ADVERTISEMENT

ಉಪಚುನಾವಣೆ: ಚನ್ನಪಟ್ಟಣದಲ್ಲಿ ನಾರಿಶಕ್ತಿಯೇ ನಿರ್ಣಾಯಕ

ಮಹಿಳಾ ಮತಗಳ ಮೇಲೆ ರಾಜಕೀಯ ಪಕ್ಷಗಳ ಕಣ್ಣು

ಎಚ್.ಎಂ.ರಮೇಶ್
Published 25 ಅಕ್ಟೋಬರ್ 2024, 7:38 IST
Last Updated 25 ಅಕ್ಟೋಬರ್ 2024, 7:38 IST
   

ಚನ್ನಪಟ್ಟಣ: ತೀವ್ರ ಹಣಾಹಣಿ, ರಾಜಕೀಯ ಜಿದ್ದಾಜಿದ್ದಿನಿಂದ ಕೂಡಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾರಿಶಕ್ತಿಯೇ ನಿರ್ಣಾಯಕ ಪಾತ್ರವಹಿಸಲಿದೆ.

ಕ್ಷೇತ್ರದಲ್ಲಿ ಮಹಿಳಾ ಮತದಾರರು ಪುರುಷರಿಗಿಂತ ಅಧಿಕವಾಗಿದ್ದು, ಉಪ ಚುನಾವಣೆಯಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ.

ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮತದಾರರ ಕರಡುಪಟ್ಟಿಯ ಪ್ರಕಾರ ಕಳೆದ 2023 ಜನವರಿ 5ರಲ್ಲಿ ಇದ್ದ ಮತದಾರರಿಗೆ ಹೋಲಿಸಿದರೆ ಕ್ಷೇತ್ರದಲ್ಲಿ ಸುಮಾರು 7950 ಮತದಾರರು ಹೆಚ್ಚಾಗಿದ್ದಾರೆ. ಇವರಲ್ಲಿ ಸುಮಾರು 4500 ಮಹಿಳಾ ಮತದಾರರು ಸೇರಿದ್ದಾರೆ.

ADVERTISEMENT

ಪ್ರಸ್ತುತ ಕ್ಷೇತ್ರದಲ್ಲಿ 1,12,271 ಪುರುಷರು ಹಾಗೂ 1,20,557 ಮಹಿಳೆ, ಎಂಟು ಲಿಂಗತ್ವ ಅಲ್ಪ ಸಂಖ್ಯಾತರು ಸೇರಿ ಒಟ್ಟು 2,32,836 ಮತದಾರರು ಇದ್ದಾರೆ.

ಪುರುಷರಿಗಿಂತ ಮಹಿಳಾ ಮತದಾರರು 8,286 ಹೆಚ್ಚು ಇದ್ದಾರೆ. 2023 ಜನವರಿಯಿಂದ 2024 ಅಕ್ಟೋಬರ್ ತಿಂಗಳಿನ ಮಧ್ಯಭಾಗಕ್ಕೆ ಮಹಿಳಾ ಮತದಾರರ ಸಂಖ್ಯೆ ಏರಿಕೆಯಾಗಿದೆ.

ಕ್ಷೇತ್ರದ ಉಪ ಚುನಾವಣೆಯಲ್ಲಿ ಮಹಿಳೆಯರ ಮತಗಳು ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಕಾರಣ ರಾಜಕೀಯ ಪಕ್ಷಗಳು ಮಹಿಳಾ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಮಹಿಳೆಯರ ಮನಗೆಲ್ಲಲು ಹಲವು ತಂತ್ರ ರೂಪಿಸಲು ಮುಂದಾಗಿವೆ.

ಮಹಿಳಾ ಸಂಘಗಳು, ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ಸೇರಿದಂತೆ ತಾಲ್ಲೂಕಿನಲ್ಲಿ ಮುಂಚೂಣಿಯಲ್ಲಿರುವ ಮಹಿಳಾ ಮುಖಂಡರನ್ನು ಭೇಟಿ ಮಾಡುತ್ತಿರುವ ರಾಜಕೀಯ ಪಕ್ಷಗಳ ನಾಯಕರು ಆ ಮೂಲಕ ಮಹಿಳೆಯರ ಮತಗಳ ಸೆಳೆಯುವ ಕಸರತ್ತು ನಡೆಸುತ್ತಿದ್ದಾರೆ.

ರಾಜಕೀಯ ಸಭೆ ಸಮಾರಂಭಗಳಿಗೆ ಮಹಿಳೆಯರನ್ನೇ ಹೆಚ್ಚು ಸೇರಿಸಲು ಮಹಿಳಾ ಮುಖಂಡರಿಗೆ ವಿವಿಧ ರಾಜಕೀಯ ಪಕ್ಷಗಳು ದುಂಬಾಲು ಬಿದ್ದಿವೆ.

ಕ್ಷೇತ್ರದ ಈ ಹಿಂದಿನ ಚುನಾವಣೆಗಳ ಇತಿಹಾಸ ನೋಡಿದರೆ ರಾಜಕೀಯ ಪಕ್ಷಗಳು ಮಹಿಳಾ ಮತಗಳನ್ನು ಸೆಳೆಯಲು ಹಲವು ತಂತ್ರ ರೂಪಿಸಿದ್ದವು. ಮಹಿಳೆಯರಿಗೆ ಉಡುಗೊರೆ ನೀಡಿರುವುದರಿಂದ ಆದಿಯಾಗಿ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕಳಿಸುವವರೆಗೆ ಇದು ಮುಂದುವರೆದಿತು.

1999ರ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಸಾವಿರಾರು ರೂಪಾಯಿ  ಮೌಲ್ಯದ ಸೀರೆ ಹಂಚಲಾಗಿತ್ತು. ಅಂದು ಆರಂಭಗೊಂಡ ಉಡುಗೊರೆ ಹಂಚುವ ಪರಿಪಾಠ ಮುಂದಿನ ಬಹುತೇಕ ಎಲ್ಲಾ ಚುನಾವಣೆಗಳಲ್ಲೂ ಮುಂದುವರೆಯುತ್ತಿದೆ. ಸೀರೆ, ಅರಿಸಿನ ಕುಂಕುಮ ಬೆಳ್ಳಿ ಬಟ್ಟಲು, ತವಾ, ಛತ್ರಿ, ಕುಕ್ಕರ್ ಹೀಗೆ ವಿವಿಧ ಉಡುಗೊರೆ ನೀಡುವುದು ಪ್ರತಿ ಚುನಾವಣೆಯಲ್ಲಿ ನಡೆಯುತ್ತಿದೆ.

ಕಳೆದ 2023ರ ಚುನಾವಣೆಗೂ ಮೊದಲು ಬಂದ ಯುಗಾದಿ ಹಬ್ಬಕ್ಕೆ ತಾಲ್ಲೂಕಿನಲ್ಲಿ ಸಿ.ಪಿ. ಯೋಗೇಶ್ವರ್ ಹೆಸರಿನ ಚೀಟಿ ಅಂಟಿಸಿದ್ದ ಸುಮಾರು 50 ಸಾವಿರ ಸೀರೆ ಹಂಚಲಾಗಿತ್ತು. ಜೊತೆಗೆ ಕೆಲವು ಪಕ್ಷಗಳ ಅಭ್ಯರ್ಥಿಗಳು ಮಹಿಳಾ ಮತದಾರರ ಮನಗೆಲ್ಲಲು ಮತವೊಂದಕ್ಕೆ ಪುರುಷರಿಗಿಂತ ಹೆಚ್ಚು ಹಣ ಹಂಚಲಾಗಿತ್ತು ಎಂಬ ಆರೋಪವೂ ಕೇಳಿಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.