ರಾಮನಗರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕನಕಪುರ ರಾಜಕಾರಣದ ಅಖಾಡಕ್ಕೆ ಇಳಿದಿದ್ದು, ಮಂಗಳವಾರ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.
ಕನಕಪುರ ಹೊರವಲಯದ ಕಾಳೇಗೌಡನದೊಡ್ಡಿ ಬಳಿಯ ತೋಟದ ಮನೆಯೊಂದರಲ್ಲಿ ಮಂಗಳವಾರ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
‘ಡಿಕೆಶಿ ಸಹೋದರರು ಮಾಡಿರುವ ಅನ್ಯಾಯ ಒಂದೆರೆಡಲ್ಲ. ಇಲ್ಲಿನ ಕಲ್ಲುಬಂಡೆಗಳೇ ಅದಕ್ಕೆ ಸಾಕ್ಷಿ. ದೆಹಲಿಯಲ್ಲಿ ಗಾಂಧಿ ಕುಟುಂಬ, ಕನಕಪುರದಲ್ಲಿ ಡಿಕೆಶಿ ಕುಟುಂಬಕ್ಕೆ ಅಧಿಕಾರವಾದರೆ ಇನ್ನೆಲ್ಲಿಯ ಪ್ರಜಾಪ್ರಭುತ್ವ? ಈ ಏಕಚಕ್ರಾಧಿಪತ್ಯ ಕೊನೆಗಾಣಿಸಲು ಈಗ ಕಾಲ ಸನ್ನಿಹಿತವಾಗಿದೆ’ ಎಂದರು.
‘ಮೀಸಲಾತಿಯನ್ನು ಭಿಕ್ಷೆ ಎನ್ನುತ್ತಿರುವ ಕಾಂಗ್ರೆಸ್‌ಗೆ ಜನ ಕಾಣುವುದಿಲ್ಲ. ಬರೀ ಸರ್ವೇ ನಂಬರ್ ಮತ್ತು ಬಂಡೆಗಳೇ ಕಾಣುತ್ತವೆ. ನಾನು ಕೊಟ್ಟೆ, ನಾನು ಕೊಟ್ಟೆ, ಎನ್ನುತ್ತಿರುವ ಸಿದ್ದರಾಮಯ್ಯ, ಬಡವರ ಅಕ್ಕಿಗೆ ಮೋದಿ ₹29 ಕೊಟ್ಟಿದ್ದಾರೆ. ನೀವು ಕೊಟ್ಟಿರುವುದು ಕೇವಲ ₹3. ಇದು ಅಕ್ಕಿಯ ಚೀಲಕ್ಕೆ ಸಾಲುವುದಿಲ್ಲ. ಅಕ್ಕಿಯ ಚೀಲಕ್ಕೆ ಹಣ ಕೊಟ್ಟು ನಾನು ಕೊಟ್ಟೆ ಎಂದರೆ ಯಾರ ಯೋಜನೆ ಎಲ್ಲಿಂದ ಕೊಟ್ಟಿರಿ ಎಂದು ದೇಶದ ಜನತೆ ಮುಂದೆ ಅಂಕಿ ಅಂಶಗಳನ್ನಿಟ್ಟು ಮಾತನಾಡಿ’ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟರು.
‘ತಾಯಿಯನ್ನೇ ಪಣವಾಗಿಟ್ಟು ರಾಜಕಾರಣ ಮಾಡಿದವರ ನೆಲದಲ್ಲಿ ಜೆಡಿಎಸ್ ಕೂಡ ಹೊರತಾಗಿಲ್ಲ. ನೀನು ಚಿವುಟಿದ ಹಾಗೆ ಮಾಡು ನಾನು ಕೆರೆದ ಹಾಗೆ ಮಾಡುತ್ತೀನಿ ಎಂದು ಮಾಡಿ, ಕೊನೆಗೆ ಜೋಡೆತ್ತುಗಳಾಗುತ್ತಾರೆ. ಈ ಜೋಡೆತ್ತುಗಳು ಕೆಲಸ ಮಾಡಲು ಅಲ್ಲ, ಇವು ಮೇಯುವ ಜೋಡೆತ್ತುಗಳು. ರಾಜ್ಯವೆಲ್ಲಾ ಸುತ್ತಾಡಿದ ಪಂಚರತ್ನ ಯಾತ್ರೆ ಕನಕಪುರದಲ್ಲೇ ಯಾಕೆ ಪಂಚರ್ ಆಗುತ್ತದೆ ಎಂದು ರಾಜ್ಯ ಮತ್ತು ತಾಲ್ಲೂಕಿನ ಜನತೆ ಅರಿತಿದ್ದಾರೆ’ ಎಂದು ಸಂತೋಷ್ ಟೀಕಿಸಿದರು.
ಬಿಜೆಪಿ ಅಭ್ಯರ್ಥಿ ಆರ್. ಅಶೋಕ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿ ಗೌಡ, ಚುನಾವಣಾ ಉಸ್ತುವಾರಿ ಅಜಾದ್‌ಸಿಂಗ್, ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ಗ್ರಾಮಾಂತರ ಅಧ್ಯಕ್ಷ ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.
ಕನಕಪುರ: ದೆಹಲಿಯಲ್ಲಿ ಗಾಂಧಿ ಕುಂಟುಂಬಕ್ಕೆ ಕನಕಪುರದಲ್ಲಿ ಡಿಕೆಶಿ ಕುಟುಂಬಕ್ಕೆ ಮಾತ್ರ ರಾಜಕೀಯ ಅಧಿಕಾರ ದೊರೆತರೆ ಸಾಲದು ಸಾಮಾನ್ಯ ವ್ಯಕ್ತಿಗೂ ರಾಜಕೀಯ ಶಕ್ತಿ ದೊರೆಕಬೇಕು ಎಂದು ಸಂತೋಷ್ ಹೇಳಿದರು.
‘ಇಂದಿರಾಗಾಂಧಿ ದರ್ಪದಿಂದ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದಾಗ ದೇಶದ ಜನತೆ ಸೋಲಿನ ರುಚಿ ತೋರಿಸಿದ್ದರು. ಇಲ್ಲಿನವರು ಅವರಿಗಿಂತ ದೊಡ್ಡವರೇನಲ್ಲ. ಈ ಬಾರಿ ಚುನಾವಣೆಯಲ್ಲಿ ಅದುಮಿಟ್ಟಿರುವ ಆಕ್ರೋಶದ ಕಟ್ಟೆ ಇವಿಎಂ ಯಂತ್ರದ ಮುಂದೆ ಒಡೆಯಲಿದೆ’ ಎಂದು ಅಭಿಪ್ರಾಯಪಟ್ಟರು.
ಡಿಕೆಶಿ ತಾವು ರಾಜಕೀಯವಾಗಿ ಬೆಳೆಯಲು ಬೇರೆಯವರನ್ನು ತುಳಿದಿದ್ದಾರೆ. ಇಡೀ ಜಿಲ್ಲೆಯ ರಾಜಕೀಯ ಶಕ್ತಿ ತಮ್ಮ ಕುಟುಂಬದ ಬಳಿಯೇ ಇರುವಂತೆ ನೋಡಿಕೊಂಡಿದ್ದಾರೆ. ತಮ್ಮನ್ನು ಬಿಟ್ಟು ಬೇರೆ ಯಾರೂ ರಾಜಕೀಯವಾಗಿ ಬೆಳೆಯುವುದನ್ನು ಡಿಕೆಶಿ ಸಹೋದರರು ಸಹಿಸುವುದಿಲ್ಲ. ಇದು ಇವರ ಮತ್ತು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಇಡಿ ವ್ಯವಸ್ಥೆಯನ್ನು ಡಿಕೆ ಸಹೋದರರು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ಇವರ ಕಪಿಮುಷ್ಠಿಯಿಂದ ಕ್ಷೇತ್ರವನ್ನು ಬಿಡುಗಡೆಗೊಳಿಸುವ ಕಾಲ ಸನ್ನಿಹಿತವಾಗಿದೆ. ತಾಲ್ಲೂಕಿನ ಜನತೆ ಈ ಒಂದು ಬದಲಾವಣೆಯನ್ನು ಈ ಬಾರಿ ತರಲಿದ್ದಾರ ಎಂದು ಹೇಳಿದರು.
‘ನಾವು ವೈಯಕ್ತಿಕವಾಗಿ ಯಾರನ್ನೂ ದ್ವೇಷಿಸುವುದಿಲ್ಲ. ತಮ್ಮ ವ್ಯಕ್ತಿಗತ ಅಭಿವೃದ್ಧಿಗೆ ಇಡೀ ಸಮಾಜ ಬಲಿಕೊಡುವ ವ್ಯವಸ್ಥೆ ಬುಡಮೇಲು ಮಾಡುವವರ ವಿರುದ್ದ ಮಾತನಾಡುತ್ತೇವೆ. ನಮ್ಮದು ರಿಯಲ್ ಎಸ್ಟೇಟ್ ಹಣದಲ್ಲಿ ಕಟ್ಟಿದ ಪಕ್ಷವಲ್ಲ. ಕಾರ್ಯಕರ್ತರ ಬೆವರ ಹನಿ ಶ್ರಮದ ಹಣದಿಂದ ಕಟ್ಟಿದ ಪಕ್ಷ’ಎಂದು ಸಂತೋಷ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.