ರಾಮನಗರ: ಚನ್ನಪಟ್ಟಣ ಉಪ ಚುನಾವಣೆ ಹೇಳಿ ಕೇಳಿ, ಎರಡು ಚುನಾವಣೆಗಳಲ್ಲಿ ಸೋಲುಂಡವರ ಕದನವಾಗಿದೆ. ಸಮಬಲದ ಪೈಪೋಟಿಗೆ ಸಾಕ್ಷಿಯಾಗಿರುವ ಚುನಾವಣೆಯಲ್ಲಿ ಯಾರು ಸತತ ಮೂರನೇ ಸೋಲಿನ ಕಹಿ ಉಣ್ಣಲಿದ್ದಾರೆ? ಯಾರಿಗೆ ಗೆಲುವಿನ ಸಿಹಿ ಸಿಗಲಿದೆ ಎಂಬ ಕುತೂಹಲಕ್ಕೆ ಇಂದು (ಶನಿವಾರ) ಉತ್ತರ ಸಿಗಲಿದೆ.
ತಮ್ಮ ತಂದೆ ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಂದ ತೆರವಾಗಿರುವ ಕ್ಷೇತ್ರದ ಉತ್ತರಾಧಿಕಾರಿಯಾಗಿ ನಿಖಿಲ್ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕ್ಷೇತ್ರದಲ್ಲೇ ರಾಜಕೀಯವಾಗಿ ಜನ್ಮ ತಳೆದು, ಅಲ್ಲೇ ಮೂರು ದಶಕದಿಂದ ರಾಜಕಾರಣ ಮಾಡುತ್ತಾ ಬಂದಿರುವ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ.
ನಿಖಿಲ್ ಈಗಾಗಲೇ 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ಪರಾಭವಗೊಂಡರು. ತಂದೆ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದರೂ, ರಾಜಕೀಯ ಪದಾರ್ಪಣೆಯ ಮೊದಲ ಪಂದ್ಯದಲ್ಲೇ ಮುಗ್ಗರಿಸಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಅವರು ಪ್ರತಿನಿಧಿಸಿದ್ದ ರಾಮನಗರ ಕ್ಷೇತ್ರದಿಂದ ವಿಧಾನಸೌಧ ಪ್ರವೇಶಿಸಲು ಮುಂದಾದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಎಚ್.ಎ. ಇಕ್ಬಾಲ್ ಹುಸೇನ್ ಅವರ ವಿರುದ್ಧ ಸುಲಭವಾಗಿ ಗೆಲ್ಲುವೆ ಎಂಬ ಅತೀವ ವಿಶ್ವಾಸದಲ್ಲಿದ್ದ ನಿಖಿಲ್ ಅವರು ಹುಸೇನ್ ವಿರುದ್ಧ ಸೋಲಿನ ಆಘಾತ ಅನುಭವಿಸಿದರು.
ಇದೀಗ ತಂದೆ ಕುಮಾರಸ್ವಾಮಿ ಅವರಿಂದ ತೆರವಾಗಿರುವ ಚನ್ನಪಟ್ಟಣದಲ್ಲಿ ಸತತ ಮೂರನೇ ಸಲ ನಿಖಿಲ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬೊಂಬೆ ನಾಡಿನ ಜನ ಅವರಿಗೆ ಗೆಲುವಿನ ಸಿಹಿ ಕೊಡುತ್ತಾರೊ ಅಥವಾ ಮತ್ತೆ ಸೋಲಿನ ಕಹಿ ಉಣಿಸಿ, ಜಿಲ್ಲೆಯಲ್ಲಿ ಜೆಡಿಎಸ್ ಪ್ರಾತಿನಿಧ್ಯಕ್ಕೆ ಪೂರ್ಣ ವಿರಾಮ ಹಾಕುತ್ತಾರೊ ಎಂಬುದಕ್ಕೆ ಫಲಿತಾಂಶ ಬರುವವರೆಗೆ ಕಾಯಬೇಕಿದೆ.
ಪಕ್ಷವೇ ಮುಳುವಾಯ್ತು: ಯೋಗೇಶ್ವರ್ ಅವರು 2018 ಮತ್ತು 2023ರ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಎದುರು ಮುಗ್ಗರಿಸಿದ್ದಕ್ಕೆ ಕಾರಣವೇನು ಎಂದು ಯಾರನ್ನೇ ಕೇಳಿದರೂ, ‘ಬಿಜೆಪಿಯಿಂದ ಸ್ಪರ್ಧಿಸಿದ್ದೇ ಕಾರಣ. ಕಾಂಗ್ರೆಸ್‌ನಿಂದ ನಿಂತಿದ್ದರೆ ಗ್ಯಾರಂಟಿ ಗೆಲ್ಲುತ್ತಿದ್ದರು’ ಎಂಬ ಸ್ಪಷ್ಟ ಉತ್ತರ ಅವರ ಬೆಂಬಲಿಗರಿಂದ ಬರುತ್ತದೆ.
ಪಕ್ಷಗಳಲ್ಲಿದ್ದೂ ಪಕ್ಷದ ಮತಬ್ಯಾಂಕ್‌ನ ಹಂಗಿಲ್ಲದೆ ವೈಯಕ್ತಿಕ ಮತಬ್ಯಾಂಕ್ ಮೇಲೆ 1999ರಿಂದ ಕ್ಷೇತ್ರದಲ್ಲಿ ರಾಜಕಾರಣ ಮಾಡಿಕೊಂಡು ಬಂದಿರುವವರು ಯೋಗೇಶ್ವರ್. ಇದುವರೆಗೆ ಆರು ಸಲ ಪಕ್ಷಾಂತರ ಮಾಡಿರುವ ಅವರು, 5 ಸಲ ಶಾಸಕ ಹಾಗೂ 2 ಸಲ ಸಚಿವರಾಗಿ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ಕಳೆದೆರಡು ಚುನಾವಣೆಗಳಿಂದ ಬಿಜೆಪಿ ಕಾರಣಕ್ಕೆ ಅವರ ಬೆನ್ನಿಗಿದ್ದ ಅಲ್ಪಸಂಖ್ಯಾತರನ್ನು ದೂರ ಮಾಡಿಕೊಂಡು ಸೋಲುಂಡಿದ್ದಾರೆ.
ತಮ್ಮ ರಾಜಕೀಯದ ಅಳಿವು–ಉಳಿವಿನ ಪ್ರಶ್ನೆಯಾಗಿ ಉಪ ಚುನಾವಣೆಯನ್ನು ಪರಿಗಣಿಸಿರುವ ಅವರು, ಆರು ತಿಂಗಳ ಹಿಂದೆಯಷ್ಟೇ ಜಿಲ್ಲೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಯ ಜೋಡಿ ಸಾರಥಿಯಂತಿದ್ದರು. ಉಪ ಚುನಾವಣೆಯ ಟಿಕೆಟ್ ರಾಜಕಾರಣದಲ್ಲಿ ಕುಮಾರಸ್ವಾಮಿ ಅವರೊಂದಿಗೆ ಮುನಿಸಿಕೊಂಡ ಅವರು, ಕಡೆಗೆ ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಬಿಟ್ಟು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಈ ಚುನಾವಣೆ ಅವರ ರಾಜಕೀಯದ ಅಳಿವು–ಉಳಿವಿನ ಪ್ರಶ್ನೆ ಎಂದೇ ಚರ್ಚೆಯಾಗುತ್ತಿದೆ. ಮತದಾರರ ತೀರ್ಪು ಯಾರ ಪರ ಇರಲಿದೆ ಎಂಬುದು ಶನಿವಾರ ಮಧ್ಯಾಹ್ನ ಗೊತ್ತಾಗಲಿದೆ.
2019ರಲ್ಲಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ, 2023ರಲ್ಲಿ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ನಿಖಿಲ್ ಕುಮಾರಸ್ವಾಮಿ 2018 ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪರಾಭವಗೊಂಡಿರುವ ಯೋಗೇಶ್ವರ್ ಕುಮಾರಸ್ವಾಮಿ ಉತ್ತರಾಧಿಕಾರಿಯಾಗುವ ತವಕದಲ್ಲಿ ನಿಖಿಲ್, ಕ್ಷೇತ್ರ ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಉತ್ಸಾಹದಲ್ಲಿರುವ ಯೋಗೇಶ್ವರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.