ರಾಮನಗರ: ‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿರುವ ಬಿಜೆಪಿ–ಜೆಡಿಎಸ್ ಮತಬ್ಯಾಂಕ್, ಪ್ರಧಾನಿ ಮೋದಿ ಕುರಿತು ಜನರಿಗಿರುವ ಅಪಾರ ವಿಶ್ವಾಸ, ಡಾ. ಮಂಜುನಾಥ್ ಜನಸೇವೆ ಬಗೆಗಿನ ಗೌರವ ಹಾಗೂ ಕ್ಷೇತ್ರದಲ್ಲಿರುವ ರಾಜಕೀಯ ಅಟ್ಟಹಾಸದ ಕುರಿತು ಜನರಲ್ಲಿರುವ ಸಾತ್ವಿಕ ಸಿಟ್ಟು ಮಂಜುನಾಥ್ ಅವರ ಗೆಲುವಿಗೆ ಪೂರಕವಾಗಿದೆ’ ಎಂದು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಹೇಳಿದರು.
ನಗರದ ವಕೀಲರ ಸಂಘಕ್ಕೆ ಗುರುವಾರ ಭೇಟಿ ನೀಡಿ ಮತ ಯಾಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಕುಣಿಗಲ್, ಮಾಗಡಿ ಹಾಗೂ ರಾಮನಗರದ ವಕೀಲರ ಜೊತೆ ಸಂವಾದ ನಡೆಸಿ ಮಂಜುನಾಥ್ ಪರ ಮತ ಯಾಚಿಸಿದ್ದೇನೆ. ಮೈತ್ರಿ ಪಕ್ಷಗಳ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬಂದಿದೆ. ಎಲ್ಲಾ ಕಡೆಯೂ ಮಂಜುನಾಥ್ ಪರವಾದ ವಾತಾವರಣವಿದೆ’ ಎಂದರು.
‘ರಾಜಕಾರಣದ ಕುರಿತು ಜನರಿಗೆ ಒಳ್ಳೆಯ ಭಾವನೆ ಬರಬೇಕಾದರೆ ಮಂಜುನಾಥ್ ಅವರು ಗೆಲ್ಲಬೇಕು. ಅವರ ಸಾಧನೆ ಮತ್ತು ಕೊಡುಗೆ ಜನರ ಕಣ್ಣಮುಂದಿದೆ. ಚಿನ್ನ 24 ಕ್ಯಾರೆಟ್ ಇದ್ದಾಗ ಒಳ್ಳೆಯ ಚಿನ್ನ ಎನ್ನುವಂತೆ, ಕ್ಷೇತ್ರದಲ್ಲಿರುವ ಅಭ್ಯರ್ಥಿಗಳಲ್ಲಿ ಮಂಜುನಾಥ್ ಸಹ 24 ಕ್ಯಾರೆಟ್ ಚಿನ್ನದಂತಹ ವ್ಯಕ್ತಿ’ ಎಂದು ತಿಳಿಸಿದರು.
‘ರಾಜಕೀಯಕ್ಕೆ ಹೊಸಬರು ಎಂಬುದೇ ಮಂಜುನಾಥ್ ಅವರಿಗೆ ಪ್ಲಸ್ ಪಾಯಿಂಟ್. ಜನ ಅವರನ್ನು ರಾಜಕಾರಣಿ ಬದಲು, ಸಮಾಜ ಸೇವಕ ಹಾಗೂ ಸಮಾಜ ಕಟ್ಟುವ ವ್ಯಕ್ತಿಯಂತೆ ನೋಡುತ್ತಿದ್ದಾರೆ. ರಾಜಕೀಯಕ್ಕೆ ಹೊಸಬರಿದ್ದರೂ ರಾಜಕೀಯ ಅವರಿಗೆ ಹೊಸದಲ್ಲ. ರಾಜಕೀಯ ಕುಟುಂಬದ ದೊಡ್ಡ ಹಿನ್ನೆಲೆ ಇದ್ದರೂ ಅವರೆಂದೂ ಅದನ್ನು ಹೇಳಿಕೊಂಡಿಲ್ಲ. ಇದೇ ಜನರಿಗೆ ಇಷ್ಟವಾಗಿರುವುದು’ ಎಂದು ಹೇಳಿದರು.
‘ಯಾರಿಗೆ ರಾಜಕೀಯ ಅಭದ್ರತೆ ಹಾಗೂ ಸೋಲಿನ ಭೀತಿ ಕಾಡುತ್ತದೊ ಅವರು ಮಾತ್ರ ಜನರಿಗೆ ಆಮಿಷವೊಡ್ಡುತ್ತಾರೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ, ಎಲ್ಲಿಂದಲೋ ಬಂದಿರುವ ದುಡ್ಡನ್ನು ಚೆಲ್ಲುತ್ತಿದ್ದಾರೆ. ಆದರೆ, ಜನ ಬುದ್ದಿವಂತರಾಗಿದ್ದಾರೆ. ಆಮಿಷಗಳನ್ನು ತಿರಸ್ಕರಿಸಿ ತಮ್ಮ ಇಚ್ಛೆ ಏನೆಂದು ಮತದಾನದ ದಿನದಂದು ತೋರಿಸುತ್ತಾರೆ. ಮುಂದಿನ ತಲೆಮಾರು ಹೇಗಿರಬೇಕೆಂಬುದನ್ನು ವಿವೇಚನೆ ಬಳಸಿ ನಿರ್ಧರಿಸಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.