ADVERTISEMENT

‘ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ನನ್ನನ್ನು ಸೋಲಿಸಿದರು’

ಬಿಜೆಪಿ–ಜೆಡಿಎಸ್‌ ವಿರುದ್ಧ ಡಿ.ಕೆ. ಸುರೇಶ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 6:33 IST
Last Updated 12 ಜೂನ್ 2024, 6:33 IST
ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ಬಳಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಚನ್ನಪಟ್ಟಣ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಲೋಕಸಭಾ ಚುನಾವಣಾ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಮಾತನಾಡಿದರು. ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಇತರರು ಹಾಜರಿದ್ದರು
ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ಬಳಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಚನ್ನಪಟ್ಟಣ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಲೋಕಸಭಾ ಚುನಾವಣಾ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಮಾತನಾಡಿದರು. ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಇತರರು ಹಾಜರಿದ್ದರು   

ಚನ್ನಪಟ್ಟಣ: ‘ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ನನ್ನನ್ನು ಸೋಲಿಸಲಾಯಿತು. ಇದು ನನ್ನನ್ನು ಸೋಲಿಸಲು ಬಿಜೆಪಿ ಹಾಗೂ ಜೆಡಿಎಸ್‌ ಮಾಡಿದ ತಂತ್ರ’ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಬೇಸರ ಮಾಡಿಕೊಂಡರು.

ಕೆಂಗಲ್ ಬಳಿಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಅವರು ತಮ್ಮ ಸೋಲಿನ ವಿಮರ್ಶೆ ಮಾಡಿಕೊಂಡರು.

‘ನಾನು ಸಂಸದನಾಗಿ ಹನ್ನೊಂದು ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಜನರ ಕಷ್ಟಗಳನ್ನು ಕೇಳಿ ಕೆಲಸ ಮಾಡಿದ್ದೇನೆ. ಎಲ್ಲಾ ವರ್ಗದ ಜನರ ಕಷ್ಟಗಳನ್ನು ಪರಿಹಾರ ಮಾಡುವಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿತ್ತು. ಇವೆಲ್ಲವೂ ನನ್ನ ಗೆಲುವಿಗೆ ಸಹಕಾರಿಯಾಗುತ್ತವೆ ಎಂದು ತಿಳಿದಿದ್ದೆ. ಆದರೆ ನನ್ನ ನಿರೀಕ್ಷೆ ಸುಳ್ಳಾಯಿತು’ ಎಂದು ನಿರಾಸೆ ವ್ಯಕ್ತಪಡಿಸಿದರು.

ADVERTISEMENT

‘ಕಾರ್ಯಕರ್ತರು ಎದೆಗುಂದುವ ಅವಶ್ಯಕತೆ ಇಲ್ಲ. ನಾನು ನಿಮ್ಮ ಜೊತೆ ಸದಾ ಇರುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸುತ್ತೇನೆ. ಎಲ್ಲರೂ ಸೇರಿ ಪಕ್ಷ ಕಟ್ಟುವ ಕೆಲಸ ಮಾಡೋಣ’ ಎಂದು ಧೈರ್ಯ ತುಂಬಿದರು.

‘ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುವುದು ಡಿ.ಕೆ. ಸುರೇಶ್ ಅವರ ಕಾರ್ಯವೈಖರಿ. ಅವರು ನಮ್ಮ ಬೆನ್ನ ಹಿಂದೆ ಇರುತ್ತಾರೆ. ಯಾರು ಕೂಡ ಧೃತಿಗೆಡಬೇಕಾಗಿಲ್ಲ’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಧೈರ್ಯ ತುಂಬಿದರು.

‘ವಿರೋಧಿಗಳು ಗೆದ್ದಿರಬಹುದು. ಕನಕಪುರ ಸೇರಿದಂತೆ ಎಲ್ಲಾ ತಾಲ್ಲೂಕುಗಳು ತಲೆ ತಗ್ಗಿಸುವಂತೆ ಚನ್ನಪಟ್ಟಣ ಜನತೆ ಮತ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಬಂದಿರುವ ಮತಗಳನ್ನು ನೋಡಿ ವಿರೋಧಿಗಳು ನಿದ್ದೆ ಮಾಡುತ್ತಿಲ್ಲ. ಚನ್ನಪಟ್ಟಣದಲ್ಲಿ ಹೊಸ ರಾಜಕೀಯ ಪರ್ವ ಶುರುವಾಗಿದೆ. ಡಿ.ಕೆ. ಸುರೇಶ್ ಅವರ ಕಾರ್ಯವೈಖರಿಯನ್ನು ಚನ್ನಪಟ್ಟಣ ಜನತೆ ಅರ್ಥ ಮಾಡಿಕೊಂಡಿದ್ದಾರೆ. ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಶಾಸಕರನ್ನು ನೋಡುವ ದಿನಗಳು ದೂರವಿಲ್ಲ’ ಎಂದರು.

ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್.ರವಿ, ರಾಮೋಜಿಗೌಡ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಗಂಗಾಧರ್, ಬೆಂಗಳೂರು ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಅಧ್ಯಕ್ಷ ರಘುನಂದನ್ ರಾಮಣ್ಣ, ಮಾಜಿ ಶಾಸಕ ಎಂ.ಸಿ. ಅಶ್ವಥ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್, ದುಂತೂರು ವಿಶ್ವನಾಥ್, ಶಿವಮಾದು, ಪಿ.ಡಿ.ರಾಜು, ನಗರಸಭಾ ಅಧ್ಯಕ್ಷ ಪ್ರಶಾಂತ್, ನಗರಸಭಾ ಸದಸ್ಯರು, ಮಹಿಳಾ ಮುಖಂಡರಾದ ಕೋಕಿಲಾರಾಣಿ, ಪವಿತ್ರ ಪ್ರಭಾಕರರೆಡ್ಡಿ ಭಾಗವಹಿಸಿದ್ದರು.

‘ಕುಮಾರಸ್ವಾಮಿ ಕಣ್ಣು ಕಳೆದುಕೊಳ್ಳುತ್ತಾರೆಯೇ?’‘

ರಾಮನಗರ ಹಾಗೂ ಚನ್ನಪಟ್ಟಣ ನನ್ನ ಎರಡು ಕಣ್ಣು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿದ್ದರು. ಅಂಥವರು ಚನ್ನಪಟ್ಟಣ ಬಿಡುತ್ತಾರೆಯೇ? ತಮ್ಮ ಒಂದು ಕಣ್ಣನ್ನು ಅವರಾಗಿಯೇ ಕಳೆದುಕೊಳ್ಳುತ್ತಾರೆಯೇ? ಮುಂದಿನ ದಿನಗಳಲ್ಲಿ ಮಂಡ್ಯ ಸಂಸದ ಸ್ಥಾನ ಹಾಗೂ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚನ್ನಪಟ್ಟಣಕ್ಕೆ ಬರುತ್ತಾರೆ’ ಎಂದು ಡಿ.ಕೆ. ಸುರೇಶ್ ವ್ಯಂಗ್ಯವಾಡಿದರು.‘ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಚನ್ನಪಟ್ಟಣ ಬಿಟ್ಟು ಹೋಗಲ್ಲ. ನಮಗೆ ವಿಶ್ವಾಸ ಇದೆ. ಅವರಿಗೆ ಅಧಿಕಾರಕ್ಕಿಂತ ಕ್ಷೇತ್ರದ ಜನ ಕಾರ್ಯಕರ್ತರು ಮುಖ್ಯ. ನಾನು ಸಾಕಷ್ಟು ಬಾರಿ ಅವರ ಮಾತುಗಳನ್ನು ಆಲಿಸಿದ್ದೇನೆ. ಹಾಗಾಗಿ ಚನ್ನಪಟ್ಟಣ ಉಳಿಸಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ’ ಎಂದರು.‘ಮೊದಲು ಕುಮಾರಸ್ವಾಮಿ ರಾಜೀನಾಮೆ ಕೊಡಲಿ. ಆಮೇಲೆ ತಾನೇ ಉಪ ಚುನಾವಣೆ. ನಾನು ಈಗಾಗಲೇ ಸೋತಿದ್ದೇನೆ. ಜನ ನನ್ನನ್ನು ತಿರಸ್ಕಾರ ಮಾಡಿದ್ದಾರೆ. ಅಭ್ಯರ್ಥಿ ಆಯ್ಕೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ತೀರ್ಮಾನ ಮಾಡುತ್ತಾರೆ. ಅಚ್ಚರಿಯ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತಾರೆ’ ಎಂದರು.

ಬುರುಡೆ ರಾಜಕಾರಣಿಗಳಿದ್ದಾರೆ:

ಚನ್ನಪಟ್ಟಣದಲ್ಲಿ ಅನೇಕರು ಬುರುಡೆ ರಾಜಕಾರಣಿಗಳು ಇದ್ದಾರೆ. ನೀರಾವರಿ ಯೋಜನೆ ತಂದುಕೊಟ್ಟೆ ಎಂದು ಬುರುಡೆ ಬಿಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೆಸರು ಪ್ರಸ್ತಾಪಿಸಿದೆ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಪರೋಕ್ಷ ವಾಗ್ದಾಳಿ ಮಾಡಿದರು.‘ಚನ್ನಪಟ್ಟಣಕ್ಕೆ ನೀರು ತಂದುಕೊಟ್ಟವರು ಯಾರು ಎಂದು ನಿವೃತ್ತ ನ್ಯಾಯಮೂರ್ತಿ ಹುಲುವಾಡಿ ರಮೇಶ್ ಅವರನ್ನು ಕೇಳಿ. ಉತ್ತರ ದೊರೆಯುತ್ತದೆ. ಯಾರೋ ಮಾಡಿದ ಕೆಲಸಕ್ಕೆ ಪೂಜೆ ಮಾಡಿಕೊಂಡು ನಾನು ಮಾಡಿದೆ ಎಂದು ಬುರುಡೆ ಬಿಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.