ಕನಕಪುರ: ಸೂರಿಲ್ಲದವರಿಗೆ ಸೂರು ಕಟ್ಟಿ ಕೊಡುತ್ತೇವೆಂದು ಹಣ ಕಟ್ಟಿಸಿಕೊಂಡು ಸ್ಲಂ ಬೋರ್ಡ್ ಅಧಿಕಾರಿಗಳು ನಾಲ್ಕು ವರ್ಷವಾದರೂ ಮನೆ ಕಟ್ಟಿಕೊಟ್ಟಿಲ್ಲ ಎಂದು ಫಲಾನುಭವಿಗಳು ಅಳಲು ತೋಡಿಕೊಂಡರು.
2017ರಲ್ಲಿ ಪುರಸಭೆಯು ಸ್ಲಂ ಬೋರ್ಡ್‌ನಿಂದ ಮನೆ ನಿರ್ಮಾಣ ಮಾಡಿಕೊಡುವುದಾಗಿ ಮೆಳೆಕೋಟೆ 12ನೇ ವಾರ್ಡ್‌ನಲ್ಲಿ 160 ಫಲಾನುಭವಿಗಳನ್ನು ಗುರುತಿಸಿತ್ತು. ತಮ್ಮ ಪಾಲಿನ ಹಣ ಕಟ್ಟಿಸಿಕೊಂಡು ವಂಚಿಸಲಾಗಿದೆ ಎಂಬುದು ಫಲಾನುಭವಿಗಳ ಆರೋಪ.
ಕೆಲವರ ಮನೆಗಳನ್ನು ಅರ್ಧಕ್ಕೆ ಕಟ್ಟಿ ಸ್ಥಗಿತಗೊಳಿಸಲಾಗಿದೆ. ಮತ್ತೆ ಕೆಲವರ ಮನೆಗಳಿಗೆ ತಳಪಾಯ ನಿರ್ಮಿಸಿ ಕಟ್ಟಡ ಮಾಡದೆ ನಿಲ್ಲಿಸಲಾಗಿದೆ. ಈ ರೀತಿ ಮಾಡಿರುವುದರಿಂದ ಮನೆಗಳು ಹಾಳಾಗುತ್ತಿವೆ. ಈ ಸಂಬಂಧ ಗುತ್ತಿಗೆದಾರರನ್ನು ಕೇಳಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎನ್ನುತ್ತಾರೆ ಫಲಾನುಭವಿಗಳು.
ನಗರಸಭೆಗೆ ಹೋಗಿ ಕೇಳಿದರೆ ನಿಮ್ಮ ಮನೆಗಳನ್ನು ಶೀಘ್ರವೇ ಕಟ್ಟಿ ಕೊಡುತ್ತಾರೆ ಎಂದು ಸಬೂಬು ಹೇಳಿ ಕಳುಹಿಸುತ್ತಾರೆ. ಸಣ್ಣದಾಗಿದ್ದ ಮನೆಯನ್ನು ಹೊಸದಾಗಿ ಕಟ್ಟಿ ಕೊಡುವುದಾಗಿ ಹೇಳಿ ಸ್ಮಂ ಬೋರ್ಡ್‌ನವರು ಕೆಡವಿದರು. ಈಗ ಬೇರೆಡೆ ಬಾಡಿಗೆ ಮನೆಯಲ್ಲಿದ್ದೇವೆ. ಇತ್ತ ಹಣವೂ ಇಲ್ಲ. ಅತ್ತ ಮನೆಯೂ ಇಲ್ಲದಂತಾಗಿದೆ ಎಂದು ದೂರಿದರು.
‘ನಾಲ್ಕು ವರ್ಷಗಳಿಂದ ಮನೆ ನಿರ್ಮಾಣವಾಗುತ್ತದೆ ಎಂಬ ಭರವಸೆಯಲ್ಲಿ ಕಾಯುತ್ತಿದ್ದೇವೆ. ಸರ್ಕಾರ ನಮಗೆ ಮನೆಗಳನ್ನು ಪೂರ್ಣವಾಗಿ ಕಟ್ಟಿಕೊಡದೆ ವಂಚನೆ ಮಾಡಿದೆ. ನಮಗೆ ಅನ್ಯಾಯವಾಗುತ್ತಿದ್ದರೂ ಶಾಸಕರು ಸಹಾಯಕ್ಕೆ ಬರುತ್ತಿಲ್ಲ. ನಾವು ಯಾರ ಬಳಿ ಹೋಗಬೇಕೆಂದು ಗೊತ್ತಾಗುತ್ತಿಲ್ಲ’ ಎಂದುಫಲಾನುಭವಿಗಳಾದ ಮಹಮ್ಮದ್ ಮುಜಾಯಿದ್ ಪಾಷಾ, ಯೂಸಪ್ ಷರೀಫ್, ನಗೀನಾ ತಾಜ್, ಶಾಪಿಯಾ ಖಾನಂ ದೂರಿದರು.
‘ಸರ್ಕಾರದ ಆದೇಶದಂತೆ ಮೆಳೆಕೋಟೆಯಲ್ಲಿ ಸ್ಲಂ ಬೋರ್ಡ್‌ನಿಂದ 160 ಮಂದಿಗೆ ಮನೆ ಕಟ್ಟಿಕೊಡುತ್ತಿದ್ದೇವೆ. ಫಲಾನುಭವಿಗಳು ತಮ್ಮ ಪಾಲಿನ ಹಣ ₹ 50 ಸಾವಿರದಲ್ಲಿ ಮೊದಲ ಕಂತು ₹ 20 ಸಾವಿರ, 2ನೇ ಕಂತಿನಲ್ಲಿ ₹ 20 ಸಾವಿರ ಕಟ್ಟಬೇಕು. ಎಲ್ಲರೂ ಒಟ್ಟಾಗಿ ಹಣ ಪಾವತಿಸದ ಕಾರಣ ಮನೆಯನ್ನು ಅರ್ಧಕ್ಕೆ ನಿಲ್ಲಿಸಿದ್ದೇವೆ. ಅವರ ಪಾಲಿನ ಹಣ ಕಟ್ಟಿದ ತಕ್ಷಣ ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುತ್ತೇವೆ’ ಎಂದು ಗೌರಿ ಕನ್‌ಸ್ಟ್ರಕ್ಷನ್ ಇನ್ಪ್ರಾ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್‌ನ ಗುತ್ತಿಗೆದಾರ ಮಿಥುನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.