ರಾಮನಗರ/ಚನ್ನಪಟ್ಟಣ: ಉಪ ಚುನಾವಣೆಯ ಮತದಾನದ ಹಿಂದಿನ ದಿನವಾದ ಮಂಗಳವಾರ ಅಭ್ಯರ್ಥಿಗಳು ಮನೆಮನೆಗೆ ತೆರಳಿ ಮತ ಯಾಚಿಸುವ ಮೂಲಕ, ಕಡೆಗಳಿಗೆಯ ಮತಬೇಟೆ ನಡೆಸಿದರು. ಮತ್ತೊಂದೆಡೆ ಬುಧವಾರ ನಡೆಯಲಿರುವ ಮತದಾನ ನಡೆಸಲು ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತೆರೆದಿರುವ ಮಸ್ಟರಿಂಗ್ ಕೇಂದ್ರದಿಂದ ಸಿಬ್ಬಂದಿ ಮತಯಂತ್ರದೊಂದಿಗೆ ಮತಗಟ್ಟೆಯತ್ತ ತೆರಳಿದರು.
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರು, ಪಟ್ಟಣ ಹಾಗೂ ಗ್ರಾಮೀಣ ಭಾಗದ ಮನೆ ಮನೆಗಳಿಗೆ ತೆರಳಿ ಮತ ಯಾಚಿಸಿದರು. ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಯೋಗೇಶ್ವರ್ ಅಲ್ಲಿಂದ ಕೋಟೆ ಸೇರಿದಂತೆ ವಿವಿಧ ಭಾಗದ ಮನೆ ಮನೆಗಳಿಗೆ ತೆರಳಿ ಮತ ಯಾಚಿಸಿದರು. ಹೊಂಗನೂರು, ಎಚ್. ಹೊಸಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಿಗೆ ತೆರಳಿ ತಮಗೆ ಮತ ಹಾಕುವಂತೆ ಮನವಿ ಮಾಡಿದರು.
ಕೆಲ ಮುಖಂಡರು ಹಾಗೂ ಕಾರ್ಯಕರ್ತರ ಮನೆಗೆ ಭೇಟಿ ನೀಡಿ, ಚುನಾವಣೆಯ ಬೂತ್ ಮಟ್ಟದ ಅಂತಿಮ ಸಿದ್ಧತೆಗಳ ಕುರಿತು ಚರ್ಚಿಸಿದರು. ತಮ್ಮ ಮನೆ ಹಾಗೂ ಹಳ್ಳಿಗಳಿಗೆ ಬಂದ ಯೋಗೇಶ್ವರ್ ಅವರನ್ನು ಮುತ್ತಿಕೊಂಡ ಕಾರ್ಯಕರ್ತರು, ಸಿಪಿವೈ ಪರ ಘೋಷಣೆ ಕೂಗಿ ಅಭಿಮಾನ ತೋರಿದರು. ಬೆಳಿಗ್ಗೆಯಿಂದ ಸಂಜೆವರೆಗೆ ಕ್ಷೇತ್ರ ಸಂಚಾರ ಮಾಡಿದ ಯೋಗೇಶ್ವರ್ ಕಡೆಗಳಿಗೆವರೆಗೆ ಮತಬೇಟೆ ನಡೆಸಿದರು.
ಬಾರದ ನಿಖಿಲ್: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಪ್ರಚಾರದ ಕೊನೆಯ ದಿನ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೇ ಮನೆ ಮನೆಗೆ ತೆರಳಿ ಮತ ಯಾಚಿಸಿದರು.
ಕಣದಲ್ಲಿ 31 ಅಭ್ಯರ್ಥಿಗಳಿದ್ದು, ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ನ. 23ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.