ADVERTISEMENT

ಬಿಜೆಪಿಯ ಡಾ. ಮಂಜುನಾಥ್ ಗೆಲುವು: ಮಲೆ ಮಹದೇಶ್ವರನಿಗೆ ಮುಡಿ ಕೊಟ್ಟ ಮುಸ್ಲಿಂ ಮುಖಂಡ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 13:34 IST
Last Updated 6 ಜೂನ್ 2024, 13:34 IST
   

ಕನಕಪುರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಸಿ.ಎನ್‌. ಮಂಜುನಾಥ್ ಅವರ ಗೆಲುವಿಗಾಗಿ ಹರಕೆ ಹೊತ್ತಿದ್ದ ತಾಲ್ಲೂಕಿನ ಜೆಡಿಎಸ್ ಮುಖಂಡ ಯೂನಿಸ್ ಅಲಿಖಾನ್ ಅವರು, ಮಂಜುನಾಥ್ ವಿಜಯ ಸಾಧಿಸುತ್ತಿದ್ದಂತೆ ಮಲೆ ಮಹದೇಶ್ವರ ದೇವಸ್ಥಾನಕ್ಕೆ ತೆರಳಿ ಮುಡಿ ಕೊಟ್ಟಿದ್ದಾರೆ.

ಚುನಾವಣೆಯ ಫಲಿತಾಂಶ ಜೂನ್ 4ರಂದು ಹೊರಬಿದ್ದ ಮಾರನೇಯ ದಿನವೇ ಖಾನ್ ಅವರು, ತಮ್ಮೂರಿನ ಪಕ್ಷದ ಕಾರ್ಯಕರ್ತರೊಂದಿಗೆ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವರಿಗೆ ಪೂಜೆ ಸಲ್ಲಿಸಿದ ಬಳಿಕ, ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ. ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡಕೊಪ್ಪ ಗ್ರಾಮದ ಖಾನ್ ಅವರು ಮುಡಿ ಕೊಟ್ಟು ಹರಕೆ ತೀರಿಸಿದ ವಿಡಿಯೊ ಮತ್ತು ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹೆಸರು ಘೋಷಣೆಯಾದಾಗಲೇ ಹರಕೆ: ‘ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಗೌಡರ ಕುಟುಂಬದ ಡಾ. ಮಂಜುನಾಥ್ ಅವರ ಹೆಸರು ಘೋಷಣೆಯಾಗುತ್ತಿದ್ದಂತೆ, ಮುಸ್ಲಿಮನಾದರೂ ಅವರ ಗೆಲುವಿಗಾಗಿ ಮಹದೇಶ್ವರನಲ್ಲಿ ಹರಕೆ ಹೊತ್ತಿದ್ದೆ. ಅಂತಿಮವಾಗಿ ಗ್ರಾಮಾಂತರದಲ್ಲಿ ಡಾ. ಮಂಜುನಾಥ್ ಅವರು ಗೆಲುವು ಸಾಧಿಸಿದ್ದಾರೆ. ಹಾಗಾಗಿ, ಮಹದೇಶ್ವರನ ಸನ್ನಿಧಿಗೆ ಬಂದು ಹರಕೆ ತೀರಿಸಿದ್ದೇನೆ’ ಎಂದು ಮುಡಿ ಕೊಟ್ಟ ಬಳಿಕ ದೇವಸ್ಥಾನದ ಆವರಣದಲ್ಲಿ ಮಾಡಿರುವ ವಿಡಿಯೊದಲ್ಲಿ ಯೂನಿಸ್ ಖಾನ್ ಹೇಳಿದ್ದಾರೆ.

ADVERTISEMENT

‘ನನಗೆ ರಾಜಕೀಯ ಪ್ರಜ್ಞೆ ಬಂದಾಗಿನಿಂದಲೂ ಜೆಡಿಎಸ್‌ ಮುಖಂಡನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ನಮ್ಮ ಇಡೀ ಕುಟುಂಬವೇ ಪಕ್ಷದಲ್ಲಿದೆ. ನಮ್ಮ ತಾತ, ತಂದೆ–ತಾಯಿ ಸಹ ಜೆಡಿಎಸ್‌ನಲ್ಲಿದ್ದವರೇ. ನಮ್ಮೂರಲ್ಲಿ ಹಿಂದೂ–ಮುಸ್ಲಿಮರೆಂಬ ಯಾವುದೇ ಬೇಧ–ಭಾವವಿಲ್ಲ. ಎಲ್ಲರೂ ಅಣ್ಣ–ತಮ್ಮಂದಿರಂತೆ ಇದ್ದೇವೆ’ ಎಂದು ತಿಳಿಸಿದ್ದಾರೆ.

ಖಾನ್ ಅವರ ವಿಡಿಯೊ ಮತ್ತು ಚಿತ್ರವನ್ನು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.