ಚನ್ನಪಟ್ಟಣ (ರಾಮನಗರ): ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ಶುಕ್ರವಾರ ನಾಮಪತ್ರ ಸಲ್ಲಿಸುವುದರೊಂದಿಗೆ ಚನ್ನಪಟ್ಟಣ ಉಪ ಚುನಾವಣೆ ಕಣವು ರಂಗೇರಿದೆ. ಗುರುವಾರ ರೋಡ್ ಷೋ ನಡೆಸಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ಪೈಪೋಟಿ ನೀಡಿದ ಮೈತ್ರಿಕೂಟದ ಶಕ್ತಿ ಪ್ರದರ್ಶನದ ರೋಡ್ ಷೋ ಕಾರ್ಯಕರ್ತರಿಗೆ ಉತ್ಸಾಹ ತುಂಬಿತು.
ಆರಂಭದಿಂದಲೂ ಕ್ಷೇತ್ರಕ್ಕೆ ನಿಖಿಲ್ ಅವರೇ ಅಭ್ಯರ್ಥಿಯಾಗಬೇಕು ಎಂದು ಪಟ್ಟು ಹಿಡಿದಿದ್ದ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ‘ಯುವರಾಜ’ನ ಚುನಾವಣೆಗೆ ಶಕ್ತಿ ತುಂಬಲು ಚನ್ನಪಟ್ಟಣ ಮಾತ್ರವಲ್ಲದೆ ಅಕ್ಕಪಕ್ಕದ ತಾಲ್ಲೂಕುಗಳಿಂದಲೂ ಬಸ್ಸುಗಳಲ್ಲಿ ಕಾರ್ಯಕರ್ತರು ಬಂದಿದ್ದರು. ಅರ್ಧ ಕಿ.ಮೀ.ಗೂ ಹೆಚ್ಚು ಉದ್ದದ ರೋಡ್ ಷೋದಲ್ಲಿ ನಿಖಿಲ್ ಹಾಗೂ ನಾಯಕರ ಪರ ಘೋಷಣೆಗಳನ್ನು ಕೂಗಿ ಅಭಿಮಾನ ಮೆರೆದರು.
ರೋಡ್ ಷೋನಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ‘ಚನ್ನಪಟ್ಟಣ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ಏನು ಎಂದು ಪ್ರಶ್ನಿಸುವವರು, ದಾಖಲೆ ತೆಗೆದು ನೋಡಲಿ. ರಾಮನಗರ ಜಿಲ್ಲೆ ರಚನೆಯಿಂದಿಡಿದು ಸೇತುವೆ, ಜಲಾಶಯ, ರಸ್ತೆ ನಿರ್ಮಾಣ, ಕಾಲೇಜು, ಕಚೇರಿಗಳು ಸೇರಿದಂತೆ ಎಲ್ಲವನ್ನೂ ತಂದವರು ಯಾರೆಂದು ಗೊತ್ತಾಗುತ್ತದೆ. ದೇವೇಗೌಡರ ಕಾಲದಿಂದಲೂ ಜಿಲ್ಲೆಯ ಅಭಿವೃದ್ಧಿಗೆ ಬದ್ದರಾಗಿ ನಾವು ಕೆಲಸ ಮಾಡಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
‘ತಾಲ್ಲೂಕಿನ ವಿಠ್ಠಲೇನಹಳ್ಳಿಯಲ್ಲಿ ಗೋಲಿಬಾರ್ ಆದಾಗ ಇಬ್ಬರು ರೈತರು ಸತ್ತರು. ಇದಕ್ಕೆ ಶಿವಕುಮಾರ ಅವರೇ ಕಾರಣ. ಇಷ್ಟು ವರ್ಷ ಚನ್ನಪಟ್ಟಣಕ್ಕೆ ಬಾರದವರು ಚುನಾವಣೆ ಕಾರಣಕ್ಕೆ ನಾಲ್ಕು ತಿಂಗಳಿಂದ ಓಡಾಡುತ್ತಿದ್ದಾರೆ. ನಿವೇಶನ, ಮನೆ, ಸಾಗುವಳಿ ಚೀಟಿ ಕೊಡುತ್ತೇವೆ, ತಾಲ್ಲೂಕಿನಲ್ಲಿ ಅಭಿವೃದ್ಧಿಯ ಹೊಳೆ ಹರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಸೋತ ಬಳಿಕ ಅವರು ಇತ್ತ ತಿರುಗಿಯೂ ನೋಡಲ್ಲ’ ಎಂದರು.
ಸಂಸದ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, ‘ಲೋಕಸಭಾ ಚುನಾವಣೆಯಲ್ಲಿ ಗ್ರಾಮಾಂತರ ಕ್ಷೇತ್ರಕ್ಕಿಂತಲೂ ಚನ್ನಪಟ್ಟಣ ಈಗ ಹೈ ವೋಲ್ಟೇಜ್ ಆಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಯಾವುದೇ ಆಮಿಷಕ್ಕೆ ಒಳಗಾಗದೆ, ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಬೇಕು’ ಎಂದು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಬಿಜೆಪಿ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿ.ವೈ. ರಾಘವೇಂದ್ರ, ಡಾ. ಕೆ. ಸುಧಾಕರ್, ಮಲ್ಲೇಶ್ ಬಾಬು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕರಾದ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಹರೀಶ್ ಗೌಡ, ಸಿ.ಎನ್. ಬಾಲಕೃಷ್ಣ, ಪುಟ್ಟಸ್ವಾಮಿ, ಮಾಜಿ ಶಾಸಕರಾದ ಎ. ಮಂಜುನಾಥ್, ಬಂಡೆಪ್ಪ ಕಾಶೆಂಪೂರ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಜಯಮುತ್ತು, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎನ್. ಆನಂದ್‌ಸ್ವಾಮಿ ಹಾಗೂ ಎರಡೂ ಪಕ್ಷಗಳ ಮುಖಂಡರು ಇದ್ದರು.
‘ಚನ್ನಟ್ಟಣ ಕಾರ್ಯಕರ್ತರ ಒತ್ತಡದಿಂದ ನಾನು ಇಲ್ಲಿಗೆ ಬಂದು ಸ್ಪರ್ಧಿಸಿದೆ. ಎರಡು ಚುನಾವಣೆಗಳಲ್ಲಿ ನೀವೇ ಓಡಾಡಿ ಗೆಲ್ಲಿಸಿದ್ದೀರಿ. ಈಗ ನಿಖಿಲ್‌ನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ದೇವೇಗೌಡರು ಮತ್ತು ನನಗೆ ಅಮೃತ ಕೊಟ್ಟಿರುವ ನೀವು ನನ್ನ ಮಗನಿಗೆ ಏನು ಕೊಡಬೇಕೆಂದು ತೀರ್ಮಾನ ಮಾಡಿ. ನಮ್ಮಿಂದ ಏನಾದರೂ ಅನ್ಯಾಯವಾಗಿದ್ದರೆ ಶಿಕ್ಷೆ ಕೊಡಿ. ಎಲ್ಲವನ್ನೂ ನಾನು ಸ್ವೀಕರಿಸುತ್ತೇನೆ. ಮಂಡ್ಯ ಮತ್ತು ರಾಮನಗರದಲ್ಲಿ ನಿಖಿಲ್‌ನನ್ನು ಕುತಂತ್ರ ಮಾಡಿ ಸೋಲಿಸಿದವರು ಇಲ್ಲಿಗೂ ಬಂದಿದ್ದಾರೆ. ನಿಖಿಲ್ ಆಶೀರ್ವಾದ ಮಾಡಿ ಅವರಿಗೆ ಈಗಲಾದರೂ ಪಾಠ ಕಲಿಸಿ’ ಎಂದು ಎಚ್.ಡಿ. ಕುಮಾರಸ್ವಾಮಿ ಬಾವುಕರಾಗಿ ನುಡಿದರು.
‘ಅಸಾಧ್ಯವಾದುದು ಯಾವುದೂ ಇಲ್ಲ’ ‘ಜನ ಮನಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶವೇ ಸಾಕ್ಷಿ. ರಾಜ್ಯದ ಕಾಂಗ್ರೆಸ್ ಸರ್ಕಾರದ ಹಗರಣ ಭ್ರಷ್ಟಾಚಾರ ಹಾಗೂ ಅಭಿವೃದ್ಧಿ ವಿರೋಧಿ ಆಡಳಿತದಿಂದ ಬೇಸತ್ತಿರುವ ಜನರು ಈ ಚುನಾವಣೆಯ ಮೂಲಕ ಅವರಿಗೆ ಪಾಠ ಕಲಿಸಬೇಕು. ನೀವು ಕೊಟ್ಟ ಅಧಿಕಾರದ ಶಕ್ತಿಯಿಂದಾಗಿ ದೇವೇಗೌಡರ ಕಾಲದಿಂದಲೂ ನಮ್ಮ ಕುಟುಂಬ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದೆ. ವಿರೋಧ ಪಕ್ಷದವರು ಏನೇ ಹೇಳಿದರೂ ಕಿವಿಗೆ ಹಾಕಿಕೊಳ್ಳದೆ ಎರಡೂ ಪಕ್ಷದ ಕಾರ್ಯಕರ್ತರು ಗೆಲುವಿಗಾಗಿ ಹಗಲಿರುಳು ಶ್ರಮಿಸಬೇಕು. ಬಿಜೆಪಿ–ಜೆಡಿಎಸ್‌ಗೆ ಪ್ರತಿಷ್ಠೆಯಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅವಕಾಶ ನೀಡದಂತೆ ನೋಡಿಕೊಳ್ಳಬೇಕು’ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಹಗಲುವೇಷದಲ್ಲಿ ಬಂದಿರುವ ಯೋಗೇಶ್ವರ್ ಅದೇನೊ ಭಗೀರಥ ಅಂತೆ. ದೇವೇಗೌಡರು ಅಣೆಕಟ್ಟ್ಟೆ ನಿರ್ಮಿಸದಿದ್ದಿದ್ದರೆ ಸದಾನಂದ ಗೌಡರು ಹಣ ಬಿಡುಗಡೆ ಮಾಡದಿದ್ದರೆ ಕೆರೆಗಳಿಗೆ ಎಲ್ಲಿಂದ ನೀರು ಬರುತ್ತಿತ್ತು?-ಡಾ. ಕೆ. ಅನ್ನದಾನಿ ಜೆಡಿಎಸ್ ಮಾಜಿ ಶಾಸಕ
ನಿಖಿಲ್ ಅಣ್ಣ ನಮ್ಮೆಲ್ಲರ ಒತ್ತಡದಿಂದ ಸ್ಪರ್ಧಿಸಿದ್ದಾರೆ. ಪಕ್ಷದ ಮುಂದಿನ ಆಧಾರಸ್ತಂಭವಾಗಿರುವ ಅವರನ್ನು ಗೆಲ್ಲಿಸುವ ಹೊಣೆ ನಮ್ಮದು. ಸ್ವಾಭಿಮಾನಿ ಎನ್ನುವ ಪಕ್ಷಾಂತರಿಗೆ ಪಾಠ ಕಲಿಸಬೇಕು.-ಎಚ್.ಸಿ. ಜಯಮುತ್ತು ಅಧ್ಯಕ್ಷ ಚನ್ನಪಟ್ಟಣ ತಾಲ್ಲೂಕು ಜೆಡಿಎಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.