ADVERTISEMENT

ಚನ್ನಪಟ್ಟಣ | ಉಪ ಚುನಾವಣೆ ಘೋಷಣೆಯಾಗುವವರೆಗೂ ಟಿಕೆಟ್ ತೀರ್ಮಾನವಿಲ್ಲ: ನಿಖಿಲ್

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 13:18 IST
Last Updated 17 ಸೆಪ್ಟೆಂಬರ್ 2024, 13:18 IST
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ   

ಚನ್ನಪಟ್ಟಣ: ‘ಉಪ ಚುನಾವಣೆ ಟಿಕೆಟ್ ಕುರಿತು ಬಿಜೆಪಿ–ಜೆಡಿಎಸ್ ವರಿಷ್ಠರು ದೆಹಲಿಯಲ್ಲಿ ತೀರ್ಮಾನಿಸಲಿದ್ದಾರೆ. ಚುನಾವಣೆ ದಿನಾಂಕ ಘೋಷಣೆಯಾಗುವವರೆಗೆ ಟಿಕೆಟ್ ಕುರಿತು ನಿರ್ಧಾರ ಕೈಗೊಳ್ಳುವುದಿಲ್ಲ. ಅಲ್ಲಿಯವರೆಗೆ ಕಾಯಬೇಕು’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಅಕ್ಕೂರಿನಲ್ಲಿ ಮಂಗಳವಾರ ಪಕ್ಷದ ಮುಖಂಡರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಟಿಕೆಟ್ ಆಕಾಂಕ್ಷಿಯಾಗಿರುವ ಸಿ.ಪಿ. ಯೋಗೇಶ್ವರ್ ಅವರು, ಬಿಜೆಪಿ–ಜೆಡಿಎಸ್‌ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದಿದ್ದಾರೆ. ಅಲ್ಲದೆ, ನಾನು ಮತ್ತು ಅವರು ಪ್ರತ್ಯೇಕವಾಗಿ ಸಭೆ ನಡೆಸುತ್ತಾ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ’ ಎಂದರು.

‘ಶಾಸಕ ಮುನಿರತ್ನ ಅವರು ಜಾತಿನಿಂದನೆಗೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಆಡಿಯೊ ತುಣುಕು ಅವರದ್ದೇನಾ ಎಂಬುದು ಮೊದಲು ಖಚಿತವಾಗಬೇಕಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ದನಿ ಯಾರದ್ದೆಂದು ಗೊತ್ತಾಗುತ್ತದೆ. ಹಾಗಾಗಿ, ಅವರ ಕುರಿತು ಈಗಲೇ ಮಾತನಾಡುವುದು ಸೂಕ್ತವಲ್ಲ. ಆದರೆ, ಈ ನೆಲದ ಕಾನೂನಿನ ಮುಂದೆ ಎಲ್ಲರೂ ಒಂದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ನಾಗಮಂಗಲ ಘಟನೆಯೇ ಸಾಕ್ಷಿ. ಒಂದು ಸಮುದಾಯದ ಓಲೈಕೆಗಾಗಿ ಇನ್ನೊಂದು ಸಮುದಾಯಕ್ಕೆ ಅನ್ಯಾಯ ಮಾಡುವುದು ಎಷ್ಟು ಸರಿ ಎಂಬುದಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಉತ್ತರಿಸಬೇಕು. ಅವರ ಓಲೈಕೆ ರಾಜಕಾರಣಕ್ಕೆ ಮುಂದೆ ಜನರೇ ಉತ್ತರ ಕೊಡುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.