ADVERTISEMENT

ಜನರು ಆಶೀರ್ವಾದ ಮಾಡುವ ವಿಶ್ವಾಸವಿದೆ: ಸಿ.ಪಿ.ಯೋಗೇಶ್ವರ್

ತಾಲ್ಲೂಕಿನ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಸೇರಿದ್ದೇನೆ: ಸಿ.ಪಿ.ಯೋಗೇಶ್ವರ್

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 7:26 IST
Last Updated 30 ಅಕ್ಟೋಬರ್ 2024, 7:26 IST
ಚನ್ನಪಟ್ಟಣ ತಾಲ್ಲೂಕಿನ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಮಾತನಾಡಿದರು. ಮಾಜಿ ಸಂಸದ ಡಿ.ಕೆ.ಸುರೇಶ್ ಇದ್ದರು
ಚನ್ನಪಟ್ಟಣ ತಾಲ್ಲೂಕಿನ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಮಾತನಾಡಿದರು. ಮಾಜಿ ಸಂಸದ ಡಿ.ಕೆ.ಸುರೇಶ್ ಇದ್ದರು   

ಚನ್ನಪಟ್ಟಣ: ‘ತಾಲ್ಲೂಕಿನ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಕ್ಷೇತ್ರದ ಜನ ನನಗೆ ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ’ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಮಾಕಳಿ ಗ್ರಾಮದಿಂದ ಮಂಗಳವಾರ ಚುನಾವಣಾ ಪ್ರಚಾರ ಆರಂಭಿಸಿದ ಅವರು ಮಾಕಳಿ ಗ್ರಾಮದಲ್ಲಿ ಮಾತನಾಡಿ, ‘ತಾಲ್ಲೂಕಿನ ಜನ ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದಾರೆ. ಎರಡು ಬಾರಿ ಸೋತಿದ್ದೇನೆ. ಜನ ಈ ಬಾರಿ ಆಶೀರ್ವಾದ ಮಾಡುವ ನಂಬಿಕೆ ಇದೆ. ನಾನು ತಾಲ್ಲೂಕಿನಲ್ಲಿ ಈ ಹಿಂದೆ ಮಾಡಿರುವ ಕೆಲಸಗಳು ಈ ಬಾರಿ ಗೆಲುವಿಗೆ ಅವಕಾಶ ಮಾಡಿಕೊಡುತ್ತವೆ’ ಎಂದರು.

‘ಎಚ್.ಡಿ.ಕುಮಾರಸ್ವಾಮಿ ಅವರು ಇಲ್ಲಿ ಎರಡು ಬಾರಿ ಗೆದ್ದರೂ ಯಾವುದೇ ಅಭಿವೃದ್ಧಿ ಮಾಡಿಲ್ಲ. ನಾನು ಶಾಸಕನಾಗಿದ್ದಾಗ ತಾಲ್ಲೂಕಿಗೆ ತಂದಿದ್ದ ಅನುದಾನವನ್ನೆ ಅವರು ಸೂಕ್ತವಾಗಿ ಬಳಕೆ ಮಾಡಿಕೊಂಡಿಲ್ಲ. ಈಗ ಮಂಡ್ಯಕ್ಕೆ ಹೋಗಿದ್ದಾರೆ. ಮಗನನ್ನು ತಂದು ನಿಲ್ಲಿಸಿದ್ದಾರೆ. ಜನರು ಜೆಡಿಎಸ್ ಎಂದು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಈ ಬಾರಿ ಅದಕ್ಕೆ ಅವಕಾಶ ಮಾಡಿಕೊಡಬೇಡಿ’ ಎಂದರು.

ADVERTISEMENT

‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ನಾನು ಗೆದ್ದರೆ ತಾಲ್ಲೂಕಿನ ಅಭಿವೃದ್ಧಿ ಮಾಡಬಹುದು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ಸೇರಿದ್ದೇನೆ. ನನಗೆ ಈ ಬಾರಿ ಅವಕಾಶ ದೊರೆತರೆ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿ ಮಾಡುತ್ತೇನೆ. ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುತ್ತೇನೆ’ ಎಂದರು.

ಸಂಸದ ಡಿ.ಕೆ. ಸುರೇಶ್ ಮಾತನಾಡಿ, ‘ಚನ್ನಪಟ್ಟಣದಲ್ಲಿ ನಮಗೆ ಹೊಸ ಹುರುಪು ಬಂದಿದೆ. ಯೋಗೇಶ್ವರ್ ಕಾಂಗ್ರೆಸ್‌ಗೆ ಬಂದಿದ್ದು ಅನಿರೀಕ್ಷಿತ. ಅವರ ನಂತರ ಆರು ಮಂದಿ ಬಿಜೆಪಿಯಿಂದ ಗೆದ್ದಿದ್ದ ನಗರಸಭೆ ಸದಸ್ಯರು ಬಂದಿದ್ದಾರೆ. ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಸಹ ಪಕ್ಷಕ್ಕೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಮಂದಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ’ ಎಂದರು.

ಯೋಗೇಶ್ವರ್ ತಾಲ್ಲೂಕಿನ ಮಾಕಳಿ ಪ್ಲಾಂಟೇಷನ್, ಮಾಕಳಿ ಹೊಸಳ್ಳಿ, ಪಟೇಲರದೊಡ್ಡಿ, ದಶವಾರ, ಚಿಕ್ಕೇನಹಳ್ಳಿ, ನಾಗವಾರ, ಕೆಲಗೆರೆ, ಬೇವೂರು, ಗುಡ್ಡೆ ತಿಮ್ಮಸಂದ್ರ, ಗೌಡಗೆರೆ, ಕದರಮಂಗಲ, ಬೇವೂರುಮಂಡ್ಯ, ಬೊಮ್ಮನಾಯಕನಹಳ್ಳಿ, ಅರಳಾಪುರ, ಹೊನ್ನಾಯಕನಹಳ್ಳಿ, ತೆಂಕನಹಳ್ಳಿ, ಗುಡ್ಡೆಹೊಸೂರು, ಎಚ್.ಬ್ಯಾಡರಹಳ್ಳಿ ಸೇರಿದಂತೆ ಹಲವೆಡೆ ಪ್ರಚಾರ ನಡೆಸಿದರು.

ಯೋಗೇಶ್ವರ್ ಪ್ರಚಾರದ ವೇಳೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಅಭಿಮಾನಿಗಳು ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ ಸ್ವಾಗತ ಕೋರಿದರು.

ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಅಧ್ಯಕ್ಷ ರಘುನಂದನ್ ರಾಮಣ್ಣ, ಕುಣಿಗಲ್ ಶಾಶಕ ರಂಗನಾಥ್, ಮಾಜಿ ಶಾಸಕ ಎಂ.ಸಿ.ಅಶ್ವಥ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ಸುನಿಲ್, ದುಂತೂರು ವಿಶ್ವನಾಥ್, ಸ್ಥಳೀಯ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.