ರಾಮನಗರ: ‘ಸಮಬಲದ ಪೈಪೋಟಿ ಇದೆ. ಯಾರೇ ಗೆದ್ದರೂ ಮತಗಳ ಅಂತರ ಹೆಚ್ಚೇನೂ ಇರದು...’– ಚನ್ನಪಟ್ಟಣ ಉಪ ಚುನಾವಣೆಯ ಫಲಿತಾಂಶ ಕುರಿತು ಕ್ಷೇತ್ರದ ಒಳಗೆ ಮತ್ತು ಹೊರಗಡೆ ಸಾಮಾನ್ಯವಾಗಿ ಕೇಳಿ ಬರುತ್ತಿದ್ದ ಅಭಿಪ್ರಾಯವಿದು. ಆದರೆ, ಮತದಾರರು ಮಾತ್ರ ಎಲ್ಲಾ ಲೆಕ್ಕಾಚಾರವನ್ನು ಹುಸಿಗೊಳಿಸಿ, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರಿಗೆ ಗೆಲುವಿನ ಸಿಹಿ ಕೊಟ್ಟಿದ್ದಾರೆ.
ಒಟ್ಟು 20 ಸುತ್ತುಗಳ ಮತ ಎಣಿಕೆಯಲ್ಲಿ ಯೋಗೇಶ್ವರ್ ಮೊದಲ ಸುತ್ತಿನಲ್ಲಿ 5,124 ಮತಗಳನ್ನು ಪಡೆದು 49 ಮತಗಳ ಮುನ್ನಡೆ ಪಡೆದರು. ನಂತರ ಆರನೇ ಸುತ್ತಿನವರೆಗೆ ಯೋಗೇಶ್ವರ್ ಅವರನ್ನು ಹಿಂದಿಕ್ಕಿದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 783 ಮತಗಳ ಮುನ್ನಡೆ ಸಾಧಿಸಿದರು. 7ನೇ ಸುತ್ತಿನ ಎಣಿಕೆಯಿಂದ ಕಡೆಯವರೆಗೆ ಸಿಪಿವೈ ಹಿಂದೆ ತಿರುಗಿ ನೋಡದೆ ಮುನ್ನಡೆ ಸಾಧಿಸುತ್ತಾ ಅಂತಿಮವಾಗಿ 1,12,642 ಮತಗಳನ್ನು ಪಡೆದು ಗೆದ್ದರು.
ತೀವ್ರ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದ್ದ ನಿಖಿಲ್ 87,229 ಮತಗಳನ್ನಷ್ಟೇ ಪಡೆದರು. ಪಟ್ಟಣದ ಜೊತೆಗೆ ಜೆಡಿಎಸ್ ಪ್ರಾಬಲ್ಯದ ಗ್ರಾಮೀಣ ಭಾಗದಲ್ಲೂ ಯೋಗೇಶ್ವರ್ ಮತ ಗಳಿಸಿ ತಮ್ಮ ಗೆಲುವು ಖಾತ್ರಿಪಡಿಸಿಕೊಂಡರು. ಹಿಂದಿನ ಎರಡು ಚುನಾವಣೆಗಳಲ್ಲಿ ಜೆಡಿಎಸ್ ಜೊತೆಗಿದ್ದ ಅಲ್ಪಸಂಖ್ಯಾತರು, ಈ ಸಲ ಬಿಜೆಪಿ ಕಾರಣಕ್ಕಾಗಿ ‘ಕೈ’ ಹಿಡಿದರು. ಇದು ಫಲಿತಾಂಶದ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು.
ದಾಖಲೆಯ ಮತದಾನ: ಉಪ ಚುನಾವಣೆಗಳು ಸೇರಿದಂತೆ ಕ್ಷೇತ್ರವು ಇದುವರೆಗೆ ಕಂಡಿರುವ 19 ವಿಧಾನಸಭಾ ಚುನಾವಣೆಗಳಲ್ಲಿ ಈ ಸಲದ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಶೇ 88.81ರಷ್ಟು ಮತದಾನವಾಗಿತ್ತು. ಮತ ಪ್ರಮಾಣದ ಹೆಚ್ಚಳವು ಯಾರಿಗೆ ಪೂರಕ ಮತ್ತು ಮಾರಕವಾಗಲಿದೆ ಎಂದು ಗರಿಗೆದರಿದ್ದ ಚರ್ಚೆಗೆ ಫಲಿತಾಂಶದಿಂದ ಸ್ಪಷ್ಟ ಉತ್ತರ ಸಿಕ್ಕಿದೆ. ಅದರ ಪ್ರಯೋಜನ ಯೋಗೇಶ್ವರ್ ಪಡೆದಿರುವುದು ನಿಚ್ಚಳವಾಗಿದೆ.
ಯೋಗೇಶ್ವರ್ 1999ರಿಂದ ಇದುವರೆಗೆ ಎದುರಿಸುವ 10 ವಿಧಾನಸಭಾ ಚುನಾವಣೆಗಳಲ್ಲಿ ಅವರಿಗಿದು ಆರನೇ ಗೆಲುವು. ತಮ್ಮ ರಾಜಕೀಯ ಪಯಣದಲ್ಲಿ ಆರು ಸಲ ಶಾಸಕನಾಗಿ, ಎರಡು ಸಲ ಸಚಿವ ಸ್ಥಾನ ಅಲಂಕರಿಸಿದ ಹೆಮ್ಮೆ ಅವರದ್ದು. ಇದೀಗ, ಉಪ ಚುನಾವಣೆಯಲ್ಲಿ ಗೆದ್ದು ಬೀಗಿರುವ ಅವರು, ಮೂರೂವರೆಗೆ ವರ್ಷ ಕ್ಷೇತ್ರವನ್ನು ಶಾಸಕರಾಗಿ ಪ್ರತಿನಿಧಿಸಲಿದ್ದಾರೆ.
ಠೇವಣಿ ಕಳೆದುಕೊಂಡ 29 ಮಂದಿ: ಕಣದಲ್ಲಿ 31 ಅಭ್ಯರ್ಥಿಗಳು ಇದ್ದಿದ್ದರಿಂದ ಕ್ಷೇತ್ರದ ಚುನಾವಣೆಯನ್ನು ಮೊದಲ ಬಾರಿಗೆ 2 ಇವಿಎಂಗಳಲ್ಲಿ ನಡೆಸಲಾಗಿತ್ತು. ಪ್ರಮುಖ ಅಭ್ಯರ್ಥಿಗಳಾದ ಯೋಗೇಶ್ವರ್ ಮತ್ತು ನಿಖಿಲ್ ಸೇರಿದಂತೆ 10 ಮಂದಿ ಪಕ್ಷಗಳ ಹುರಿಯಾಳುಗಾಗಿದ್ದರೆ, 21 ಮಂದಿ ಪಕ್ಷೇತರರಾಗಿರು. ಇದೀಗ 29 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ನೋಟಾಗೆ 427 ಮಂದಿ ಮತ ಹಾಕಿದ್ದಾರೆ.
ಪಕ್ಷೇತರ ಅಭ್ಯರ್ಥಿ ನಿಂಗರಾಜು ಎಸ್‌ಡಿಎಸ್‌ಎಸ್ ಶನಕನಕಪುರ 2,352 ಹಾಗೂ ಜೆ.ಟಿ. ಪ್ರಕಾಶ್ 1,649 ಮಾತ್ರ ನಾಲ್ಕಂಕಿಯ ಮತಗಳನ್ನ ಪಡೆದಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿ ಸೇರಿದಂತೆ ಉಳಿದಂತೆ ಯಾರೂ ಮೂರಂಕಿ ಮತಗಳನ್ನು ದಾಟಿಲ್ಲ. ಎಸ್‌ಡಿಪಿಐ ಅಭ್ಯರ್ಥಿ ಮೊಹಮ್ಮದ್ ಫಾಜಿಲ್ ಪಡೆಯುವ ಮತಗಳು ಪ್ರಮುಖ ಅಭ್ಯರ್ಥಿಗಳ ಗೆಲುವಿಗೆ ಮುಳುವಾಗಲಿದೆ ಎಂಬ ಲೆಕ್ಕಾಚಾರವನ್ನು ಮತದಾರ ಹುಸಿಗೊಳಿಸಿದ್ದಾನೆ.
ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿಗಳು ಸೇರಿದಂತೆ ಯಾವ ಜನಪ್ರತಿನಿಧಿಗಳು ಸಹ ಸುಳಿಯಲಿಲ್ಲ. ಗೆಲುವು ಖಚಿತವಾದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರು ಮಾಜಿ ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಇತರ ಶಾಸಕರೊಂದಿಗೆ ಎಣಿಕೆ ಕೇಂದ್ರದತ್ತ ಸಂಜೆ ಬಂದು ಪ್ರಮಾಣಪತ್ರ ಸ್ವೀಕರಿಸಿದರು.
ಯೋಗೇಶ್ವರ್ ಗೆಲುವಿಗೆ ಕಾರಣಗಳು ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದು ಚುನಾವಣೆ ಎದುರಿಸಲು ಹೆಚ್ಚಿನ ಬಲ ತಂದು ಕೊಟ್ಟಿತು. ಬಿಜೆಪಿಯಲ್ಲಿದ್ದ ಕಾರಣಕ್ಕೆ ದೂರವಾಗಿದ್ದ ಅಲ್ಪಸಂಖ್ಯಾತರು ಮತ್ತೆ ಯೋಗೇಶ್ವರ್ ಬೆನ್ನಿಗೆ ನಿಂತರು. ಬಿಜೆಪಿ ಜೊತೆಗಿನ ಮೈತ್ರಿ ಕಾರಣಕ್ಕೆ ಜೆಡಿಎಸ್ ವಿರುದ್ಧ ಒಂದಾದ ಅಹಿಂದ ವರ್ಗ ಕಾಂಗ್ರೆಸ್ ಬೆಂಬಲಿಸಿತು. ಯೋಗೇಶ್ವರ್‌ಗೆ ಚುನಾವಣೆಗೆ ಹೆಗಲು ಕೊಟ್ಟ ಡಿ.ಕೆ ಸಹೋದರರು. ಆರಂಭದಿಂದ ಕೊನೆಯವರೆಗೆ ಪ್ರಚಾರಕ್ಕೆ ಸಾಥ್ ನೀಡಿದ ಮಾಜಿ ಸಂಸದ ಡಿ.ಕೆ. ಸುರೇಶ್. ಯೋಗೇಶ್ವರ್ ಪ್ರಚಾರಕ್ಕೆ ಶಕ್ತಿ ತುಂಬಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟ ಸಚಿವರು ಶಾಸಕರು ಮುಖಂಡರು. ಯೋಗೇಶ್ವರ್ ಕೈ ಹಿಡಿದ ಸತತ ಎರಡು ಸೋಲಿನ ಅನುಕಂಪ ಹಾಗೂ ಸ್ಥಳೀಯ ಸ್ವಾಭಿಮಾನ. ಕೆರೆಗಳನ್ನು ತುಂಬಿಸಿ ತಾಲ್ಲೂಕಿಗೆ ಶಾಶ್ವತ ನೀರಾವರಿ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಯೋಗೇಶ್ವರ್‌ಗೆ ಮಣೆ ಹಾಕಿದ ಮತದಾರರು. ನಿಖಿಲ್ ಸೋಲಿಗೆ ಕಾರಣಗಳು ಜೆಡಿಎಸ್‌ನ ಕುಟುಂಬ ರಾಜಕಾರಣ ತಿರಸ್ಕರಿಸಿ ಸ್ಥಳೀಯ ಸ್ವಾಭಿಮಾನಕ್ಕೆ ಮಣೆ ಹಾಕಿದ ಮತದಾರರು. ಬಿಜೆಪಿ ಜೊತೆಗಿನ ಮೈತ್ರಿ ಕಾರಣಕ್ಕೆ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡ ಅಲ್ಪಸಂಖ್ಯಾತರು. ಚುನಾವಣೆ ಸಂದರ್ಭದಲ್ಲಷ್ಟೇ ಕ್ಷೇತ್ರಕ್ಕೆ ಬರುವ ಜೆಡಿಎಸ್ ನಾಯಕರು ಉಳಿದಂತೆ ಜನರ ಕಷ್ಟ–ಸುಖ ಕೇಳಲು ಕೈಗೆ ಸಿಗುವುದಿಲ್ಲ ಎಂಬ ಮಾತುಗಳು ಹರಿದಾಡತೊಡಗಿದವು. ಇದನ್ನೇ ಪ್ರಚಾರದ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್ ‘ಹೊರಗಿನವರು ಬೇಕೊ ಊರಿನ ಮಗ ಬೇಕೊ’ ಎಂದು ಸ್ಥಳೀಯ ಸ್ವಾಭಿಮಾನವನ್ನು ಕೆರಳಿಸಿತು. ಯೋಗೇಶ್ವರ್ ಗೆದ್ದರೆ ಜಿಲ್ಲೆಯವರಾದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಹಾದಿ ಸುಗಮವಾಗಲಿದೆ ಎಂಬ ಪಿಸುಮಾತಿನ ಪ್ರಚಾರ ಜೆಡಿಎಸ್ ಮತಗಳನ್ನು ಕಾಂಗ್ರೆಸ್‌ನತ್ತ ವಾಲಿಸಿತು. ಸ್ಥಳೀಯ ಜೆಡಿಎಸ್‌ನ ಇತ್ತೀಚಿನ ನಾಯಕತ್ವದ ವಿರುದ್ಧ ಹಿರಿಯ ಕಾರ್ಯಕರ್ತರ ಅಸಮಾಧಾನ ಚುನಾವಣೆ ಸಂದರ್ಭದಲ್ಲಿ ಕೆಲವೆಡೆ ಸ್ಫೋಟಗೊಂಡಿತು. ಇದರ ಲಾಭ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು. ಲೋಕಸಭಾ ಚುನಾವಣೆಯಿಂದಿಡಿದು ಉಪ ಚುನಾವಣೆವರೆಗೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು.
ಹೆಚ್ಚು ಹೊತ್ತು ಉಳಿಯದ ಕುತೂಹಲ ಕ್ಷೇತ್ರದ ಫಲಿತಾಂಶ ಏನಾಗಲಿದೆ ಎಂಬ ತೀವ್ರ ಕುತೂಹಲ ಪಕ್ಷಗಳ ಕಾರ್ಯಕರ್ತರಲ್ಲಿತ್ತು. ಹಾಗಾಗಿ ಮತ ಎಣಿಕೆ ನಡೆಯುತ್ತಿದ್ದ ರಾಮನಗರ ಹೊರವಲಯದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಹೊರಭಾಗದಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಜಮಾಯಿಸತೊಡಗಿದರು. ಗುಂಪು ಗುಂಪಾಗಿ ತಮ್ಮ ಪಕ್ಷದ ಬಾವುಟಗಳನ್ನು ಪ್ರದರ್ಶಿಸುತ್ತಾ ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಿದ್ದರು. ಆರಂಭದಿಂದ 10ನೇ ಸುತ್ತಿನ ಮತ ಎಣಿಕೆವರೆಗೆ ಇದ್ದ ಕುತೂಹಲ ಕ್ರಮೇಣ ಇಳಿಕೆಯಾಯಿತು. ಪ್ರತಿ ಸುತ್ತಿನಲ್ಲೂ ಯೋಗೇಶ್ವರ್ ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದಂತೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಉತ್ಸಾಹ ಕುಗ್ಗಿತು. ‘ಕೈ’ ಕಾರ್ಯಕರ್ತರ ವಿಜಯೋತ್ಸವ ಸುತ್ತಿನಿಂದ ಸುತ್ತಿಗೆ ಮೇರೆ ಮೀರಿತು. ತಮ್ಮ ನಾಯಕರ ಭಾವಚಿತ್ರಗಳನ್ನು ಪ್ರದರ್ಶಿಸುತ್ತಾ ಬಾವುಟಗಳನ್ನು ಪ್ರದರ್ಶಿಸಿ ಸಂಭ್ರಮಾಚಿಸಿದರು. ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ಎಣಿಕೆ ಕ್ಷೇತ್ರದ ಆವರಣ ಹಾಗೂ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಕ್ಷೇತ್ರವನ್ನು ಇದುವರೆಗೆ ಪ್ರತಿನಿಧಿಸಿದವರು ವರ್ಷ; ಗೆದ್ದವರು ;ಪಕ್ಷ
1951;ವಿ. ವೆಂಕಟಪ್ಪ;ಕಾಂಗ್ರೆಸ್
1957;ಬಿ.ಕೆ. ಪುಟ್ಟರಾಮಯ್ಯ;ಪ್ರಜಾ ಸೋಷಿಯಲಿಸ್ಟ್ ಪಾರ್ಟಿ
1962;ಬಿ.ಜೆ. ಲಿಂಗೇಗೌಡ;ಕಾಂಗ್ರೆಸ್
1967;ಟಿ.ವಿ. ಕೃಷ್ಣಪ್ಪ;ಪಕ್ಷೇತರ
1972;ಟಿ.ವಿ. ಕೃಷ್ಣಪ್ಪ;ಪಕ್ಷೇತರ
1978;ಡಿ.ಟಿ. ರಾಮು;ಕಾಂಗ್ರೆಸ್
1983;ಎಂ. ವರದೇಗೌಡ;ಜನತಾ ಪಾರ್ಟಿ
1989;ಎಂ. ವರದೇಗೌಡ;ಜನತಾ ಪಾರ್ಟಿ
1989;ಸಾದತ್ ಅಲಿಖಾನ್;ಕಾಂಗ್ರೆಸ್
1994;ಎಂ. ವರದೇಗೌಡ;ಜೆಡಿಎಸ್
1999;ಸಿ.ಪಿ. ಯೋಗೇಶ್ವರ್ ;ಪಕ್ಷೇತರ
2004;ಸಿ.ಪಿ. ಯೋಗೇಶ್ವರ್;ಕಾಂಗ್ರೆಸ್
2008;ಸಿ.ಪಿ. ಯೋಗೇಶ್ವರ್;ಕಾಂಗ್ರೆಸ್
2009;ಎಂ.ಸಿ. ಅಶ್ವಥ್; ಜೆಡಿಎಸ್
2011;ಸಿ.ಪಿ. ಯೋಗೇಶ್ವರ್;ಬಿಜೆಪಿ
2013;ಸಿ.ಪಿ. ಯೋಗೇಶ್ವರ್;ಸಮಾಜವಾದಿ ಪಾರ್ಟಿ
2018;ಎಚ್.ಡಿ. ಕುಮಾರಸ್ವಾಮಿ;ಜೆಡಿಎಸ್
2023;ಎಚ್.ಡಿ. ಕುಮಾರಸ್ವಾಮಿ;ಜೆಡಿಎಸ್
2024;ಸಿ.ಪಿ. ಯೋಗೇಶ್ವರ್; ಕಾಂಗ್ರೆಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.