ಚನ್ನಪಟ್ಟಣ: ಕಾವೇರಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಸರ್ಕಾರವನ್ನು ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ನಗರದಲ್ಲಿ ನಡೆಯುತ್ತಿರುವ ಕಾವೇರಿ ನಿರಂತರ ಹೋರಾಟ ಭಾನುವಾರ ಇನ್ನೂರು ದಿನ ಪೂರೈಸಿತು.
2023ರ ಅ. 5ರಿಂದ ವೇದಿಕೆಯ ಪದಾಧಿಕಾರಿಗಳು ನಗರದಲ್ಲಿ ನಿರಂತರ ಹೋರಾಟ ಆರಂಭಿಸಿದ್ದು, 200 ದಿನಗಳಿಂದ ಪ್ರತಿದಿನ ವಿವಿಧ ಹೋರಾಟಗಳ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಹೋರಾಟದ ನೇತೃತ್ವ ಹೊತ್ತಿರುವ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ, ‘ಕಾವೇರಿ ನದಿ ನೀರು ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಾಡುವಂತೆ ವೇದಿಕೆಯಿಂದ 200 ದಿನಗಳ ಹೋರಾಟ ಪೂರೈಸಿದ್ದೇವೆ. ಈ ಹೋರಾಟಕ್ಕೆ ತಾಲ್ಲೂಕಿನ ಹೋರಾಟಗಾರರು, ಸಂಘ–ಸಂಸ್ಥೆಗಳು, ಸಾಹಿತಿಗಳು, ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿ ಬೆಂಬಲ ನೀಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ತಿಳಿಸಿದರು.
‘ಈ ಹೋರಾಟ ಮುಂದಿನ ಪೀಳಿಗೆಗೆ ನೀರನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರವನ್ನು ಎಚ್ಚರಿಸುವ ಉದ್ದೇಶವಷ್ಟೇ. ಸರ್ಕಾರವು ಲೋಕಸಭಾ ಚುನಾವಣೆ ಬಳಿಕವಾದರೂ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಮುಂದಾಗಿ, ಕಾವೇರಿ ನದಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ರಚಿಸಲಿ’ ಎಂದು ಮನವಿ ಮಾಡಿದರು.
ನಿವೃತ್ತ ಪ್ರಾಂಶುಪಾಲ ನಿಂಗೇಗೌಡ, ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೀಶ್ ಗೌಡ, ರಾಜ್ಯ ಉಪಾಧ್ಯಕ್ಷರಾದ ಶ್ರೀಧರ್, ರಂಜಿತ್ ಗೌಡ, ಪದಾಧಿಕಾರಿಗಳಾದ ಎಚ್.ಎಚ್. ಹಳ್ಳಿ ರಮೇಶ್, ರಾಮೇಗೌಡ, ಸಂಕಲಗೆರೆ ಹುಚ್ಚಯ್ಯ, ನಿವೃತ್ತ ಶಿಕ್ಷಕ ಪುಟ್ಟಪ್ಪಾಜಿ, ಹನುಮಂತನಗರ ವೆಂಕಟರಮಣಪ್ಪ, ಚಿಕ್ಕಣ್ಣಪ್ಪ, ಮಿಣಿಕೆರೆದೊಡ್ಡಿ ಬೋರೇಗೌಡ, ಹುಲುವಾಡಿ ತಮ್ಮಣ್ಣ, ಬೇವೂರು ಬೋರಯ್ಯ, ಜಯರಾಮು, ಮೆಣಸಿಗನಹಳ್ಳಿ ರಾಮಕೃಷ್ಣಪ್ಪ, ರ್ಯಾಂಬೋ ಸೂರಿ, ಬೇವೂರು ಮಧು, ಕರ್ಣ, ಪುನೀತ್, ಹುಲುವಾಡಿ ಮರಿಅಂಕೇಗೌಡ, ಶ್ರೀಕಾಂತ್, ಅಪ್ಸರ್ ಪಾಷಾ, ಇತರರು ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.