ADVERTISEMENT

ಸಂದರ್ಶನ | ನನ್ನ ಅತಂತ್ರ ಮಾಡಲು ಹೆಣೆದ ಬಲೆಯಲ್ಲಿ ಅವರೇ ಸಿಲುಕಿದರು: ಯೋಗೇಶ್ವರ್

ಓದೇಶ ಸಕಲೇಶಪುರ
Published 9 ನವೆಂಬರ್ 2024, 1:03 IST
Last Updated 9 ನವೆಂಬರ್ 2024, 1:03 IST
ಸಿ.ಪಿ. ಯೋಗೇಶ್ವರ್
ಸಿ.ಪಿ. ಯೋಗೇಶ್ವರ್   

ಚನ್ನಪಟ್ಟಣ ಉಪ ಚುನಾವಣೆಯ ‘ಮೈತ್ರಿ’ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಸಿ.ಪಿ. ಯೋಗೇಶ್ವರ್ ಅವರು, ಕಡೆ ಗಳಿಗೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ತಮ್ಮ ಈ ನಿರ್ಧಾರದ ಹಿಂದಿನ ರಾಜಕೀಯ, ಸ್ಪರ್ಧೆಯ ಅನಿವಾರ್ಯತೆ ಹಾಗೂ ಪ್ರಚಾರದಲ್ಲಿ ಅನುರಣಿಸುತ್ತಿರುವ ವಿಷಯಗಳ ಕುರಿತು ‘ಪ್ರಜಾವಾಣಿ’ಗೆ ಅವರು ನೀಡಿದ ಸಂದರ್ಶನ ಇಲ್ಲಿದೆ.

*ಈ ಉಪ ಚುನಾವಣೆ ನಿಮ್ಮ ಅಳಿವು–ಉಳಿವಿನ ಪ್ರಶ್ನೆಯೇ?

ಹಾಗೇನಿಲ್ಲ. ಹಿಂದೆ ನಾನು ಸೋತರೂ ವಿಧಾನ ಪರಿಷತ್ ಸದಸ್ಯನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ಉಪ ಚುನಾವಣೆಯು ನನ್ನ ಅಳಿವು–ಉಳಿವು ನಿರ್ಧರಿಸುವುದಿಲ್ಲ. ನಾನೆಂದೂ ಕ್ಷೇತ್ರ ಬಿಟ್ಟು ರಾಜಕೀಯ ಮಾಡಿದವನಲ್ಲ. ಉಪ ಚುನಾವಣೆ ರಾಜಕೀಯ ಸ್ಥಿತಿ ನನಗೆ ಪೂರಕವಾದ್ದರಿಂದ ಸ್ಪರ್ಧೆಗೆ ಮನಸ್ಸು ಮಾಡಿದೆ. ನನ್ನನ್ನು ತುಳಿಯಲು ಯತ್ನಿಸಿದಾಗ ಸೆಟೆದು ನಿಲ್ಲಲೇಬೇಕಾಯಿತು.

ADVERTISEMENT

*ಸ್ಪರ್ಧಿಸಲು ಪಕ್ಷಾಂತರ ಅನಿವಾರ್ಯವಾಗಿತ್ತೇ?

ಪಕ್ಷ ಬದಲಿಸುವ ಆಲೋಚನೆ ನನಗಿರಲಿಲ್ಲ. ಟಿಕೆಟ್ ವಿಷಯದಲ್ಲಿ ಆರಂಭದಿಂದಲೂ ಭರವಸೆ ಹುಟ್ಟಿಸುತ್ತಲೇ ಬಂದ ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ, ನನ್ನನ್ನು ಅತಂತ್ರ ಮಾಡಲು ಬಲೆ ಹೆಣೆದಿದ್ದರು. ಕೊನೆವರೆಗೆ ಟಿಕೆಟ್ ವಿಷಯ ಎಳೆಯುತ್ತಾ ಬಂದು, ಅವರೇ ಆ ಬಲೆಯಲ್ಲಿ ಸಿಲುಕಿದರು.  ರಾಜಕೀಯ ಬದುಕು ಅತಂತ್ರವಾಗಬಾರದೆಂದು ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಬೇಕಾಯಿತು.

*ನೀವು ಬಿಜೆಪಿ ಟಿಕೆಟ್‌ ನಿರಾಕರಿಸಿದ್ದೀರಿ ಎಂದು ಆ ಪಕ್ಷದ ನಾಯಕರು ಹೇಳುತ್ತಾರಲ್ಲ?


ಟಿಕೆಟ್ ಕೊಡುವ ಇಚ್ಛೆ ಇದ್ದಿದ್ದರೆ ಬಿಜೆಪಿಯವರು ಹೆಸರು ಘೋಷಿಸಬೇಕಿತ್ತು. ಪ್ರಬಲ ಆಕಾಂಕ್ಷಿ ಎಂದು ಗೊತ್ತಿದ್ದರೂ ನಾಮಪತ್ರ ಸಲ್ಲಿಸುವುದಕ್ಕೆ ಎರಡು ದಿನ ಇರುವವರೆಗೆ ಹೆಸರು ಅಂತಿಮಗೊಳಿಸದೆ ನಾಟಕವಾಡಿದರು. ನಡು ನೀರಲ್ಲಿ ಕೈ ಬಿಡಲು ಯತ್ನಿಸಿದರು.

*ನಿಮ್ಮ ಪಕ್ಷಾಂತರವೇ ಎದುರಾಳಿಗಳಿಗೆ ಚುನಾವಣಾ ಅಸ್ತ್ರವಾಗಿದೆ. ಇದಕ್ಕೆ ಏನಂತೀರಿ?


ಸಂದರ್ಭ ಬಂದಾಗಲೆಲ್ಲಾ ಪಕ್ಷ ಬದಲಿಸಿರುವ ನಾನು ಪಕ್ಷಾಂತರಿ ನಿಜ. ಆದರೆ, ಪರಿಸ್ಥಿತಿಯನ್ನು ಬೆಂಬಲಿಗರಿಗೆ ಮನವರಿಕೆ ಮಾಡಿಯೇ ಮುಂದಿನ ಹೆಜ್ಜೆ ಇಟ್ಟಿದ್ದೇನೆ. ಅಭಿವೃದ್ಧಿಗಾಗಿ ಮಾಡಿರುವ ಪಕ್ಷಾಂತರವನ್ನು ಜನ ಒಪ್ಪಿ ಬೆಂಬಲಿಸುತ್ತಾ ಬಂದಿದ್ದಾರೆ.

*ಡಿ.ಕೆ ಸಹೋದರರ ವಿರುದ್ಧ ಕಿಡಿಕಾರುತ್ತಿದ್ದ ನೀವು, ಈಗ ಅವರೊಂದಿಗೆ ರಾಜಕಾರಣ ಮಾಡಬೇಕಾದ ಸ್ಥಿತಿ ಬಂದಿದೆಯಲ್ಲಾ?


ಜನರ ಹಿತಾಸಕ್ತಿಗಾಗಿ ರಾಜಕಾರಣ ಮಾಡುತ್ತೇವೆಯೇ ಹೊರತು, ವೈಯಕ್ತಿಕ ಹಿತಾಸಕ್ತಿಗಲ್ಲ. ಜನರಿಗೆ ಒಳ್ಳೆಯದಾಗಬೇಕು ಎಂದರೆ ಶತ್ರು ಜತೆಗೂ ಕೈ ಜೋಡಿಸಬೇಕಾಗುತ್ತದೆ. ಸರ್ಕಾರದಲ್ಲಿ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿದ್ದು, ಅಭಿವೃದ್ಧಿಯ ಬದ್ಧತೆ ಹೊಂದಿದ್ದಾರೆ. ಅವರೊಂದಿಗೆ ಕೈ ಜೋಡಿಸಿದರೆ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ ಎಂದು ಕಾಂಗ್ರೆಸ್ ಸೇರಿದ್ದೇನೆ.

*ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಶೂನ್ಯ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರಲ್ಲ?


ಕುಮಾರಸ್ವಾಮಿ ಅವರು ಈ ಕ್ಷೇತ್ರ ಕಂಡ ಅಸಮರ್ಥ ಶಾಸಕ. ಮುಖ್ಯಮಂತ್ರಿ ಹುದ್ದೆ ಅವರ ಸಾಮರ್ಥ್ಯದ ಮೇಲೆ ಅವರ ಬಳಿಗೆ ಬರಲಿಲ್ಲ. ರಾಜಕೀಯ ಹೊಂದಾಣಿಕೆ ಸ್ಥಿತ್ಯಂತರಿಂದಾಗಿ ಎರಡು ಸಲ ಆಕಸ್ಮಿಕವಾಗಿ ಮುಖ್ಯಮಂತ್ರಿಯಾದರು. ಕ್ಷೇತ್ರದ ಬಗ್ಗೆ ಅವರಿಗೆ ಎಷ್ಟು ನಿರ್ಲಕ್ಷ್ಯವಿತ್ತು ಎಂಬುದನ್ನು ತಾಲ್ಲೂಕಿನ ಸ್ಥಿತಿ ಗಮನಿಸಿದರೆ ಗೊತ್ತಾಗುತ್ತದೆ.

*ನಿಮ್ಮ ಅಭಿವೃದ್ಧಿ ಅಜೆಂಡಾ ಏನು?


ಕುಮಾರಸ್ವಾಮಿ ಬಂದ ನಂತರ ಕ್ಷೇತ್ರದಲ್ಲಿ ಸ್ಥಗಿತಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವೆ. ನೀರಾವರಿ ಯೋಜನೆಗಳಿಗೆ ಪುನಶ್ಚೇತನ ನೀಡಿ, ಮತ್ತಷ್ಟು ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸುವೆ.

‘ದೇವೇಗೌಡರಿಗೂ ತಾಲ್ಲೂಕಿನ ನೀರಾವರಿಗೂ ಸಂಬಂಧವಿಲ್ಲ’

* ನೀವು ಮಾತಲ್ಲಷ್ಟೇ ಭಗೀರಥ ಎಂಬ ದೇವೇಗೌಡರ ವಾಗ್ದಾಳಿಗೆ ನಿಮ್ಮ ಪ್ರತಿಕ್ರಿಯೆ ಏನು? ನಾನೆಲ್ಲೂ ಭಗೀರಥ ಎಂದು ಹೇಳಿಕೊಂಡಿಲ್ಲ. ಜನ ಅಭಿಮಾನದಿಂದ ಕರೆಯುತ್ತಾರಷ್ಟೆ. ಇಷ್ಟಕ್ಕೂ ದೇವೇಗೌಡರಿಗೆ ತಾಲ್ಲೂಕಿನ ನೀರಾವರಿಗೂ ಸಂಬಂಧವಿಲ್ಲ. ಪ್ರಧಾನಿಯಾದಾಗ ಅವರ ಮೇಲಿನ ಅಭಿಮಾನದಿಂದ ಆಗ ಶಾಸಕರಾಗಿದ್ದ ವರದೇಗೌಡರು ಇಗ್ಗಲೂರು ಬ್ಯಾರೇಜ್‌ಗೆ ಅವರ ಹೆಸರಿಟ್ಟು ಉದ್ಘಾಟನೆ ಮಾಡಿಸಿದರು. ಅದರಲ್ಲಿ ದೇವೇಗೌಡರ ಪಾತ್ರವಿಲ್ಲ. ಈ ಕುರಿತು ದಾಖಲೆಗಳಿವೆ. ದೇವೇಗೌಡರಿಗೆ ಅಂತಹ ಇಚ್ಛಾಶಕ್ತಿ ಇದ್ದಿದ್ದರೆ ಚನ್ನಪಟ್ಟಣ ಸೇರಿದಂತೆ ಇಡೀ ಜಿಲ್ಲೆಗೆ ನೀರಾವರಿ ಮಾಡಬಹುದಿತ್ತಲ್ಲವೇ? ಅವರ ಪುತ್ರ ಕುಮಾರಸ್ವಾಮಿ ಮಾಡಬಹುದಿತ್ತಲ್ಲವೇ? ಅವರು ಕ್ಷೇತ್ರಕ್ಕೆ ಬರುವುದಕ್ಕೆ ಮುಂಚೆಯೇ ಕೆರೆಗಳು ತುಂಬಿದ್ದವು. ಯಶಸ್ಸಿಗೆ ನಾನೇ ವಾರಸುದಾರ ಎಂದು ಹಲವರು ಬರುತ್ತಾರೆ. ಸೋತಾಗ ಯಾರೂ ಬರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.