್ಯಾಕೆ ಉತ್ತರಿಸಲಿ’
‘ನನ್ನ ಸಹೋದರ ಬಾಲಕೃಷ್ಣ ಗೌಡ ಏನೋ ವ್ಯವಹಾರ ಮಾಡಿಕೊಂಡಿದ್ದಾನೆ. ಅದಕ್ಕೆ ನಾನ್ಯಾಕೆ ಉತ್ತರ ಕೊಡಲಿ? ಸರ್ಕಾರ ಇರುವುದು ಯಾಕೆ? ನಿಮಗೆ ಅಧಿಕಾರ ಕೊಟ್ಟಿರುವುದು ವಿರೋಧ ಪಕ್ಷಗಳನ್ನು ಪ್ರಶ್ನಿಸುವುದಕ್ಕಲ್ಲ. ಕಾನೂನುಬಾಹಿರ ಚಟುವಟಿಕೆಗಳಿಗೆ ಅಂಕುಶ ಹಾಕಿ ಉತ್ತಮ ಆಡಳಿತ ನೀಡುವುದಕ್ಕೆ. ಪ್ರಶ್ನಿಸಲು ಅಧಿಕಾರವಿರುವುದು ವಿರೋಧ ಪಕ್ಷವಾದ ನಮಗೆ. ಬಿಜೆಪಿಯ 21 ಹಗರಣಗಳನ್ನು ಮಾಡಿದೆ ಎಂದು ಈಗ ಎನ್ನುತ್ತಿದ್ದೀರಲ್ಲ ಒಂದೂವರೆ ವರ್ಷ ಏನು ಮಾಡುತ್ತಿದ್ದೀರಿ? ಆಗ ನಿಮ್ಮನ್ನು ಹಿಡಿದುಕೊಂಡಿದ್ದವರು ಯಾರು? ಕಾಂಗ್ರೆಸ್‌ನವರ ಕರ್ಮಕಾಂಡ ತೊಳೆಯುವುದರಲ್ಲೇ ಬಿಜೆಪಿಯವರು ಕಳೆದರು. ಈಗ ಅವರು ಹಗರಣ ಮಾಡಿದ್ದಾರೆಂದು ಪಟ್ಟಿ ತೋರಿಸಿ ನಮ್ಮನ್ನು ಬೆದರಿಸುತ್ತೀರಾ? ಅದಕ್ಕೆಲ್ಲ ಜಗ್ಗಲ್ಲ’ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.