ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ನ. 23ರಂದು ಸಕಲ ಸಿದ್ದತೆ ಮಾಡಿಕೊಂಡಿದೆ. ರಾಮನಗರದ ಹೊರವಲಯದ ಅರ್ಚಕರಹಳ್ಳಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, ಹತ್ತು ದಿನಗಳ ಫಲಿತಾಂಶ ಕುತೂಹಲಕ್ಕೆ ಮಧ್ಯಾಹ್ನದ ಹೊತ್ತಿಗೆ ತೆರೆ ಬೀಳಲಿದೆ.
‘ಉಪ ಚುನಾವಣೆಯ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಭದ್ರವಾಗಿಟ್ಟಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್ ರೂಂ ಅನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಬೆಳಿಗ್ಗೆ 6.45ಕ್ಕೆ ತೆರೆಯಲಾಗುವುದು’ ಎಂದು ನಗರದ ಡಿ.ಸಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದರು.
‘ಬೆಳಿಗ್ಗೆ 7.30ಕ್ಕೆ ಒಂದು ಕೊಠಡಿಯಲ್ಲಿ ಅಂಚೆ ಮತ ಹಾಗೂ 8 ಗಂಟೆಗೆ ಎರಡು ಕೊಠಡಿಗಳಲ್ಲಿ ಇವಿಎಂ ಮತ ಎಣಿಕೆ ಆರಂಭವಾಗಲಿದೆ. ಒಟ್ಟು 14 ಟೇಬಲ್‌ಗಳಲ್ಲಿ 20 ಸುತ್ತುಗಳಲ್ಲಿ ನಡೆಯಲಿರುವ ಎಣಿಕೆ ಕಾರ್ಯಕ್ಕೆ 69 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ 23 ಮೇಲ್ವಿಚಾರಕರು, 23 ಸಹಾಯಕರು ಹಾಗೂ 23 ಸೂಕ್ಷ್ಮ ವೀಕ್ಷಕರು ಇರಲಿದ್ದಾರೆ. ರಾಜಕೀಯ ಪಕ್ಷಗಳ 250 ಏಜೆಂಟರು ಉಪಸ್ಥಿತರಿರಲಿದ್ದಾರೆ’ ಎಂದು ಹೇಳಿದರು.
‘ಪ್ರತಿ ಟೇಬಲ್‌ಗೆ ರಾಜಕೀಯ ಪಕ್ಷಗಳ ಇಬ್ಬರು ಏಜೆಂಟರಿಗೆ ಪಾಸ್ ವಿತರಿಸಲಾಗಿದೆ. ಪಕ್ಷೇತರ ಅಭ್ಯರ್ಥಿಗಳ ಏಜೆಂಟರನ್ನೂ ಒಳಗೊಂಡಂತೆ 27 ಜನರಿಗೆ ಪಾಸ್‌ಗಳನ್ನು ನೀಡಲಾಗಿದೆ. ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ, ಮುನ್ನೆಚ್ಚರಿಕೆ ಕ್ರಮವಾಗಿ ಕಾಲೇಜಿನ ಒಳಗೆ ಮತ್ತು ಹೊರಗೆ ಮೂರು ಸುತ್ತಿನ ಭದ್ರತೆ ಒದಗಿಸಲಾಗಿದೆ. ಅಂದು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರಲಿದೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಿನೋಯ್ ಪಿ.ಕೆ ಇದ್ದರು.
ಅಂಕಿಅಂಶ
2,32,949 ಕ್ಷೇತ್ರದ ಒಟ್ಟು ಮತದಾರರು
1,12,324 ಪುರುಷ ಮತದಾರರು
1,20,617 ಮಹಿಳಾ ಮತದಾರರು
8 ಲಿಂಗತ್ವ ಅಲ್ಪಸಂಖ್ಯಾತರು
ಅಂಕಿಅಂಶ
2,06,886
ಚುನಾವಣೆಯಲ್ಲಿ ಮತ ಚಲಾಯಿಸಿದವರು
1,00,508 ಪುರುಷ ಮತದಾರರು
1,06,375 ಮಹಿಳಾ ಮತದಾರರು
3 ಲಿಂಗತ್ವ ಅಲ್ಪಸಂಖ್ಯಾತರು
ಶೇ 88.81ಒಟ್ಟು ಮತ ಪ್ರಮಾಣ
ಮನೆಯಿಂದಲೇ 457 ಮಂದಿ ಮತದಾನ
‘85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅದನ್ನು ಆಯ್ಕೆ ಮಾಡಿಕೊಂಡಿದ್ದ 466 ಮತದಾರರ ಪೈಕಿ 457 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 47 ಸೇವಾ ಮತದಾರರ ಪೈಕಿ ನ. 21ರವರೆಗೆ 12 ಮತಗಳನ್ನು ಸ್ವೀಕರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.