ADVERTISEMENT

ಚನ್ನಪಟ್ಟಣ ಉಪ ಚುನಾವಣೆ | ಅಖಾಡದಲ್ಲಿ ‘ಸ್ಥಳೀಯರು–ಹೊರಗಿನವರು’ ವಾಕ್ಸಮರ

ಪ್ರಚಾರ ಭಾಷಣದಲ್ಲಿ ‘ಕೈ’–‘ದಳ’ ನಾಯಕರ ಏಟಿಗೆ ಎದಿರೇಟು ಮಾತು

ಓದೇಶ ಸಕಲೇಶಪುರ
Published 4 ನವೆಂಬರ್ 2024, 4:53 IST
Last Updated 4 ನವೆಂಬರ್ 2024, 4:53 IST
<div class="paragraphs"><p>ಎಚ್‌.ಡಿ. ಕುಮಾರಸ್ವಾಮಿ ಮತ್ತು ಸಿ.ಪಿ. ಯೋಗೇಶ್ವರ್</p></div>

ಎಚ್‌.ಡಿ. ಕುಮಾರಸ್ವಾಮಿ ಮತ್ತು ಸಿ.ಪಿ. ಯೋಗೇಶ್ವರ್

   

ರಾಮನಗರ: ಉಪ ಚುನಾವಣೆ ಪ್ರಚಾರದ ಕಾವು ಶುರುವಾದಾಗಿನಿಂದಲೂ ಕಣದಲ್ಲಿ ‘ಸ್ಥಳೀಯರು–ಹೊರಗಿನವರು’ ಎಂಬ ಮಾತುಗಳು ಪ್ರತಿಧ್ವನಿಸುತ್ತಲೇ ಇವೆ. ಕಾಂಗ್ರೆಸ್–ಜೆಡಿಎಸ್ ಅಭ್ಯರ್ಥಿಗಳಷ್ಟೇ ಅಲ್ಲದೆ, ಉಭಯ ಪಕ್ಷಗಳ ನಾಯಕರ ಭಾಷಣಗಳು ಈ ಎರಡು ಪದಗಳಿಲ್ಲದೆ ಮುಗಿಯುತ್ತಿಲ್ಲ. ಸ್ಥಳೀಯತೆಯ ಬಾಣ ಪ್ರಯೋಗಿಸಿ ಮತದಾರರ ಭಾವನೆ ಕೆಣಕಿ, ಮತ ಗಳಿಸುವಲ್ಲಿ ಎರಡೂ ಪಕ್ಷದವರು ನಿರತರಾಗಿದ್ದಾರೆ. ಸ್ಥಳೀಯತೆಯ ದಿಸೆಯಲ್ಲಿ ನಡೆಯುತ್ತಿರುವ ಪ್ರಚಾರವು, ಎರಡೂ ಕಡೆಯ ನಾಯಕರ ಪರಸ್ಪರ ಏಟಿಗೆ ಎದಿರೇಟೆಗೂ ಸಾಕ್ಷಿಯಾಗುತ್ತಿದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಿ.ಪಿ. ಯೋಗೇಶ್ವರ್ ಮೂಲತಃ ತಾಲ್ಲೂಕಿನ ಚಕ್ಕೆರೆ ಗ್ರಾಮದವರು. ಸ್ವಗ್ರಾಮ, ಬೆಂಗಳೂರು ಹಾಗೂ ಚನ್ನಪಟ್ಟಣದಲ್ಲೂ ಮನೆ ಹೊಂದಿರುವ ಅವರ ಚುನಾವಣಾ ರಾಜಕೀಯ ಕ್ಷೇತ್ರದ ಗಡಿಯನ್ನು ದಾಟಿಲ್ಲ. ಸ್ಥಳೀಯ ಅಸ್ಮಿತೆಯ ಲಾಭ ಪಡೆಯಲು ಆಗಾಗ ತಮ್ಮ ಎದುರಾಳಿಯನ್ನು ಹೊರಗಿನವರು ಎಂದ ಮೂದಲಿಸುತ್ತಾ, ಮತ ಯಾಚಿಸುತ್ತಿದ್ದಾರೆ.

ADVERTISEMENT

ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಮೂಲ ಹಾಸನವಾದರೂ, ಅವರ ರಾಜಕೀಯ ಕರ್ಮಭೂಮಿ ರಾಮನಗರ ಜಿಲ್ಲೆ. ರಾಮನಗರ ಮತ್ತು ಚನ್ನಪಟ್ಟಣವನ್ನು ಪ್ರತಿನಿಧಿಸಿ, ಮಂಡ್ಯದಲ್ಲಿ ಗೆದ್ದು ಕೇಂದ್ರ ಸಚಿವರಾಗಿರುವ ಅವರು, ಬೆಂಗಳೂರಿನ ಜೊತೆಗೆ ರಾಮನಗರ ತಾಲ್ಲೂಕಿನ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ ತೋಟದ ಮನೆ ಹೊಂದಿದ್ದಾರೆ. ಜೆಡಿಎಸ್‌ನಿಂದ ಕಣಕ್ಕಿಳಿದಿರುವ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಜೊತೆಗೆ, ತನ್ನನ್ನು ಸಹ ಹೊರಗಿನವರು ಎನ್ನುವವರಿಗೆ ತಿರುಗೇಟು ನೀಡುತ್ತಲೇ ಸ್ಥಳೀಯರ ಭಾವನೆ ಗೆಲ್ಲಲು ಎಚ್‌ಡಿಕೆ ಯತ್ನಿಸುತ್ತಿದ್ದಾರೆ.

ಸ್ವಾಭಿಮಾನದ ಅಸ್ತ್ರ: ತಮಗೆ ‘ಮೈತ್ರಿ’ ಟಿಕೆಟ್ ಸಿಗುವ ಅನುಮಾನ ವ್ಯಕ್ತವಾದಾಗ ಯೋಗೇಶ್ವರ್ ಅವರು, ಸ್ಥಳೀಯ ಸ್ವಾಭಿಮಾನದ ಅಸ್ತ್ರ ಪ್ರಯೋಗಿಸಿ ಪಕ್ಷದ ವರಿಷ್ಠರನ್ನು ಬಗ್ಗಿಸಲು ಯತ್ನಿಸಿದ್ದರು. ಸ್ಥಳೀಯ ಸ್ವಾಭಿಮಾನ ಸಂಕಲ್ಪ ಸಮಾವೇಶದ ತಯಾರಿ ನಡೆಸಿ, ಅದರ ದಿನಾಂಕವನ್ನು ಘೋಷಿಸಿದಾಗಲೇ ಅವರಿಗೆ ವರಿಷ್ಠರಿಂದ ಬುಲಾವ್ ಬಂದಿತ್ತು. ಆದರೆ, ಅಲ್ಲಿಗೆ ಹೋಗಿ ಬಂದ ಮೇಲೆ ತಣ್ಣಾಗಿದ್ದರು. ಆದರೂ, ಕಡೆವರೆಗೆ ಅವರಿಗೆ ವ್ಯಕ್ತವಾಗಿದ್ದ ಜನಬೆಂಬಲದ ಹಿಂದೆ ಸ್ಥಳೀಯ ವ್ಯಕ್ತಿ ಎಂಬ ಅಭಿಮಾನದ ಜೊತೆಗೆ, ಎರಡು ಸಲ ಸೋತ್ತಿದ್ದಾರೆಂಬ ಅನುಕಂಪವೂ ಕಾರಣವಾಗಿತ್ತು.

ಎಚ್‌ಡಿಕೆ ಎದಿರೇಟು: ‘ಹೊರಗಿನವರು’ ಎಂಬ ತಮ್ಮ ವಿರೋಧಿಗಳ ಏಟಿಗೆ ಎದಿರೇಟು ನೀಡುತ್ತಲೇ ಬಂದಿರುವ ಕುಮಾರಸ್ವಾಮಿ, ಡಿ.ಕೆ ಸಹೋದರರನ್ನು ಸಹ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ‘ಇಷ್ಟು ದಿನ ಕ್ಷೇತ್ರದತ್ತ ಕಾಲಿಡದವರು ಉಪ ಚುನಾವಣೆ ಬಂದಾಗ ಅಭಿವೃದ್ಧಿ ಹೆಸರಿನಲ್ಲಿ ಏಕೆ ಬಂದಿದ್ದಾರೆ? ಇಷ್ಟು ದಿನ ಚನ್ನಪಟ್ಟಣ ಅವರಿಗೆ ಕಣ್ಣಿಗೆ ಬಿದ್ದಿರಲಿಲ್ಲವೇ?’ ಎನ್ನುವ ಎಂಬ ಪ್ರಶ್ನೆಯ ಬಾಣ ಬಿಡುತ್ತಿದ್ದಾರೆ. ಎದುರಾಳಿಗಳ ‘ಹೊರಗಿನವರು’ ಎಂಬ ಮಾತಿನ ಬಾಣಗಳಿಗೆ, ‘ಬಿಡದಿಯಲ್ಲಿ ಮನೆ ಹೊಂದಿರುವ ನಾನೂ ಇಲ್ಲಿಯವನೇ. ನಿಮ್ಮನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ’ ಎನ್ನುತ್ತಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ

Cut-off box - ‘ನಿಮ್ಮೂರ ಮನೆ ಮಗ ನಾನು’ ಪ್ರಚಾರದುದ್ದಕ್ಕೂ ಯೋಗೇಶ್ವರ್ ‘ನಾನು ನಿಮ್ಮೂರಿನ ಮನೆ ಮಗ. ಇದೇ ಊರಿನಲ್ಲಿ ಹುಟ್ಟಿ ಬೆಳೆದು ನಿಮ್ಮ ಕಷ್ಟ–ಸುಖಗಳಿಗೆ ಸ್ಪಂದಿಸುತ್ತಾ ಬಂದವನು. ನಿಮ್ಮ ಅಭಿವೃದ್ಧಿಗಾಗಿಯೇ ರಾಜಕೀಯ ಮಾಡುತ್ತಿರುವವನು. ನನ್ನೂರು ಬಿಟ್ಟು ಬೇರೆಲ್ಲೂ ರಾಜಕೀಯ ಮಾಡಿದವನಲ್ಲ. ಸೋತರೂ ಗೆದ್ದರೂ ನಿಮ್ಮನ್ನು ಬಿಟ್ಟು ಓಡಿದವನಲ್ಲ. ಸತತ ಎರಡು ಸಲ ಸೋತಿರುವ ನನಗೆ ಮತ್ತೊಮ್ಮೆ ನಿಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಡಿ’ ಎಂದು ಸ್ಥಳೀಯರ ಮನೆ ಗೆಲ್ಲಲು ಮುಂದಾಗಿದ್ದಾರೆ. ಯೋಗೇಶ್ವರ್‌ಗೆ ಸಾಥ್ ನೀಡುತ್ತಿರುವ ಡಿ.ಕೆ ಸಹೋದರರು ಸಹ ‘ನಿಮ್ಮೂರ ಮಗ ಯೋಗೇಶ್ವರ್ ಅವರನ್ನು ನೀವು ಕೈ ಬಿಡಬೇಡಿ. ಹೊರಗಿನವರಿಗೆ ಮಣೆ ಹಾಕಬೇಡಿ. ನಿಮ್ಮ ಕಷ್ಟಗಳಿಗೆ ಹೆಗಲು ಕೊಟ್ಟು ನಿಮ್ಮ ಶ್ರೇಯೋಭಿವೃದ್ಧಿಗೆ ದುಡಿಯುವರಿಗೆ ಕೈ ಹಿಡಿದು ಮೇಲಕ್ಕೆತ್ತಿ’ ಎಂದು ಸ್ಥಳೀಯ ಅಸ್ಮಿತೆಯನ್ನು ಬಡಿದೆಬ್ಬಿಸಲು ಯತ್ನಿಸುತ್ತಿದ್ದಾರೆ. ‘ನಾನು ಮಣ್ಣಾಗೋದು ಇದೇ ನೆಲದಲ್ಲಿ’ ಎದುರಾಳಿಗಳು ತಮ್ಮ ವಿರುದ್ಧ ಮಾಡುತ್ತಿರುವ ‘ಹೊರಗಿನವರು’ ಎಂಬ ಪ್ರಚಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ‘ತಮ್ಮ ಪುತ್ರನ ನನ್ನ ಜನ್ಮಭೂಮಿ ಹಾಸನವಾದರೂ ರಾಜಕೀಯ ಜನ್ಮ ಕೊಟ್ಟಿರುವುದು ರಾಮನಗರ ಜಿಲ್ಲೆ. ನನ್ನ ಕರ್ಮಭೂಮಿಯಾಗಿರುವ ಜಿಲ್ಲೆಯ ಕೇತಗಾನಹಳ್ಳಿಯಲ್ಲೇ ನಾನು ಮಣ್ಣಾಗುತ್ತೇನೆ’ ಎಂದು ಭಾವನಾತ್ಮಕ ಮಾತುಗಳನ್ನಾಡುತ್ತಾ ತಿರುಗೇಟು ನೀಡುತ್ತಿದ್ದಾರೆ. ‘ಇಟಲಿ ಮೂಲದ ಸೋನಿಯಾಗಾಂಧಿ ಪುತ್ರಿ ದೆಹಲಿಯಲ್ಲಿ ಜನಿಸಿದ ಪ್ರಿಯಾಂಕ ಗಾಂಧಿ ಕೇರಳದ ವಯನಾಡ್‌ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಾಗ ನನ್ನ ಪುತ್ರ ಚನ್ನಪಟ್ಟಣದಲ್ಲಿ ಸ್ಪರ್ಧಿಸುವುದು ಹೇಗೆ ವಲಸೆಯಾಗುತ್ತದೆ?’ ಎಂಬ ಪ್ರಶ್ನೆಯ ಮೂಲಕ ‘ಕೈ’ ಪಡೆಯನ್ನು ಮೌನವಾಗಿಸಿದ್ದಾರೆ. ಹೋದಲ್ಲೆಲ್ಲಾ ತಮ್ಮ ಸ್ಥಳೀಯ ನಂಟನ್ನು ಮೆಲುಕು ಹಾಕುತ್ತಲೇ ನಾನು ಹೊರಗಿನವನಲ್ಲ ಎಂದು ಮತದಾರರ ಮನವೊಲಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.