ADVERTISEMENT

ಚನ್ನಪಟ್ಟಣ ಉಪ ಚುನಾವಣೆ | ಪಕ್ಷ ಸೂಚಿಸಿದರೆ ಸ್ಪರ್ಧಿಸುವೆ: ಡಿಕೆಶಿ

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 4:42 IST
Last Updated 25 ಜೂನ್ 2024, 4:42 IST
<div class="paragraphs"><p>ಡಿಕೆಶಿ</p></div>

ಡಿಕೆಶಿ

   

ಚನ್ನಪಟ್ಟಣ (ರಾಮನಗರ): ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪಕ್ಷ ಸೂಚಿಸಿದರೆ ಅದಕ್ಕೆ ಸಿದ್ಧ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ತಾಲ್ಲೂಕಿನ ಕೋಡಂಬಹಳ್ಳಿಯಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಅವರಿಗೆ ಜನ ವಿಶ್ರಾಂತಿ ಕೊಟ್ಟು, ತಿದ್ದಿಕೊಳ್ಳಲು ಅವಕಾಶ ನೀಡಿದ್ದಾರೆ. ಸದ್ಯ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಆದರೆ, ಪಕ್ಷದ ಚುನಾವಣಾ ಸಮಿತಿ ನನ್ನ ಅಥವಾ ಸುರೇಶ್ ಹೆಸರನ್ನು ಸೂಚಿಸಿದರೆ ಕೇಳಲೇಬೇಕು’ ಎಂದರು.

ADVERTISEMENT

ಉಪಚುನಾವಣೆ ಅಭ್ಯರ್ಥಿ ಆಯ್ಕೆ ಕುರಿತು ಕ್ಷೇತ್ರದ ಮತದಾರರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಜೊತೆಗೆ  ಮುಖ್ಯಮಂತ್ರಿ ಹಾಗೂ ಪ್ರಧಾನ ಕಾರ್ಯದರ್ಶಿಯೊಂದಿಗೆ ಚರ್ಚಿಸುತ್ತೇವೆ. ಬಳಿಕ ಯಾರು ಸ್ಪರ್ಧಿಸಬೇಕೆಂದು ಪಕ್ಷದ ಚುನಾವಣಾ ಸಮಿತಿಯಲ್ಲಿ ತೀರ್ಮಾನಿಸುತ್ತೇವೆ ಎಂದು ಹೇಳಿದರು.

‘ಸುರೇಶ್ ಅವರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಆಸಕ್ತಿ ಇರಲಿಲ್ಲ. ಕಾರ್ಯಕರ್ತರ ಒತ್ತಾಯದ ಮೇರೆಗೆ ಅವರು ಸ್ಪರ್ಧಿಸಿದ್ದರು. ಅವರು ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ’ ಎಂದು ತಿಳಿಸಿದರು.

‘ಕನಕಪುರದ ಬೆದರಿಕೆ ಮತ್ತು ಭ್ರಷ್ಟಾಚಾರದ ಮಾದರಿ ನಮಗೆ ಬೇಡ’ ಎಂಬ ಬಿಜೆಪಿಯ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕನಕಪುರದಲ್ಲಿ ಭ್ರಷ್ಟಾಚಾರದ ಬಗ್ಗೆ ಏನಾದರೂ ದೂರು ಬಂದಿದೆಯೇ?’ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಕುರಿತು ಕೇಳಿದಾಗ, ‘ಬಹಳ ಸಂತೋಷ, ಅವರಿಗೆ ಒಳ್ಳೆಯದಾಗಲಿ’ ಎಂದರು.

‘ರಾಮನಗರ ಅಭಿವೃದ್ಧಿ ಮಾಡಿದ್ದು ನಾನು, ಅವರು ಕಲ್ಲು ಒಡೆಯುತ್ತಿದ್ದರು’ ಎಂಬ ಟೀಕೆಗೆ, ‘ಹೌದು, ಕಲ್ಲು ಒಡೆಯುತ್ತಿದ್ದೇವೆ. ಈಗಲೂ ಒಡೆಯುತ್ತಿದ್ದೇವೆ’ ಎಂದು ವ್ಯಂಗ್ಯವಾಡಿದರು.

‘ಸಭೆಯಲ್ಲಿ ನಾನು ಅಧಿಕಾರಿಗಳನ್ನು ಬೆದರಿಸಿದ್ದರೆ ದೂರು ಕೊಡಲಿ’ ಎಂದು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಯೋಗೇಶ್ವರ್‌ ಕಚೇರಿ ಮುಂದೆ ಮಲಗಲಿ’

ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ನನ್ನ ವಿರುದ್ಧ ಚುನಾವಣಾ ಆಯೋಗಕ್ಕೆ ಪತ್ರ ಯಾಕೆ ಬರೆಯುತ್ತಾರೆ. ಚುನಾವಣಾ ಆಯೋಗದ ಕಚೇರಿಗೆ ಹಾಸಿಗೆ, ದಿಂಬು ತೆಗೆದುಕೊಂಡು ಹೋಗಿ ಮಲಗಲಿ ಎಂದು ಶಿವಕುಮಾರ್‌ ವ್ಯಂಗ್ಯವಾಡಿದರು.

‘ಶಿವಕುಮಾರ್‌ ಚುನಾವಣಾ ಅಕ್ರಮ ಮಾಡುತ್ತಿದ್ದು ಈ ಕುರಿತು ಆಯೋಗಕ್ಕೆ ಪತ್ರ ಬರೆಯುತ್ತೇನೆ’ ಎಂದು ಯೋಗೇಶ್ವರ್ ಈಚೆಗೆ ಹೇಳಿಕೆ ನೀಡಿದ್ದರು.

‘ಕೈ ಬಿಟ್ಟಿರುವ ಮುಸ್ಲಿಮರ ಹೆಸರು ಸೇರಿಸಿ ಎಂದಿರುವೆ’

‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮುಸ್ಲಿಮರ ಹೆಸರು ಕೈ ಬಿಡಲಾಗಿದೆ ಎಂಬ ದೂರು ಬಂದಿದ್ದವು. ಹೀಗಾಗಿ, ಅಂತಹ ಮತದಾರರ ಮನೆಗೆ ಭೇಟಿ ನೀಡಿ ಅವರ ಹೆಸರನ್ನು ಮತ್ತೆ ಸೇರಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಹೊಸ ತಂತ್ರಜ್ಞಾನದಲ್ಲಿ ಬೇರೆ ಕಡೆ ಇರುವವರ ಹೆಸರನ್ನು ಇಲ್ಲಿಗೆ ತಂದು ಸೇರಿಸಲು ಆಗುವುದಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

‘ಚನ್ನಪಟ್ಟಣ: ಹಿಂದಿನ ಶಾಸಕ ಏನೂ ಕೆಲಸ ಮಾಡಲಿಲ್ಲ’

ಚನ್ನಪಟ್ಟಣ (ರಾಮನಗರ): ‘ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಹಿಂದಿನ ಜನಪ್ರತಿನಿಧಿ ಜನರ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಮಾಡಲಿಲ್ಲ. ಹಾಗಾಗಿ ನಾನು ಆ ಕೆಲಸ ಮಾಡುತ್ತಿದ್ದೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೋಮವಾರ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ಪ್ರಸ್ತಾಪಿಸದೆ ಕುಟುಕಿದ್ದಾರೆ.

ಬಡವರ ಬದುಕಲ್ಲಿ ಬದಲಾವಣೆ ತರಲಿಲ್ಲ ಎಂದರೆ ಜನಪ್ರತಿನಿಧಿಯಾಗಿ ಯಾಕಿರಬೇಕು. ಜನರ ಕಷ್ಟ ಆಲಿಸಬೇಡಿ ಎಂದು ಅವರಿಗೆ ನಾವೇನಾದರೂ ಹೇಳಿದ್ದೆವಾ ಎಂದು ತಾಲ್ಲೂಕಿನ ಕೋಡಂಬಳ್ಳಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಪ್ರಶ್ನಿಸಿದರು.

‘ಚನ್ನಪಟ್ಟಣದಲ್ಲಿ ಅಧಿಕಾರದಲ್ಲಿದ್ದ ದೊಡ್ಡ ಅನುಭವಿ ನಾಯಕರು ಜನರ ಸಮಸ್ಯೆ ಬಗೆಹರಿಸುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಸಮಸ್ಯೆ ಬಗೆಹರಿಸಲಿಲ್ಲ. ಇಷ್ಟು ದಿನ ಕ್ಷೇತ್ರವೂ ಖಾಲಿ ಇರಲಿಲ್ಲ. ನಾವೀಗ, ನಮ್ಮದೇ ಶೈಲಿಯಲ್ಲಿ ಕಾರ್ಯಕ್ರಮ ಮಾಡುತ್ತಾ ಜನರ ಸಮಸ್ಯೆ ಆಲಿಸುತ್ತಿದ್ದೇವೆ’ ಎಂದು ಹೇಳಿದರು.

‘ಅಧಿಕಾರಕ್ಕಾಗಿ ನಾನು ಚನ್ನಪಟ್ಟಣ ಬಿಟ್ಟು ಓಡುವವನಲ್ಲ. ಬದಲಿಗೆ ಇಲ್ಲೇ ಇದ್ದು ಕ್ಷೇತ್ರದ ಜನರ ಋಣ ತೀರಿಸುವೆ. ಯಾರೇನೇ ಟೀಕಿಸಲಿ. ಜನರ ಸಮಸ್ಯೆಗೆ ಪರಿಹಾರ ನೀಡುವುದಷ್ಟೇ ನನಗೆ ಮುಖ್ಯ’ ಎಂದರು.

‘ಕ್ಷೇತ್ರದ ಹಿಂದಿನ ಜನಪ್ರತಿನಿಧಿ ಈ ಕೆಲಸ ಮಾಡಲಿಲ್ಲ. ನಾನು ಈ ಭಾಗದ ಶಾಸಕನಾಗಿದ್ದಾಗಲೂ ಅಧಿಕಾರಿಗಳನ್ನು ಹಳ್ಳಿಗಳಿಗೆ ಕರೆದುಕೊಂಡು ಹೋಗಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸ ಮಾಡುತ್ತಿದ್ದೆ. ಈಗಲೂ ಮುಂದುವರಿಸುತ್ತಿದ್ದೇನೆ’ ಎಂದು ಶಿವಕುಮಾರ್‌ ಹೇಳಿದರು.

‘ತಾಲ್ಲೂಕಿನ ಅಧಿಕಾರಿಗಳ ಸಭೆ ಮಾಡಿದಾಗ, ಕಳೆದ ಐದು ವರ್ಷಗಳಲ್ಲಿ ತಾಲ್ಲೂಕಿನ ಬಡವರಿಗೆ ನಿವೇಶನ ಹಂಚಿಲ್ಲ. ಬಗರ್ ಹುಕಂ ಸಾಗುವಳಿ ಜಮೀನು ನೀಡಿಲ್ಲ ಎಂಬುದು ಸೇರಿದಂತೆ ಹಲವು ವಿಷಯಗಳು ಗಮನಕ್ಕೆ ಬಂದಿವೆ’ ಎಂದು ಅವರು ತಿರುಗೇಟು ನೀಡಿದರು.

‘ಕ್ಷೇತ್ರಕ್ಕೆ ಏನು ಮಾಡಿದ್ದೀರಿ ಎಂದು ದೊಡ್ಡ ನಾಯಕ ಕುಮಾರಸ್ವಾಮಿ ಅವರು ಕೇಳಿದ್ದಾರೆ. ನಾನು ಇಂಧನ ಸಚಿವನಾಗಿದ್ದಾಗ ತಾಲ್ಲೂಕಿನ 18 ಸಾವಿರ ರೈತರಿಗೆ ಉಚಿತವಾಗಿ ವಿದ್ಯುತ್ ಪರಿವರ್ತಕ ನೀಡಿದ್ದೇನೆ. ಹತ್ತು ಕಡೆ ದೊಡ್ಡ ಸ್ಟೇಷನ್ ಹಾಕಿಸಿದ್ದೇನೆ. ಕುಮಾರಸ್ವಾಮಿ ಅವರು ಕೇಂದ್ರದಿಂದ ಹಣ ತಂದು ಮಂಡ್ಯ ಜನರಿಗೆ ಉಚಿತವಾಗಿ ಹಾಕಿಸಲಿ ನೋಡೋಣ’ ಎಂದು ಸವಾಲು ಹಾಕಿದರು.

‘ಮತ್ತೆ ಸ್ಪರ್ಧಿಸಿದರೆ ಜನ ನಗುತ್ತಾರೆ’

ಬೆಂಗಳೂರು: ‘ಜನ ನನ್ನನ್ನು ತಿರಸ್ಕರಿಸಿದ್ದಾರೆ. ಮತ್ತೆ ಚುನಾವಣೆಗೆ ಸ್ಪರ್ಧಿಸಿದರೆ ಜನ ನಗುತ್ತಾರೆ’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.

‘ಚನ್ನಪಟ್ಟಣದಲ್ಲಿ ನೀವು ಸ್ಪರ್ಧೆ ಮಾಡುವುದಿಲ್ಲವೇ’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ಜನ ಹೇಳಿದರೂ, ಸ್ಪರ್ಧಿಸುವ ಮನಸ್ಥಿತಿ ನಮಗೂ ಇರಬೇಕು. ಜನ ನನಗೆ ವಿಶ್ರಾಂತಿ ಪಡೆಯಲು ಹೇಳಿದ್ದು, ಬೇರೆಯವರಿಗೆ ಕೆಲಸ ಮಾಡಲು ಹೇಳಿದ್ದಾರೆ. ಬೇರೆಯವರು ಕೆಲಸ ಮಾಡಲಿ, ನಾವು ಅವರಿಗೆ ಸಹಕಾರ ನೀಡುತ್ತೇವೆ’ ಎಂದರು.

‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಯಾರು ಅಭ್ಯರ್ಥಿ’ ಎಂದು ಕೇಳಿದಾಗ, ‘ಜನ ಯಾರನ್ನು ಬಯಸುತ್ತಾರೋ ಅವರು ಸ್ಪರ್ಧಿಸಬೇಕು. ರಾಮನಗರ ಜಿಲ್ಲೆ ನಮ್ಮ ಸ್ವಂತ ಜಿಲ್ಲೆ. ಪಕ್ಷದ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ ಶಿವಕುಮಾರ್ ಅವರ ಮೇಲೆ ಜವಾಬ್ದಾರಿ ಇದೆ. ಕ್ಷೇತ್ರದಲ್ಲಿ ಶಾಸಕರು ಇಲ್ಲದ ಕಾರಣ ಶಿವಕುಮಾರ್ ಅವರು ಜನರ ಸಮಸ್ಯೆ ಆಲಿಸುತ್ತಿದ್ದಾರೆ’ ಎಂದರು.

‘ಡಿ.ಕೆ. ಶಿವಕುಮಾರ್ ಮತ್ತು ನನ್ನನ್ನು ಸ್ಮರಿಸದಿ ದ್ದರೆ ಕುಮಾರಸ್ವಾಮಿ ಅವರ ರಾಜಕಾರಣ ಹಾಗೂ ದಿನಚರಿ ನಡೆಯುವುದಿಲ್ಲ. ಪ್ರತಿ ವಿಚಾರದಲ್ಲೂ ನಮ್ಮ ಹೆಸರು ಎಳೆದು ತರುತ್ತಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.