ADVERTISEMENT

ರಾಮನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಶಕ್ತಿ ಪ್ರದರ್ಶನ

ಚನ್ನಪಟ್ಟಣ, ರಾಮನಗರ, ಬಿಡದಿಯಲ್ಲಿ ದಿನವಿಡೀ ಮೆರವಣಿಗೆ: ಇಂದು ಕನಕಪುರದಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 4:24 IST
Last Updated 5 ಮಾರ್ಚ್ 2023, 4:24 IST
ಚನ್ನಪಟ್ಟಣ–ರಾಮನಗರದಲ್ಲಿ ಶನಿವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ನಾಯಕರಿಗೆ ಕಾರ್ಯಕರ್ತರು ಬೃಹತ್‌ ಹೂವಿನ ಹಾರ ಸಮರ್ಪಿಸಿದರು
ಚನ್ನಪಟ್ಟಣ–ರಾಮನಗರದಲ್ಲಿ ಶನಿವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ನಾಯಕರಿಗೆ ಕಾರ್ಯಕರ್ತರು ಬೃಹತ್‌ ಹೂವಿನ ಹಾರ ಸಮರ್ಪಿಸಿದರು   

ರಾಮನಗರ: ಜಿಲ್ಲೆಯಲ್ಲಿ ಶನಿವಾರ ದಿನವಿಡೀ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ಪಕ್ಷದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಪಕ್ಷದ ನಾಯಕರ ದಂಡೇ ಯಾತ್ರೆಯಲ್ಲಿ ನೆರೆದಿತ್ತು.

ಬೆಳಿಗ್ಗೆ ಚನ್ನಪಟ್ಟಣದ ಅಪ್ರಮೇಯ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಯಾತ್ರೆ ಆರಂಭಗೊಂಡಿತು. ಕಾರ್ಯಕ್ರಮಕ್ಕೆಂದೇ ಸಿದ್ಧಪಡಿಸಲಾದ ವಾಹನ ಏರಿದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಕಂದಾಯ ಸಚಿವ ಆರ್. ಅಶೋಕ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ, ಜಿಲ್ಲಾ ಅಧ್ಯಕ್ಷ ಹುಲುವಾಡಿ ದೇವರಾಜು ಮತ್ತಿತರರು ಮೆರವಣಿಗೆಯ ಉದ್ದಕ್ಕೂ ಕಾಂಗ್ರೆಸ್–ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಹೋದರು. ಚನ್ನಪಟ್ಟಣದ ಸಂಭಾವ್ಯ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ ಬೆಂಬಲಿಸುವಂತೆ ಕೈ ಮುಗಿದರು.

ಚನ್ನಪಟ್ಟಣದ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಜನರು ಬಂದಿದ್ದರು. ಅಪ್ರಮೇಯಸ್ವಾಮಿ ದೇಗುಲದಿಂದ ಮೆರವಣಿಗೆ ಆರಂಭಗೊಂಡು ಬೈಕ್‌ ರ್‍ಯಾಲಿಯೊಂದಿಗೆ ಚಿಕ್ಕಮಳೂರು, ಮಂಗಳವಾರ ಪೇಟೆಗೆ ಬಂದಿತು. ಅಲ್ಲಿ ಮಹಿಳೆಯರು ಪೂರ್ಣ ಕುಂಭದೊಂದಿಗೆ ನಾಯಕರನ್ನು ಸ್ವಾಗತಿಸಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಾಯಕರು ಅಲ್ಲಿಂದ ಎಂ.ಜಿ. ರಸ್ತೆ ಮೂಲಕ ಸಾಗಿ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲೂ ಸಾಗಿಬಂದರು. ಕಾರ್ಯಕರ್ತರು ಬೃಹತ್‌ ಹೂವಿನ ಹಾರಗಳು, ಪುಷ್ಪ ವೃಷ್ಟಿಯ ಮೂಲಕ ಸ್ವಾಗತ ಕೋರಿದರು.

ADVERTISEMENT

ಮಧ್ಯಾಹ್ನ ಕಾಮತ್‌ ಹೋಟೆಲ್‌ನಲ್ಲಿ ಜೋಳದ ರೊಟ್ಟಿ ಸವಿದ ಮುಖಂಡರು ಆದಿಚುಂಚನಗಿರಿ ಶಾಖಾಮಠಕ್ಕೆ ಭೇಟಿ ಕೊಟ್ಟರು. ಮಧ್ಯಾಹ್ನ 3.30ರ ಸುಮಾರಿಗೆ ಅರ್ಚಕರಹಳ್ಳಿಯ ಮಹದೇಶ್ವರ ದೇವಸ್ಥಾನದಿಂದ ಮತ್ತೆ ಮೆರವಣಿಗೆಯು ಆರಂಭಗೊಂಡಿತು. ಇಲ್ಲಿಯೂ ಬೈಕ್‌ ರ್‍ಯಾಲಿ ಜೊತೆಗೆ ನಾಯಕರು ಸಾಗಿದರು. ಐಜೂರು ವೃತ್ತ, ಎಂ.ಜಿ. ರಸ್ತೆ, ಪಿಡಬ್ಲ್ಯುಡಿ ವೃತ್ತ ಮಾರ್ಗವಾಗಿ ಸಾಗಿ ಆಂಜನೇಯಸ್ವಾಮಿ ಪ್ರತಿಮೆ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ನಾಯಕರು ಸರ್ಕಾರದ ಸಾಧನೆಯನ್ನು ಬಿಂಬಿಸುವ ಪ್ರಯತ್ನ ಮಾಡಿದರು. ಇಲ್ಲಿ ಇವರೊಟ್ಟಿಗೆ ರೇಷ್ಮೆ ಕೈಗಾರಿಕೆಗಳ ನಿಗಮದ ಅಧ್ಯಕ್ಷ ಗೌತಮ್‌ ಗೌಡ ಸಹ ಜೊತೆಗಿದ್ದರು.

ಸಂಜೆ ಬಿಡದಿಯಲ್ಲೂ ವಿಜಯ ಸಂಕಲ್ಪ ಯಾತ್ರೆಯ ಸದ್ದು ಮೊಳಗಿತು. ಬಿಜಿಎಸ್ ವೃತ್ತದಲ್ಲಿನ ಬಾಲಗಂಗಾಧರನಾಥ ಶ್ರೀಗಳ ಪ್ರತಿಮೆಗೆ ನಮಿಸಿದ ನಾಯಕರು ಬಳಿಕ ಸರ್ಕಾರಿ ಶಾಲೆ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಿದರು. ಮೆರವಣಿಗೆ ಸಾಗಿದ ಹಾದಿಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸವಾರರು ಪರದಾಡಬೇಕಾಯಿತು.

ಕನಕಪುರದಲ್ಲಿ ಯಾತ್ರೆ: ವಿಜಯ ಸಂಕಲ್ಪ ಯಾತ್ರೆಯು ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರ ಸ್ವಕ್ಷೇತ್ರ ಕನಕಪುರ ಹಾಗೂ ನೆರೆಯ ಹಾರೋಹಳ್ಳಿ ತಾಲ್ಲೂಕಿನಲ್ಲಿ ಸಂಚಾರ ಕೈಗೊಳ್ಳಲಿದ್ದು, ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.