ಚನ್ನಪಟ್ಟಣ (ರಾಮನಗರ): ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಾನೇ ಸ್ಪರ್ಧೆ ಮಾಡುತ್ತೇನೆ. ಟಿಕೆಟ್‌ಗಾಗಿ ನಾನು ಭಕಪಕ್ಷಿಯಂತೆ ಕಾಯುತ್ತಿದ್ದು, ಹೆಸರು ಘೋಷಣೆ ಮಾಡಿದ ಕೂಡಲೇ ನಾಮಪತ್ರ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಭಿಮಾನಿಗಳು ಸ್ವಾಭಿಮಾನಿ ಸೈನಿಕನ ಸ್ಪರ್ಧೆ ಖಚಿತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳೆಯಬೇಕೆಂದರೆ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲೇಬೇಕಿದೆ. ಈ ಭಾಗದಲ್ಲಿ ಬಿಜೆಪಿಗೆ ನಾನೇ ಸೀನಿಯರ್. ಕುಮಾರಸ್ವಾಮಿ ಕೂಡಾ ಪ್ರಜ್ಞಾವಂತರಿದ್ದಾರೆ. ಕಾದುನೋಡಿ ಎಲ್ಲರನ್ನೂ ಸಮಾಧಾನ ಮಾಡಿ ನನಗೆ ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.
‘ನನಗಿರುವ ಮಾಹಿತಿ ಪ್ರಕಾರ ಬಿಜೆಪಿ-ಜೆಡಿಎಸ್ ಮುಖಂಡರು ನನ್ನ ಹೆಸರನ್ನು ಅಂತಿಮಗೊಳಿಸುತ್ತಾರೆ. ನನಗೆ ಪಕ್ಷದ ವರಿಷ್ಠರ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಹಾಗಾಗಿ ನಾನು ಚುನಾವಣಾ ಕಣದಲ್ಲಿರುತ್ತೇನೆ’ ಎಂದು ಹೇಳಿದ್ದಾರೆ.
‘ನಾನು ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳ ಮುಖಂಡರೊಂದಿಗೆ ಚರ್ಚೆ ಮಾಡಿದ್ದೇನೆ. ಬಹುತೇಕ ಇನ್ನೆರಡು ದಿನಗಳಲ್ಲಿ ಹೆಸರು ಘೋಷಣೆಯಾಗಲಿದೆ. ನಾವು ಹಿಂದೆ ಬಹಳ ಬಾರಿ ಎಚ್.ಡಿ. ಕುಮಾರಸ್ವಾಮಿ ಜತೆ ಮಾತನಾಡಿದ್ದೇನೆ. ನಮ್ಮ ರಾಜ್ಯ ನಾಯಕರು, ಕೇಂದ್ರ ನಾಯಕರ ಬಳಿಯೂ ಮಾತನಾಡಿದ್ದೇನೆ. ನನಗೆ ಟಿಕೆಟ್ ಸಿಕ್ಕೇ ಸಿಗುತ್ತೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಪಚುನಾವಣೆ ಸಂಬಂಧ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಸರ್ವೆಗಳನ್ನು ನಡೆಸಲಾಗಿದೆ. ಎಲ್ಲಾ ಸರ್ವೆಯಲ್ಲೂ ನನ್ನ ಹೆಸರೇ ಬಂದಿದೆ. ಆದ್ಯತೆ ಮೇಲೆ ಕೊಟ್ಟರು ಸಹ ನನಗೇ ಟಿಕೆಟ್ ಕೊಡಬೇಕು ಎಂದು ಹೇಳಿದ್ದಾರೆ.
‘ಒಂದು ವೇಳೆ ನನಗೆ ಟಿಕೆಟ್ ಸಿಗದಿದ್ದರೆ ನಮ್ಮ ಕಾರ್ಯಕರ್ತರು ಏನು ಹೇಳುತ್ತಾರೋ ಅದರ ಮೇಲೆ ತೀರ್ಮಾನ ಮಾಡುತ್ತೇನೆ. ಆದರೆ, ನಾನು ದುಡುಕುವ ಅವಶ್ಯಕತೆ ಇಲ್ಲ. ಬಿಜೆಪಿ-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿ ನಾನೇ ಆಗುತ್ತೇನೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.