ADVERTISEMENT

Channapatna bypoll: ಚನ್ನಪಟ್ಟಣದಲ್ಲೀಗ ಪಕ್ಷಾಂತರ ಪರ್ವ

ಓದೇಶ ಸಕಲೇಶಪುರ
Published 29 ಅಕ್ಟೋಬರ್ 2024, 4:42 IST
Last Updated 29 ಅಕ್ಟೋಬರ್ 2024, 4:42 IST
   

ರಾಮನಗರ: ಉಪ ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಸಹ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರೊಂದಿಗೆ ಗುರುತಿಸಿಕೊಂಡು ವಿವಿಧ ಹುದ್ದೆಗಳನ್ನು ಅಲಂಕರಿಸಿದವರು ಇದೀಗ ಪಕ್ಷ ತೊರೆದು ‘ಕೈ’ ಹಿಡಿಯುತ್ತಿದ್ದಾರೆ. ‘ಈ ಪಕ್ಷಾಂತರ ಆರಂಭವಷ್ಟೆ. ಬಿಜೆಪಿ ಮತ್ತು ಜೆಡಿಎಸ್‌ನ ಹಲವು ಮುಖಂಡರು ಕಾಂಗ್ರೆಸ್‌ ಸೇರಲಿದ್ದಾರೆ’ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಅಥವಾ ಪಕ್ಷೇತರರಾಗಿ ಕಣಕ್ಕಿಳಿಯುವ ಸುಳಿವು ನೀಡುತ್ತಲೇ ಬಂದಿದ್ದ ಯೋಗೇಶ್ವರ್ ಅವರು, ಯಾವುದೇ ಮುನ್ಸೂಚನೆ ನೀಡದೆ ಕಡೆಗಳಿಗೆಯಲ್ಲಿ ಕಾಂಗ್ರೆಸ್ ಸೇರಿ ಅಭ್ಯರ್ಥಿಯಾದರು. ನಾಮಪತ್ರ ಸಲ್ಲಿಸಿದ ಬಳಿಕ, ತಮ್ಮ ಜೊತೆಗೆ ಗುರುತಿಸಿಕೊಂಡಿ ದ್ದವರ ಜೊತೆ ಸರಣಿ ಸಭೆ ನಡೆಸಿ ಕಾಂಗ್ರೆಸ್‌ಗೆ ಬರುವಂತೆ ಮನವೊಲಿಸಿದ್ದರು.

ಬಹುತೇಕರು ಬೆಂಬಲಿಗರು: ‘ಬಿಜೆಪಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳಲ್ಲಿ ಹಲವರು ಯೋಗೇಶ್ವರ್ ಬೆಂಬಲಿಗರಿದ್ದಾರೆ. ಈಗ ಎಲ್ಲರನ್ನೂ ಕಾಂಗ್ರೆಸ್‌ಗೆ ತರೆ ತರಲಾಗುತ್ತಿದೆ. ಮೊದಲಿಗೆ ಎಸ್‌ಸಿ ಮೋರ್ಚಾ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಿದರು. ಇದೀಗ, ನಗರಸಭೆಯ ಸದಸ್ಯರು ಸಹ ತಮ್ಮ ನಾಯಕನನ್ನ ಹಿಂಬಾಲಿಸಿದ್ದಾರೆ. ಯೋಗೇಶ್ವರ್ ಕಾರಣಕ್ಕಾಗಿಯೇ ಇಲ್ಲಿ ಬಿಜೆಪಿ ನೆಲೆಯೂರಿತ್ತು’ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಜೆಡಿಎಸ್‌ನ ಕೆಲ ಮುಖಂಡರು ಸಹ ತಮ್ಮ ಬೆಂಬಲಿಗರೊಂದಿಗೆ ಸದ್ಯದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ. ಈ ಕುರಿತು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಿಂದೆಯೇ ಮುನ್ಸೂಚನೆ ನೀಡಿದ್ದಾರೆ. ಕ್ಷೇತ್ರದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಕೆಲ ಸ್ಥಳೀಯರು ಡಿ.ಕೆ. ಸುರೇಶ್ ಮತ್ತು ಯೋಗೇಶ್ವರ್ ನೇತೃತ್ವದಲ್ಲಿ ‘ಕೈ’ ಹಿಡಿದಿದ್ದಾರೆ. ಚುನಾವಣೆ ಕಾವು ಹೆಚ್ಚಿದಂತೆ ಕಾಂಗ್ರೆಸ್‌ಗೆ ಪಕ್ಷಾಂತರವೂ ಜೋರಾಗಲಿದೆ’ ಎಂದು ಹೇಳಿದರು.

ಮತ ಹೆಚ್ಚಿಸಿದ್ದ ಪಕ್ಷಾಂತರ!

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚನ್ನಪಟ್ಟಣದ ಮೇಲೆ ವಿಶೇಷ ಗಮನ ಹರಿಸಿದ್ದ ಡಿ.ಕೆ ಸಹೋದರರು, ಈ ಭಾಗದ ಬಿಜೆಪಿ ಮತ್ತು ಜೆಡಿಎಸ್‌ನ ಸ್ಥಳೀಯ ಮುಖಂಡರಿಂದಿಡಿದು ತಾಲ್ಲೂಕು ಮುಖಂಡರವರೆಗೆ ಹಲವರನ್ನು ತಮ್ಮ ಕಡೆಗೆ ಸೆಳೆದಿದ್ದರು. ಮಾಜಿ ಶಾಸಕ ಎಂ.ಸಿ. ಅಶ್ವಥ್ ಕೂಡ ಅದರಲ್ಲಿ ಒಬ್ಬರು. ಇದರಿಂದಾಗಿ ಕ್ಷೇತ್ರದಲ್ಲಿ ಸುರೇಶ್ ಅವರಿಗೆ, ವಿಧಾನಸಭಾ ಚುನಾವಣೆಯಲ್ಲಿ ಬಂದಿದ್ದ ಮತಗಳಿಂದ 5 ಪಟ್ಟು ಹೆಚ್ಚು ಮತಗಳು ಬಂದಿದ್ದವು. ಇದೇ ಕಾರಣಕ್ಕಾಗಿ ಸಹೋದರರು ಕ್ಷೇತ್ರದ ಉಪ ಚುನಾವಣೆ ಮೇಲೆ ಕಣ್ಣಿಟ್ಟು, ಕಾಂಗ್ರೆಸ್ ಪ್ರತಿಷ್ಠಾಪಿಸಲು ಪಣ ತೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.