ADVERTISEMENT

ಚನ್ನಪಟ್ಟಣ ಉಪಚುನಾವಣೆ: ‘ಸೈನಿಕ’ನ ನಡೆಯತ್ತ ಎಲ್ಲರ ಚಿತ್ತ

ಎಚ್‌ಡಿಕೆ ಉತ್ತರಾಧಿಕಾರಿಯಾಗುವರೇ ಸಿ.ಪಿ. ಯೋಗೇಶ್ವರ್?

ಓದೇಶ ಸಕಲೇಶಪುರ
Published 12 ಜೂನ್ 2024, 4:57 IST
Last Updated 12 ಜೂನ್ 2024, 4:57 IST
ಸಿ.ಪಿ. ಯೋಗೇಶ್ವರ್
ಸಿ.ಪಿ. ಯೋಗೇಶ್ವರ್   

ರಾಮನಗರ: ಈ ಸಲ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಫಲಿತಾಂಶದ ಎಂಬ ಕುತೂಹಲದ ಜೊತೆಗೆ, ಪಕ್ಕದ ಮಂಡ್ಯದ ಫಲಿತಾಂಶ ಏನಾಗಲಿದೆ? ಎಂಬುದರ ಬಗ್ಗೆಯೂ ಚಾತಕಪಕ್ಷಿಗಳಂತೆ ಜಿಲ್ಲೆಯ ಜನ ಕಾಯುತ್ತಿದ್ದರು. ಕಾರಣವಿಷ್ಟೆ, ಚನ್ನಪಟ್ಟಣ ಪ್ರತಿನಿಧಿಸಿರುವ ಜೆಡಿಎಸ್ ಶಾಸಕ ಎಚ್‌.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧಿಸಿದ್ದು.

ನಿರೀಕ್ಷೆಯಂತೆ, ಮಂಡ್ಯದಲ್ಲಿ ಕುಮಾರಸ್ವಾಮಿ ಗೆದ್ದರು. ಮೂರನೇ ಬಾರಿ ಅಧಿಕಾರಕ್ಕೇರಿದ ಮೋದಿ ಸರ್ಕಾರದಲ್ಲಿ ಎಚ್‌ಡಿಕೆ ಸಚಿವರೂ ಆದರು. ಈ ಬೆಳವಣಿಗೆಗಳ ಬೆನ್ನಲ್ಲೇ, ಚನ್ನಪಟ್ಟಣದಲ್ಲಿ ಅವರ ಉತ್ತರಾಧಿಕಾರಿ ಯಾರು? ಎಂಬುದರ ಕುರಿತ ಚರ್ಚೆ ಜೋರಾಗಿದೆ. ಬೆಂಗಳೂರಿನಲ್ಲಿ ನಡೆದ ಜೆಡಿಎಸ್‌ ಸಭೆಯಲ್ಲಿ, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಬೇಕೆಂಬ ಅಭಿಪ್ರಾಯ ಪಕ್ಷದೊಳಗೆ ವ್ಯಕ್ತವಾಗಿದೆ.

ಈ ಬೆಳವಣಿಗೆ ಬೆನ್ನಲ್ಲೇ, ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ಬಿಜೆಪಿಯ ಹಾಲಿ ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್, ತಾವು ಕ್ಷೇತ್ರದ ಆಕಾಂಕ್ಷಿ ಎಂಬುದನ್ನು ತಿಳಿಸಿದ್ದಾರೆ. ಆದರೆ, ಅಭ್ಯರ್ಥಿ ಯಾರಾಗಲಿದ್ದಾರೆಂಬುದರ ಸ್ಪಷ್ಟತೆಯನ್ನು ಬಿಜೆಪಿ–ಜೆಡಿಎಸ್‌ ಮೈತ್ರಿಕೂಟ ಇನ್ನು ಸ್ಪಷ್ಟಪಡಿಸಿಲ್ಲ.

ADVERTISEMENT

ಟಿಕೆಟ್ ತಪ್ಪಿದಾಗಲೇ ಕಣ್ಣು: ಬಿಜೆಪಿ–ಜೆಡಿಎಸ್ ಮೈತ್ರಿ ಬೆನ್ನಲ್ಲೇ ಗ್ರಾಮಾಂತರ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಸಿಪಿವೈ, ತೆರೆಮರೆಯಲ್ಲಿ ಕಸರತ್ತು ನಡೆಸುತ್ತಲೇ ಇದ್ದರು. ಎಚ್‌ಡಿಕೆ ಜೊತೆಗಿನ ರಾಜಕೀಯ ದ್ವೇಷ ಮರೆತು ಹತ್ತಿರವಾಗಿದ್ದರು. ದುಬೈಗೂ ಒಟ್ಟಿಗೆ ಹೋಗಿದ್ದರು. ಮಂಜುನಾಥ್ ಹೆಸರು ಮುನ್ನೆಲೆಗೆ ಬರುವವರೆಗೆ ಸಿಪಿವೈ ಹೆಸರೇ ಚಾಲ್ತಿಯಲ್ಲಿತ್ತು. ಟಿಕೆಟ್ ಸಿಗಲಿದೆ ಎಂಬ ಹುರುಪಿನಲ್ಲಿ ಅವರೂ ಇದ್ದರು.

ಸುರೇಶ್ ಸೋಲಿಸಲೇಬೇಕೆಂದು ಪಣ ತೊಟ್ಟಿದ್ದ ಮೈತ್ರಿ ನಾಯಕರು ಸಿಪಿವೈ ಬದಿಗೆ ಸರಿಸಿ, ಮಂಜುನಾಥ್ ಹೆಸರು ಘೋಷಿಸಿದರು. ನಿರಾಶರಾಗದ ಸಿಪಿವೈ, ಮಂಡ್ಯದಲ್ಲಿ ಸ್ಪರ್ಧಿಸಿರುವ ಎಚ್‌ಡಿಕೆ ಗೆಲುವು ಖಚಿತವಾಗಿರುವುದರಿಂದ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದರು. ಮೈತ್ರಿ ನಾಯಕರು ಸಹ ಆಗ ಇವರ ಆಸೆಗೆ ಸಹಮತ ವ್ಯಕ್ತಪಡಿಸಿದ್ದರು ಎನ್ನುತ್ತವೆ ಬಿಜೆಪಿ ಮೂಲಗಳು.

ವರಿಷ್ಠರ ಮನವೊಲಿಕೆಯತ್ತ ಚಿತ್ತ: 2018ರಲ್ಲಿ ರಾಜ್ಯದ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಸಿಪಿವೈ, ರಾಜ್ಯ ಬಿಜೆಪಿ ನಾಯಕರ ಮರ್ಜಿಗಿಂತ ಹೆಚ್ಚಾಗಿ ಕೇಂದ್ರ ನಾಯಕರ ಮರ್ಜಿಗೆ ಒಳಗಾಗಿ ಕೆಲಸ ಮಾಡುವ ರಾಜಕಾರಣಿ. ಅಧಿಕಾರ ಮತ್ತು ಸ್ಥಾನಮಾನಕ್ಕಾಗಿ ಅವರು ರಾಜ್ಯ ನಾಯಕರ ಮನೆ ಬಾಗಿಲು ಬಡಿದಿದ್ದಕ್ಕಿಂತ ಹೆಚ್ಚಾಗಿ, ಕೇಂದ್ರ ನಾಯಕರ ಮನವೊಲಿಸಿ ಪಡೆದಿದ್ದೇ ಹೆಚ್ಚು.

ಜೆಡಿಎಸ್ ಪಾಳಯದಲ್ಲಿ ಕ್ಷೇತ್ರಕ್ಕೆ ನಿಖಿಲ್ ಹೆಸರು ಕೇಳಿ ಬರುತ್ತಿದ್ದಂತೆ, ಸಿಪಿವೈ ದೆಹಲಿಗೆ ದೌಡಾಯಿಸಿದ್ದಾರೆ. ಬಿಜೆಪಿ ನಾಯಕರನ್ನು ಭೇಟಿ ಮಾಡಿ, ಕ್ಷೇತ್ರದ ಟಿಕೆಟ್ ಅನ್ನು ತಮಗೇ ನೀಡುವಂತೆ ಮನವೊಲಿಸುವ ಪ್ರಯತ್ನ ಮುಂದುವರಿಸಿದ್ದಾರೆ. ವರಿಷ್ಠರು ಅವರಿಗೆ ಮಣೆ ಹಾಕಿ ಮೈತ್ರಿ ಅಭ್ಯರ್ಥಿಯಾಗಿ ಸಿಪಿವೈ ಹೆಸರು ಘೋಷಿಸುವರೇ ಅಥವಾ ಎಚ್‌ಡಿಕೆ ತೀರ್ಮಾನಕ್ಕೆ ಬಿಡುವರೇ ಎಂದು ಕಾದು ನೋಡಬೇಕಿದೆ.

ಬಿಟ್ಟು ಕೊಡುವರೇ ಎಚ್‌ಡಿಕೆ?

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗ್ರಾಮಾಂತರ ಬಿಟ್ಟಿರುವ ಎಚ್‌ಡಿಕೆ, ಜಿಲ್ಲೆಯಲ್ಲಿ ತಮ್ಮ ಅಸ್ತಿತ್ವವಿರುವ ಏಕೈಕ ಕ್ಷೇತ್ರವನ್ನು ಸಹ ಬಿಟ್ಟು ಕೊಡುವರೇ ಎಂಬುದರ ಚರ್ಚೆ ಗರಿಗೆದರಿದೆ. ಕ್ಷೇತ್ರ ಬಿಟ್ಟರೆ ಜಿಲ್ಲೆಯಲ್ಲಿ ತಮ್ಮ ಕುಟುಂಬದ ಹಿಡಿತ ಕೈ ತಪ್ಪಲಿದೆ. ಜೊತೆಗೆ, ವಿಧಾನಸೌಧದಲ್ಲಿ ಅವರ ಕುಟುಂಬದ ಯಾರೊಬ್ಬರೂ ಇಲ್ಲದಂತಾಗುತ್ತದೆ. ಹಾಗಾಗಿ, ಪುತ್ರ ನಿಖಿಲ್ ಅಥವಾ ಪತ್ನಿ ಅನಿತಾ ಅವರನ್ನು ಕಣಕ್ಕಿಳಿಸಿ ಹಿಡಿತ ಉಳಿಸಿಕೊಳ್ಳುವ ಆಲೋಚನೆಯೂ ಅವರಲ್ಲಿದೆ ಎನ್ನುತ್ತವೆ ಜೆಡಿಎಸ್ ಮೂಲಗಳು.

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಹಿಂದೆ ಕನಕಪುರ ಕಾಂಗ್ರೆಸ್ ಹಿಡಿತದಲ್ಲಿದ್ದರೆ, ಉಳಿದ 3 ಕ್ಷೇತ್ರಗಳು ಜೆಡಿಎಸ್‌ ತೆಕ್ಕೆಯಲ್ಲಿರುತ್ತಿದ್ದವು. ಆದರೆ, 2023ರ ಚುನಾವಣೆಯಲ್ಲಿ ಈ ಲೆಕ್ಕಾಚಾರ ತಲೆ ಕೆಳಗಾಗಿದೆ. ಜೆಡಿಎಸ್‌ ಕೇವಲ ಒಂದು ಕಡೆ ಇದ್ದರೆ, ಕಾಂಗ್ರೆಸ್ 3 ಕಡೆ ಅಧಿಕಾರದಲ್ಲಿದೆ. ಎಚ್‌ಡಿಕೆ ಕುಟುಂಬದ ಭದ್ರಕೋಟೆಯಾದ ರಾಮನಗರದಲ್ಲಿ ಡಿ.ಕೆ ಸಹೋದರರ ಆಪ್ತ ಎಚ್‌.ಎ. ಇಕ್ಬಾಲ್ ಹುಸೇನ್ ಗೆದ್ದಿದ್ದಾರೆ.

ಗ್ರಾಮಾಂತರ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡಿರುವ ಡಿ.ಕೆ. ಸುರೇಶ್ ಹೆಸರು, ಚನ್ನಪಟ್ಟಣಕ್ಕೆ ಕೇಳಿ ಬರುತ್ತಿದೆ. ‘ನಾನು ಸ್ಪರ್ಧಿಸುವುದಿಲ್ಲ’ ಎಂದು ಸದ್ಯ ಅವರು ಹೇಳಿದರೂ, ಕಡೆ ಗಳಿಗೆಯಲ್ಲಿ ತೀರ್ಮಾನ ಬದಲಾಗಬಹುದು. ಕ್ಷೇತ್ರದ ಸ್ಥಿತಿ ಮೈತ್ರಿ ಪರವಾಗಿದ್ದರೂ, ಕಾಂಗ್ರೆಸ್ ಚೇತರಿಕೆಯ ಹಾದಿಯಲ್ಲಿದೆ. ಒಮ್ಮತದ ಮೈತ್ರಿ ಅಭ್ಯರ್ಥಿ ಇಲ್ಲದಿದ್ದರೆ ಕ್ಷೇತ್ರ ಕೈ ತಪ್ಪುವ ಭೀತಿ ಇದ್ದೇ ಇದೆ.

ಟಿಕೆಟ್ ಸಿಗದಿದ್ದರೆ ಸಿಪಿವೈ ನಡೆ ಏನು?

ಉಪ ಚುನಾವಣೆ ಟಿಕೆಟ್ ಕೈ ತಪ್ಪಿದರೆ, ಯೋಗೇಶ್ವರ್ ಮುಂದೆ ಸದ್ಯ ಮೂರು ದಾರಿಗಳಿವೆ. ಪಕ್ಷಕ್ಕೆ ಸೆಡ್ಡು ಹೊಡೆದು ಪಕ್ಷೇತರವಾಗಿ ಸ್ಪರ್ಧಿಸಿ ಗೆಲ್ಲುವುದು ಮೊದಲ ದಾರಿಯಾದರೆ, ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ಕಣಕ್ಕಿಳಿಯುವುದು ಎರಡನೇ ಮಾರ್ಗ. ಇವೆರಡೂ ಆಗದಿದ್ದರೆ, ಸದ್ಯದ ವಿಧಾನ ಪರಿಷತ್ ಸದಸ್ಯ ಸ್ಥಾನದಲ್ಲೇ ಮುಂದುವರಿದು, ಮುಂದಿನ ಚುನಾವಣೆವರೆಗೆ ಕಾದು ನೋಡುವುದು. ಈ ಮೂರರಲ್ಲಿ ಅವರು ಯಾವ ಹಾದಿ ಹಿಡಿಯಲಿದ್ದಾರೆ ಎಂದು ಬೆಂಬಲಿಗರು ಕಾದು ನೋಡುತ್ತಿದ್ದಾರೆ.

‘ಕ್ಷೇತ್ರಕ್ಕೆ ಕುಮಾರಸ್ವಾಮಿ ಬಂದಾಗಿನಿಂದಲೂ ಅವರಿಗೆ ಪ್ರಬಲ ಎದುರಾಳಿ ಯೋಗೇಶ್ವರ್. ಸತತ ಎರಡು ಚುನಾವಣೆಗಳಲ್ಲಿ ಸೋತಿರುವ ಅವರ ಬಗ್ಗೆ ಜನರ ಅನುಕಂಪ ಇದೆ. ಸದ್ಯದ ಸ್ಥಿತಿಯಲ್ಲಿ ಅವರ ಭವಿಷ್ಯ ಏನಾಗುವುದೊ ಗೊತ್ತಿಲ್ಲ. ರಾಜಕಾರಣಿಗಳಿಗೆ ಅಧಿಕಾರ ಇದ್ದರಷ್ಟೇ ಬೆಲೆ. ಯೋಗೇಶ್ವರ್ ಸೋತರೂ ಯಾವುದಾದರೂ ಅಧಿಕಾರ ಗಿಟ್ಟಿಸಿಕೊಳ್ಳುವ ಚತುರ. ಅದಕ್ಕಾಗಿ, ಯಾವ ಮಟ್ಟದ ರಾಜಕಾರಣಕ್ಕೂ ಸೈ. ಉಪ ಚುನಾವಣೆ ಟಿಕೆಟ್ ತಪ್ಪಿದರೆ, ‘ಕೈ’ ಹಿಡಿದು ಎಚ್‌ಡಿಕೆ ವಿರುದ್ಧ ತೊಡೆ ತಟ್ಟಿದರೂ ಆಶ್ಚರ್ಯವಿಲ್ಲ. ಯಾಕೆಂದರೆ, ಜಿಲ್ಲೆಯಲ್ಲಿ ಅವರಷ್ಟು ಪಕ್ಷಾಂತರ ರಾಜಕಾರಣ ಮಾಡಿದವರು ಮತ್ತೊಬ್ಬರಿಲ್ಲ’ ಎನ್ನುತ್ತಾರೆ ಸ್ಥಳೀಯ ರಾಜಕಾರಣಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.