ADVERTISEMENT

ವಕ್ಫ್ ಹೆಸರಲ್ಲಿ ಸ್ಮಶಾನದ ಜಾಗ: ಉಪ ಚುನಾವಣೆ ಅಸ್ತ್ರ ಮಾಡಿಕೊಂಡ ಜೆಡಿಎಸ್-ಬಿಜೆಪಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 7:48 IST
Last Updated 4 ನವೆಂಬರ್ 2024, 7:48 IST
ಚನ್ನಪಟ್ಟಣ ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಯಲಿಯೂರು ಗ್ರಾಮದ ಸ್ಮಶಾನ ಭೂಮಿ ಪಹಣಿಯು ವಕ್ಫ್ ಹೆಸರಿನಲ್ಲಿ ನಮೂದಾಗಿರುವುದು
ಚನ್ನಪಟ್ಟಣ ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಯಲಿಯೂರು ಗ್ರಾಮದ ಸ್ಮಶಾನ ಭೂಮಿ ಪಹಣಿಯು ವಕ್ಫ್ ಹೆಸರಿನಲ್ಲಿ ನಮೂದಾಗಿರುವುದು   

ಚನ್ನಪಟ್ಟಣ (ರಾಮನಗರ): ರಾಜ್ಯದ ಕೆಲವೆಡೆ ರೈತರ ಜಮೀನಿನ ಪಹಣಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹೆಸರು ಎಂದು ನಮೂದಾಗಿರುವ ವಿಷಯ ತಾಲ್ಲೂಕಿನಲ್ಲೂ ಪ್ರತಿಧ್ವನಿಸಿದೆ. ವಿರುಪಾಕ್ಷಿಪುರ ಹೋಬಳಿ ಯಲಿಯೂರು ಗ್ರಾಮದ ಸ್ಮಶಾನ ಭೂಮಿ ಪಹಣಿ ವಕ್ಫ್ ಹೆಸರಿನಲ್ಲಿ ದಾಖಲಾಗಿದೆ.

ಗ್ರಾಮದ ಸರ್ವೆ ನಂ 53ರಲ್ಲಿರುವ 7ಗುಂಟೆ ಜಾಗದ ಪಹಣಿಯು 2018ರ ನ.15ರಿಂದ ವಕ್ಫ್ ಹೆಸರಿನಲ್ಲಿ ನಮೂದಾಗಿದೆ. ಪಹಣಿ ಚಿತ್ರ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ.

ಪರಿಶೀಲನೆ: ‘ಸ್ಮಶಾನ ಜಾಗದ ಪಹಣಿ ಯಾವ ದಾಖಲೆಗಳ ಆಧಾರದ ಮೇಲೆ ವಕ್ಫ್ ಹೆಸರಿನಲ್ಲಿ ನಮೂದಾಗಿದೆ ಎಂಬುದರ ಕುರಿತು, ಸ್ಥಳೀಯವಾಗಿ ಮಾಹಿತಿ ತರಿಸಿಕೊಂಡು ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ADVERTISEMENT

ಸ್ಮಶಾನದ ಮೇಲೂ ವಕ್ಫ್ ಕಣ್ಣು: ‘ವಕ್ಫ್ ಕಬಂಧಬಾಹು ಚನ್ನಪಟ್ಟಣಕ್ಕೂ ವಕ್ಕರಿಸಿದೆ. ಯಲಿಯೂರಿನ ಹಿಂದೂಗಳ ಸ್ಮಶಾನದ ಮೇಲೂ ಅದರ ಕಣ್ಣು ಬಿದ್ದಿದೆ. ರೈತರ ಒಡೆತನದಲ್ಲಿರುವ ಭೂಮಿಗೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ, ಅದು ನಮ್ಮ ವಶದಲ್ಲಿತ್ತು ಎಂದು ತಗಾದೆ ತೆಗೆಯುತ್ತಿದ್ದಾರೆ’ ಎಂದು ಆರೋಪಿಸಿರುವ ಬಿಜೆಪಿಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ‘ರೈತರು ಕೂಡಲೇ ಎಚ್ಚೆತ್ತುಕೊಂಡು ತಾಲ್ಲೂಕು ಕಚೇರಿಗೆ ತೆರಳಿ ತಮ್ಮ ಭೂ ದಾಖಲೆ ಪರಿಶೀಲಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸ್ಮಶಾನದ ಹೆಸರಿನಲ್ಲಿರುವ 7 ಗುಂಟೆ ಜಾಗದ ಪಹಣಿಯು 2018ರಲ್ಲಿ ವಕ್ಫ್ ಹೆಸರಿನಲ್ಲಿ ನಮೂದಾಗಿದೆ. ಯಾವ ಆಧಾರದ ಮೇಲೆ ದಾಖಲಾಗಿದೆ ಎಂಬುದರ ಕುರಿತು ತಾಲ್ಲೂಕು ಆಡಳಿತದಿಂದ ವರದಿ ಕೇಳಲಾಗಿದೆ.
–ಯಶವಂತ್ ವಿ. ಗುರುಕರ್ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.