ADVERTISEMENT

ರಾಮನಗರ | ಚಾಮುಂಡೇಶ್ವರಿ ಕರಗ ಸಂಪನ್ನ; ಕೊಂಡೋತ್ಸವ ಕಣ್ತುಂಬಿಕೊಂಡ ಭಕ್ತರು

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 5:48 IST
Last Updated 25 ಜುಲೈ 2024, 5:48 IST
ರಾಮನಗರದ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಕರಗಧಾರಕರಾದ ದೇವಿಪ್ರಸಾದ್ ಸಿಂಗ್ ಅವರು ಭಕ್ತಗಣದ ಮಧ್ಯೆ ಕೊಂಡ ಹಾಯ್ದರು
ರಾಮನಗರದ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಕರಗಧಾರಕರಾದ ದೇವಿಪ್ರಸಾದ್ ಸಿಂಗ್ ಅವರು ಭಕ್ತಗಣದ ಮಧ್ಯೆ ಕೊಂಡ ಹಾಯ್ದರು   

ರಾಮನಗರ: ಪಟ್ಟಣದ ಚಾಮುಂಡೇಶ್ವರಿ ದೇವಿಯ ಕರಗ ಮಹೋತ್ಸವವು ಬುಧವಾರ ಬೆಳಿಗ್ಗೆ ಕೊಂಡೋತ್ಸವದೊಂದಿಗೆ ಸಂಪನ್ನಗೊಂಡಿತ್ತು. ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆವರೆಗೆ ನಡೆದ ಕರಗ ಮಹೋತ್ಸವದಿಂದಾಗಿ, ಇಡೀ ನಗರದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಭಕ್ತರು ದೇವಿಯನ್ನು ಕಣ್ತುಂಬಿಕೊಂಡು ಪುನೀತರಾದರು.

ದೇವಿಯ ತವರುಮನೆಯಾದ ಸಿಂಗ್ರಾಭೋವಿದೊಡ್ಡಿಯಿಂದ ರಾತ್ರಿ ಹೊರಟ ಚಾಮುಂಡೇಶ್ವರಿ ಕರಗವು, ರಾತ್ರಿಯಿಡೀ ನಗರದ ಪ್ರಮುಖ ರಸ್ತೆಗಳನ್ನು ಸಂಚರಿಸಿತು. ಭಕ್ತರು ಕರಗ ಸಾಗುವ ಹಾದಿಯಲ್ಲಿ ಹೂವು ಹಾಕಿ, ದೇವಿಯನ್ನು ಸ್ವಾಗತಿಸಿ ಪೂಜೆ ಸಲ್ಲಿಸಿದರು. ದೇವಿ ಹೋದ ಕಡೆಯಲ್ಲೆಲ್ಲಾ ತಮಟೆ, ಡೊಳ್ಳು ಹಾಗೂ ಪಟಾಕಿ ಶಬ್ಧ ಅನುರಣಿಸಿತು.

ಚಾಮುಂಡೇಶ್ವರಿ ಕರಗದ ಜೊತೆಗೆ ಶೆಟ್ಟಿಹಳ್ಳಿಯ ಆದಿಶಕ್ತಿ, ತೋಪಖಾನ್ ಮೊಹಲ್ಲಾದ ಮುತ್ತುಮಾರಮ್ಮ, ಬಾಲಗೇರಿಯ ಬಿಸಿಲು ಮಾರಮ್ಮ, ಮಗ್ಗದಕೇರಿಯ ಮಾರಮ್ಮ, ಭಂಡಾರಮ್ಮ, ಐಜೂರಿನ ಆದಿಶಕ್ತಿ, ಕೊಂಕಾಣಿದೊಡ್ಡಿಯ ಆದಿಶಕ್ತಿ ಹಾಗೂ ಹುಲಿಯೂರಮ್ಮನವರ ಕರಗ ಮಹೋತ್ಸವವೂ ಜರುಗಿತು. ತಮ್ಮ ಓಣಿಗೆ ಬಂದ ಕರಗಗಳಿಗೆ ಭಕ್ತರು ಪೂಜೆ ಸಲ್ಲಿಸಿದರು. ದೇವಾಲಯಗಳು ರಾತ್ರಿಯಿಡಿ ತೆರೆದಿದ್ದವು. ಚಾಮುಂಡೇಶ್ವರಿ ಕರಗವನ್ನು ದೇವಿಪ್ರಸಾದ್ ಅವರು ಹೊತ್ತಿದ್ದರು.

ADVERTISEMENT

ಕರಗದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಚಾಮುಂಡಿ ಉತ್ಸವದ ರಸಮಂಜರಿ ಕಾರ್ಯಕ್ರಮ ಜನರನ್ನು ರಂಜಿಸಿತು. ಖ್ಯಾತ ಗಾಯಕರಾದ ಮಂಗ್ಲಿ, ಅನುರಾಧ ಭಟ್ ಸೇರಿದಂತೆ ಹಲವರ ಹಾಡುಗಳು ಜನರನ್ನ ಕುಣಿಸಿದವು. ನಟರಾದ ಪ್ರೇಮ್, ದುನಿಯಾ ವಿಜಯ್ ಸೇರಿದಂತೆ ಕೆಲವರು ವೇದಿಕೆಗೆ ಮೆರಗು ತಂದರು. ಮಳೆ ಸಿಂಚನವನ್ನು ಲೆಕ್ಕಿಸದೆ ಜನರು ಮಧ್ಯರಾತ್ರಿವರೆಗೆ ರಸಮಂಜರಿಯನ್ನು ಕಣ್ತುಂಬಿಕೊಂಡರು.

ಕರಗ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ದೇವಿಗೆ ವಿಶೇಷಾಲಂಕಾರ ಮಾಡಲಾಗಿತ್ತು
ಕರಗ ಮಹೋತ್ಸವ ಪ್ರಯುಕ್ತ ರಾಮನಗರದ ಚಾಮುಂಡೇಶ್ವರಿ ದೇವಿಯ ತವರುಮನೆ ಸಿಂಗ್ರಾಭೋವಿದೊಡ್ಡಿಯಲ್ಲಿರುವ ದೇವಾಲಯದಲ್ಲಿ ದೇವಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು
ಚಾಮುಂಡಿ ಉತ್ಸವ ನಡೆದ ರಾಮನಗರದ ಜೂನಿಯರ್ ಕಾಲೇಜು ಆವರಣದಲ್ಲಿ  ಮಾಡಿದ್ದ ವಿದ್ಯುದ್ದೀಪಗಳ ಅಲಂಕಾರ ಗಮನ ಸೆಳೆಯಿತು
ಚಾಮುಂಡಿ ಉತ್ಸವದಲ್ಲಿ ಗಮನ ಸೆಳೆದ ಕಲಾವಿದರ ನೃತ್ಯ
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಚಾಮುಂಡಿ ಉತ್ಸವದ ರಸಮಂಜರಿ ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವೀಕ್ಷಿಸಿದರು. ಮಾಜಿ ಸಂಸದ ಡಿ.ಕೆ. ಸುರೇಶ್ ಶಾಸಕ ಎಚ್‌.ಸಿ. ಬಾಲಕೃಷ್ಣ ಇದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.