ಚನ್ನಪಟ್ಟಣ | ಅಳುವುದೇ ಗೌಡರ ಪರಂಪರೆ; ಸೋಲಿನ ಭಯಕ್ಕೆ ಕಣ್ಣೀರು: ಸಿದ್ದರಾಮಯ್ಯ
ಮೊಮ್ಮಗನಿಂದಾಗಿ ಕಣ್ಣೀರು ಹಾಕುತ್ತಿರುವ ಹೆಣ್ಣು ಮಕ್ಕಳಿಗಾಗಿ ಅಳ್ರಿ ಗೌಡ್ರೆ: ಸಿದ್ದರಾಮಯ್ಯ ವಾಗ್ದಾಳಿ
ಪ್ರಜಾವಾಣಿ ವಾರ್ತೆ Published 7 ನವೆಂಬರ್ 2024, 0:25 IST Last Updated 7 ನವೆಂಬರ್ 2024, 0:25 IST ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರವಾಗಿ ಚನ್ನಪಟ್ಟಣ ತಾಲ್ಲೂಕಿನ ಬೇವೂರಿನಲ್ಲಿ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರೆದಿದ್ದ ಕಾರ್ಯಕರ್ತರಿಗೆ ನಮಸ್ಕರಿಸಿದರು
ಚನ್ನಪಟ್ಟಣ (ರಾಮನಗರ): ‘ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಸೋಲಿನ ಭಯ ಕಾಡುತ್ತಿದೆ. ಅದಕ್ಕೆ ಅಪ್ಪ–ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಅಳುವುದೇ ಅವರ ಪರಂಪರೆ. ಅದಕ್ಕೆ ನೀನು ಅಳೋಕೆ ಶುರು ಮಾಡು ಎಂದು ನಿಖಿಲ್‌ಗೆ ಹೇಳಿ ಕೊಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ತಾಲ್ಲೂಕಿನ ಕೂಡ್ಲೂರು ಸೇರಿದಂತೆ ವಿವಿಧೆಡೆ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಅಳುವ ಗಂಡಸನ್ನು ನಂಬಬಾರದು ಅಂತ ಗಾದೆಯೇ ಇದೆ. ಅಳುವ ಗಂಡಸು ಕುಮಾರಸ್ವಾಮಿಯನ್ನು ಯಾವತ್ತೂ ನಂಬಬೇಡಿ’ ಎಂದರು’.
‘ದೇವೇಗೌಡರು ಕಟುಕರಿಗೆ ಕಣ್ಣೀರು ಬರಲ್ಲ ಅಂದಿದ್ದಾರೆ. ಹಾಸನದಲ್ಲಿ ಅವರ ಮೊಮ್ಮಗನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಅಲ್ಲಿ ಹೋಗಿ ಅಳ್ರಿ ಗೌಡ್ರೆ. ಇಲ್ಲಿ ಅತ್ತರೆ ಏನು ಪ್ರಯೋಜನ?’ ಎಂದರು.
‘ಮಂಡ್ಯ ಮತ್ತು ರಾಮನಗರದಲ್ಲಿ ಸೋತಿದ್ದ ನಿಖಿಲ್‌ನನ್ನು ಇಲ್ಲಿಗೆ ಕರೆ ತಂದು ನಿಲ್ಲಿಸಿದ್ದಾರೆ. ಏನಾದರು ಮಾಡಿ ಮೊಮ್ಮಗನನ್ನು ಗೆಲ್ಲಿಸಲೇಬೇಕೆಂದು ಮಾಜಿ ಪ್ರಧಾನಿ ಇಲ್ಲೇ ಠಿಕಾಣಿ ಹೂಡಿದ್ದಾರೆ. ಅವರೇನೇ ಮಾಡಿದರೂ ಯೋಗೇಶ್ವರ್ ಗೆಲ್ಲುವುದು ಖಚಿತ’ ಎಂದು ಪಕ್ಕದಲ್ಲಿದ್ದ ಯೋಗೇಶ್ವರ್ ಬೆನ್ನು ತಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
‘ಯೋಗೇಶ್ವರ್‌ಗೆ ಜನರ ಕಷ್ಟ ಸುಖ ಗೊತ್ತು. ದೇವೇಗೌಡರ ಕುಟುಂಬಕ್ಕೆ ಭಾವನಾತ್ಮಕವಾಗಿ ಮಾತನಾಡಿ ಅಳೋದು ಮಾತ್ರ ಗೊತ್ತು. ಅತ್ತರೆ ಜನರ ಸಮಸ್ಯೆ ಬಗೆಹರಿಯುತ್ತಾ? ಕೆರೆಗಳು ತುಂಬಿ, ಜಮೀನಿಗೆ ನೀರು ಹರಿಯುತ್ತಾ? ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ₹500 ಕೋಟಿಗೂ ಹೆಚ್ಚು ಹಣ ಕೊಟ್ಟಿದ್ದೇನೆ. ಯೋಗೇಶ್ವರ್ ಗೆದ್ದ ಮೇಲೆ ಮತ್ತಷ್ಟು ಕೊಡುವೆ. ಇನ್ನೂ ಮೂರೂವರೆ ವರ್ಷ ನಮ್ಮ ಸರ್ಕಾರ ಇರುತ್ತದೆಯೇ ಹೊರತು, ಕುಮಾರಸ್ವಾಮಿ ಸರ್ಕಾರ ಬರಲ್ಲ’ ಎಂದು ಹೇಳಿದರು.
ಸಚಿವರಾದ ಎಚ್.ಸಿ.ಮಹದೇವಪ್ಪ, ಚಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಕೆ.ವೆಂಕಟೇಶ್, ಡಾ.ಎಂ.ಸಿ.ಸುಧಾಕರ್, ಶಾಸಕರಾದ ಎಚ್.ಸಿ.ಬಾಲಕೃಷ್ಣ, ಕೆ.ಎಂ.ಉದಯ್, ಡಾ.ಎಚ್.ಡಿ.ರಂಗನಾಥ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಸಂಸದ ಡಿ.ಕೆ.ಸುರೇಶ್, ಶಿವರಾಮೇಗೌಡ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಸೇರಿದಂತೆ ಹಲವರು ಮುಖ್ಯಮಂತ್ರಿ ಪ್ರಚಾರಕ್ಕೆ ಸಾಥ್ ನೀಡಿದರು.
ಚನ್ನಪಟ್ಟಣ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ತಾಲ್ಲೂಕಿನ ಬೇವೂರಿನಲ್ಲಿ ಬುಧವಾರ ನಡೆದ ಪ್ರಚಾರಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರತ್ತ ಕೈ ಬೀಸಿದರು. ಸಚಿವ ಎಚ್.ಸಿ. ಮಹದೇವಪ್ಪ ಮಾಜಿ ಶಾಸಕ ಎಂ.ಸಿ. ಅಶ್ವಥ್ ಇದ್ದಾರೆ
ನಿಖಿಲ್ ಕುಮಾರಸ್ವಾಮಿ ಪರವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ತಾಲ್ಲೂಕಿನ ತಿಟ್ಟಮಾರನಹಳ್ಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮತ ಯಾಚಿಸಿದರು. ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಜೆಡಿಎಸ್ ಮುಖಂಡರಾದ ಲೀಲಾದೇವಿ ಆರ್.ಪ್ರಸಾದ್ ಎಚ್.ಕೆ.ಕುಮಾರಸ್ವಾಮಿ ಇದ್ದರು
ನಿಖಿಲ್ ಕುಮಾರಸ್ವಾಮಿ ಪರವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಾಲ್ಲೂಕಿನ ಸೋಗಾಲ ಗ್ರಾಮದಲ್ಲಿ ಪ್ರಚಾರ ನಡೆಸಿದರು
ಸಿ.ಡಿ ಸಹೋದರರಿಗೆ ಸಿ.ಡಿ ವಿಡಿಯೊ ಆಡಿಯೊ ಮಾಡುವುದೇ ಕೆಲಸ. ಹಾಸನದಲ್ಲಿ ಮಾಡಿದ ಷಡ್ಯಂತ್ರವನ್ನು ಇಲ್ಲೂ ಮಾಡುತ್ತಿದ್ದಾರೆ. ಯೋಗೇಶ್ವರ್ ಸಂಸ್ಕೃತಿ ಗೊತ್ತಿದೆ. ಇವರೆಲ್ಲ ಸಿ.ಡಿ ಪ್ಲೇಯರ್ಸ್ ಸಂತತಿಯವರು
ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಜ್ಯದ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಜನರ ಹಿತವನ್ನು ಮರೆತಿದೆ. ಉಪ ಚುನಾವಣೆಯಲ್ಲಿ ನಿಖಿಲ್ ಅವರನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಬೇಕು
ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ- ‘ರಾಹುಲ್ ಪ್ರಿಯಾಂಕಾ ಯಾವ ಟಾಕೀಸ್?’
ಚನ್ನಪಟ್ಟಣ (ರಾಮನಗರ): ‘ಉತ್ತರಪ್ರದೇಶದ ಅಮೇಠಿಯಿಂದ ವಯನಾಡಿಗೆ ಓಡಿಬಂದ ರಾಹುಲ್ ಗಾಂಧಿ ಅವರದ್ದು ಯಾವ ಟಾಕೀಸ್? ಸಹೋದರ ತೆರವು ಮಾಡಿದ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಏಕೆ ಬಂದರು? ಅವರದ್ದು ಯಾವ ಟಾಕೀಸ್? ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ. ಅದನ್ನು ಸರಿ ಮಾಡಿಕೊಳ್ಳುವುದು ಬಿಟ್ಟು ಪಕ್ಕದ ತಟ್ಟೆ ನೋಡುವುದನ್ನು ಬಿಡಿ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮನ್ನು ‘ಟೂರಿಂಗ್ ಟಾಕೀಸ್’ ಎಂದ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಪರವಾಗಿ ತಾಲ್ಲೂಕಿನ ಸೋಗಾಲ ಗ್ರಾಮದಲ್ಲಿ ಬುಧವಾರ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಜಂಟಿಯಾಗಿ ಪ್ರಚಾರ ನಡೆಸಿದ ಅವರು ಎದುರಾಳಿಗಳ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
‘ಮಾತಲ್ಲಷ್ಟೇ ಭಗೀರಥ; ಕೃತಿಯಲ್ಲಿ ಅಲ್ಲ’
‘ತಾಲ್ಲೂಕಿನ 17 ಕೆರೆಗಳಿಗೆ ನೀರು ತುಂಬಿಸಿದ್ದೇನೆ ಎನ್ನುವ ವ್ಯಕ್ತಿ ಬಾಯಿ ಮಾತಿನಲ್ಲಿ ಮಾತ್ರ ಭಗೀರಥ. ಕೃತಿಯಲ್ಲಿ ಅಲ್ಲ. ನಾನು ಮತ್ತು ಸದಾನಂದ ಗೌಡ ಕೃತಿಯಲ್ಲಿ ಮಾಡಿ ತೋರಿಸಿದ್ದೇವೆ. ಸುಳ್ಳು ಹೇಳಿಕೊಂಡು ತಿರುಗಬಾರದು. ನೀರು ತುಂಬಿಸಲು ಮೂಲ ಕಾರಣವಾದ ಇಗ್ಗಲೂರು ಅಣೆಕಟ್ಟು ನಿರ್ಮಿಸಿದವರು ಯಾರಪ್ಪಾ?’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರನ್ನು ಪ್ರಶ್ನಿಸಿದರು. ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರವಾಗಿ ತಾಲ್ಲೂಕಿನ ತಿಟ್ಟಮಾರನಹಳ್ಳಿ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿದರು. ‘ನಾನು ಸಿ.ಎಂ ಆಗಿದ್ದಾಗ ಎಂಜಿನಿಯರ್‌ಗಳನ್ನು ಕರೆತಂದು ₹150 ಕೋಟಿ ಬಿಡುಗಡೆ ಮಾಡಿದೆ. ತೆಪ್ಪದಲ್ಲಿ ಹೋಗಿ ಅಣೆಕಟ್ಟೆ ಉದ್ಘಾಟಿಸಿ ಆಗಲೇ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದೆ. ಸದಾನಂದಗೌಡರು ಸಿ.ಎಂ ಆಗಿದ್ದಾಗ 17 ಕೆರೆಗಳಿಗೆ ನೀರು ತುಂಬಿಸಲು ಹಣ ಕೊಟ್ಟರು. ಯೋಗೇಶ್ವರ್ ಏನೂ ಮಾಡಲಿಲ್ಲ. ಹಿಂದೆ ಕಾಂಗ್ರೆಸ್‌ನಿಂದ ಗೆದ್ದಿದ್ದ ಯೋಗೇಶ್ವರ್ ಯಾಕೆ ಆ ಕೆಲಸ ಮಾಡಿಸಲಿಲ್ಲ’ ಎಂದು ಕಿಡಿಕಾರಿದರು.