ADVERTISEMENT

ಚನ್ನಪಟ್ಟಣ ಉಪ ಚುನಾವಣೆ: ಸತತ ಎರಡು ಸೋಲುಂಡವರ ಕಣ

ಓದೇಶ ಸಕಲೇಶಪುರ
Published 25 ಅಕ್ಟೋಬರ್ 2024, 7:02 IST
Last Updated 25 ಅಕ್ಟೋಬರ್ 2024, 7:02 IST
   

ರಾಮನಗರ: ಉಪ ಚುನಾವಣೆಯಿಂದಾಗಿ ರಂಗೇರಿರುವ ಚನ್ನಪಟ್ಟಣ ಈ ಬಾರಿ ಸತತ ಎರಡು ಸೋಲುಂಡವರ ಕಣವಾಗಿ ಮಾರ್ಪಡಲಿದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಯೋಗೇಶ್ವರ್ ಗುರುವಾರ ನಾಮಪತ್ರ ಸಲ್ಲಿಸಿದ್ದು, ಜೆಡಿಎಸ್–ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಇಬ್ಬರೂ ಸತತ ಎರಡು ಚುನಾವಣೆಗಳಲ್ಲಿ ಸೋಲು ಕಂಡವರು.

ಬಿಜೆಪಿಯಿಂದ ಸ್ಪರ್ಧಿಸಿದ್ದ ಯೋಗೇಶ್ವರ್ ಇದೇ ಕ್ಷೇತ್ರದಲ್ಲಿ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ (2018 ಮತ್ತು 2023ರಲ್ಲಿ) ಪರಾಭವಗೊಂಡವರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ನಿಖಿಲ್ ಮಂಡ್ಯ ಲೋಕಸಭಾ ಚುನಾವಣೆ ಮತ್ತು ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡವರು.

ADVERTISEMENT

ಕುತೂಹಲದ ನಡೆ: ಚುನಾವಣಾ ರಾಜಕಾರಣದ ಆರಂಭದಲ್ಲೇ ಎರಡು ಸಲ ಹಿನ್ನೆಡೆ ಅನುಭವಿಸಿರುವ ನಿಖಿಲ್ ಆರಂಭದಿಂದಲೂ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸುತ್ತಲೇ ಬಂದವರು. ಆದರೂ, ಕಡೆ ಗಳಿಗೆಯಲ್ಲಿ ಅವರನ್ನೇ ಮೈತ್ರಿ ಅಭ್ಯರ್ಥಿಯಾಗಿ ಎರಡೂ ಪಕ್ಷಗಳ ನಾಯಕರು ಅಂತಿಮಗೊಳಿಸಿರುವುದು ಉಪ ಸಮರದ ಕುತೂಹಲ ಕೆರಳಿಸಿದೆ. ಈ ನಡೆಗೆ ಹಲವು ರೀತಿಯ ಅಭಿಪ್ರಾಯಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

‘ಚನ್ನಪಟ್ಟಣ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಮೈತ್ರಿ ಇಲ್ಲದ ಸಂದರ್ಭದಲ್ಲಿ ಅವರು ಗೆದ್ದಿದ್ದ ಕ್ಷೇತ್ರವನ್ನು ಈಗ ಉಳಿಸಿಕೊಳ್ಳಬೇಕಾದ ದೊಡ್ಡ ಸವಾಲು ಮತ್ತು ಪ್ರತಿಷ್ಠೆ ಜೆಡಿಎಸ್‌– ಬಿಜೆಪಿಗೆ ಎದುರಾಗಿದೆ. ಮೈತ್ರಿಗೆ ಕೈ ಕೊಟ್ಟು ಕಾಂಗ್ರೆಸ್ ಸೇರಿರುವ ಯೋಗೇಶ್ವರ್ ಅವರಿಗೆ ಪ್ರಬಲ ಪೈಪೋಟಿ ನೀಡಲು ಸದ್ಯ ನಿಖಿಲ್ ಬಿಟ್ಟರೆ ಮೈತ್ರಿಗೆ ಬೇರೆ ಆಯ್ಕೆಯೇ ಇರಲಿಲ್ಲ’ ಎನ್ನುತ್ತಾರೆ ಸ್ಥಳೀಯ ಬಿಜೆಪಿ– ಜೆಡಿಎಸ್ ನಾಯಕರು.

ಅನಿವಾರ್ಯ ಅಸ್ತ್ರ: ಸ್ಪರ್ಧೆಗೆ ನಿಖಿಲ್ ನಿರಾಸಕ್ತಿ ತೋರಿದಾಗ ಅವರ ತಾಯಿ ಅನಿತಾ ಕುಮಾರಸ್ವಾಮಿ, ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಜಯಮುತ್ತು ಅವರ ಹೆಸರು ಮುಂಚೂಣಿಯಲ್ಲಿದ್ದವು. ಸ್ವಾಭಿಮಾನದ ಅಸ್ತ್ರ ಬಳಸುವ ಯೋಗೇಶ್ವರ್ ವಿರುದ್ಧ ಸ್ಥಳೀಯ ಮುಖಂಡರನ್ನೇ ಕಣಕ್ಕಿಳಿಸುವ ಆಲೋಚನೆಯೂ ನಾಯಕರಲ್ಲಿತ್ತು. ಆದರೆ, ಕಡೆ ಗಳಿಗೆಯಲ್ಲಿ ನಿಖಿಲ್ ಅವರನ್ನೇ ಅಂತಿಮಗೊಳಿಸಿದರು.

‘ನಿಖಿಲ್ ಬಿಟ್ಟು ಬೇರೆಯವರನ್ನು ಅಭ್ಯರ್ಥಿ ಮಾಡುವುದಕ್ಕೆ ಕ್ಷೇತ್ರದ ಮುಖಂಡರ ಪ್ರಬಲ ವಿರೋಧವಿತ್ತು. ಇದರಿಂದ ಮುಖಂಡರು ಕಾಂಗ್ರೆಸ್‌ನತ್ತ ವಲಸೆ ಹೋಗುವ ಆತಂಕದ ಜೊತೆಗೆ ಕ್ಷೇತ್ರದಲ್ಲಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗುವ ಆತಂಕವೂ ನಾಯಕರಿಗಿತ್ತು. 2028ರ ಚುನಾವಣೆಯ ದೂರದೃಷ್ಟಿ ಜೊತೆಗೆ ಮುಖಂಡರ ವಲಸೆ ತಪ್ಪಿಸುವ ಮತ್ತು ಪಕ್ಷದ ಅಸ್ತಿತ್ವ ಉಳಿವಿಗಾಗಿ ನಿಖಿಲ್ ಅವರ ಹೆಸರನ್ನೇ ವರಿಷ್ಠರು ಅಖೈರುಗೊಳಿಸಿದ್ದಾರೆ’ ಎಂದು ಸ್ಥಳೀಯ ಜೆಡಿಎಸ್ ಮುಖಂಡರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.