ADVERTISEMENT

ಗ್ಯಾರಂಟಿಗೆ ಪರಿಶಿಷ್ಟರ ಹಣ ಬಳಕೆಗೆ ಆಕ್ರೋಶ

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ–ಜೆಡಿಎಸ್ ಜಂಟಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 6:59 IST
Last Updated 24 ಫೆಬ್ರುವರಿ 2024, 6:59 IST
<div class="paragraphs"><p>ರಾಜ್ಯ ಸರ್ಕಾರ ಪರಿಶಿಷ್ಟ ಸಮುದಾಯಗಳಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದೆ </p></div>

ರಾಜ್ಯ ಸರ್ಕಾರ ಪರಿಶಿಷ್ಟ ಸಮುದಾಯಗಳಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದೆ

   

ರಾಮನಗರ: ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ₹11 ಸಾವಿರ ಕೋಟಿ ಹಣವನ್ನು ಬಳಸಿಕೊಂಡಿದೆ ಎಂದು ಆರೋಪಿಸಿ, ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಬೆಳಿಗ್ಗೆ ಜಮಾಯಿಸಿದ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು, ಬೆಂಗಳೂರು–ಮೈಸೂರು ರಸ್ತೆಯನ್ನು ಕೆಲ ಹೊತ್ತು ತಡೆದರು. ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.

ADVERTISEMENT

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದಸ್ವಾಮಿ, ‘ಕಾಂಗ್ರೆಸ್ ಪಕ್ಷವು ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ದಲಿತ ವಿರೋಧಿ ನೀತಿ ಅನುಸರಿಸಿದೆ. ಕಾಂಗ್ರೆಸ್ ಹಿಂದಿನಿಂದಲೂ ದಲಿತರಿಗೆ ಇಂತಹದ್ದೇ ದ್ರೋಹ ಮಾಡಿಕೊಂಡು ಬಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಚುನಾವಣೆಗೆ ಮುಂಚೆ ಐದು ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಸರ್ಕಾರ, ಅವುಗಳನ್ನು ಜಾರಿ ಮಾಡಿ ಖಜಾನೆ ಬರಿದು ಮಾಡಿಕೊಂಡಿದೆ. ಇದೀಗ, ಬೇರೆ ಸಮುದಾಯಗಳಿಗೆ ಇಟ್ಟಿದ್ದ ಹಣಕ್ಕೆ ಕೈ ಹಾಕುವ ಮೂಲಕ ಅವರಿಗೆ ಅನ್ಯಾಯ ಮಾಡುತ್ತಿದೆ. ದಲಿತರ ಸ್ವಾವಲಂಬನೆ ಕಾರ್ಯಕ್ರಮಗಳಿಗಾಗಿ ವಿಶೇಷ ಯೋಜನೆ ರೂಪಿಸಿ ಹಣ ಮೀಸಲಿಟ್ಟಿದ್ದೇವೆ ಎನ್ನುವ ಮುಖ್ಯಮಂತ್ರಿ ಅವರು ಇದಕ್ಕೆ ಉತ್ತರಿಸಬೇಕು’ ಎಂದರು.

‘ದಲಿತರ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವುದರಿಂದ, ಅವರ ಕಲ್ಯಾಣ ಕಾರ್ಯಕ್ರಮಗಳ ಜಾರಿಗೆ ತೊಡಕಾಗುತ್ತದೆ. ಹಾಗಾಗಿ, ಸರ್ಕಾರ ಕೂಡಲೇ ಪರಿಶಿಷ್ಟರ ಹಣವನ್ನು ಅನ್ನಯ ಉದ್ದೇಶಕ್ಕೆ ಬಳಕೆ ಮಾಡುವುದನ್ನು ಕೈ ಬಿಡಬೇಕು. ಈ ಕುರಿತು ದಲಿತ ಸಂಘಟನೆಗಳು ಸಹ ದನಿ ಎತ್ತಿ, ತಮ್ಮ ಪಾಲಿನ ಹಣವನ್ನು ತಮಗೇ ಖರ್ಚು ಮಾಡಬೇಕು ಎಂದು ಒತ್ತಾಯಿಸಬೇಕು. ಇಲ್ಲದಿದ್ದರೆ, ಹೆಸರಿಗಷ್ಟೇ ಹಣ ಮೀಸಲಿಟ್ಟು ಬೇರೆ ಕೆಲಸಕ್ಕೆ ಬಳಸುತ್ತಲೇ ಇರುತ್ತಾರೆ’ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಎಸ್.ಆರ್. ನಾಗರಾಜು, ಚಂದ್ರು, ರಾಜು, ಚಂದ್ರಶೇಖರ್, ದರ್ಶನ್, ಜಗದೀಶ್, ರುದ್ರದೇವರು, ಸಿಂಗ್ರಯ್ಯ, ಕಾಳಯ್ಯ, ಪುಷ್ಪಲತಾ, ಧರ್ಮೇಂದ್ರ, ರಾಜು, ಚಂದ್ರಶೇಖರ ರೆಡ್ಡಿ, ರಮೇಶ್, ಕಿಶನ್, ಜೆಡಿಎಸ್ ಮುಖಂಡರಾದ ಕೆಂಪರಾಜು, ಅಪ್ಪಾಜಪ್ಪ, ಜಯಕುಮಾರ್, ಜಯರಾಂ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.