ಚನ್ನಪಟ್ಟಣ (ರಾಮನಗರ): ‘ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನಮ್ಮ ತಂದೆ ಎಚ್.ಡಿ. ಕುಮಾರಸ್ವಾಮಿ ಹಾಗೂ ತಾತ ಎಚ್.ಡಿ. ದೇವೇಗೌಡರ ಕುರಿತು ಆಡಿರುವ ಮಾತುಗಳಿಗೆ ಮತದಾರರೇ ಉತ್ತರ ಕೊಟ್ಟಿದ್ದಾರೆ. ಅದಕ್ಕೆ ನ. 23ರಂದು ಹೊರಬೀಳುವ ಫಲಿತಾಂಶದವರೆಗೆ ಕಾದು ನೋಡಿ’ ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿರುವ ಎನ್‌ಡಿಎ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಹಣೆಬರಹವನ್ನು ಬೇರೆ ಯಾರೋ ಬರೆಯುವುದಿಲ್ಲ. ಬದಲಿಗೆ ಕ್ಷೇತ್ರದ ಮತದಾರರೇ ಬರೆಯುತ್ತಾರೆ. ಮತ ಎಣಿಕೆ ದಿನದಂದು ಜನರು ಬರೆದಿರುವ ತೀರ್ಪು ಏನೆಂದು ಎಲ್ಲರಿಗೂ ಗೊತ್ತಾಗಲಿದೆ’ ಎಂದರು.
‘ಹಿಂದಿನ ಎರಡು ಚುನಾವಣೆಗಳಲ್ಲಿ ರಾಜಕೀಯ ಕುತಂತ್ರದಿಂದ ನಾನು ಸೋಲು ಅನುಭವಿಸಿದೆ. ಈಗಲೂ ಚುನಾವಣೆಗೆ ನಿಲ್ಲುವ ಆಸಕ್ತಿ ನನ್ನಲ್ಲಿ ಇರಲಿಲ್ಲ. ಆದರೆ ಕೊನೆ ಕ್ಷಣದಲ್ಲಾದ ರಾಜಕೀಯ ಬೆಳವಣಿಗೆಗಳು ಸ್ಪರ್ಧಿಸಬೇಕಾದ ಅನಿವಾರ್ಯತೆ ಸೃಷ್ಟಿಸಿದವು. ಕಾರ್ಯಕರ್ತರ ಆತಂಕ ಮತ್ತು ಗೊಂದಲಕ್ಕೆ ಪರಿಹಾರ ಕೊಡಬೇಕಿತ್ತು. ಹಾಗಾಗಿ, ಸ್ಪರ್ಧೆ ಅನಿವಾರ್ಯವಾಯಿತು. ಈ ಚುನಾವಣೆ ಒಂದು ರೀತಿಯಲ್ಲಿ ಅಗ್ನಿ ಪರೀಕ್ಷೆಯಾಗಿತ್ತು’ ಎಂದು ತಿಳಿಸಿದರು.
‘ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದೆ. ಇದರಲ್ಲಿ ಚನ್ನಪಟ್ಟಣ ಕ್ಷೇತ್ರವು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಹಳ ಗಮನ ಸೆಳೆದಿದೆ. ಫಲಿತಾಂಶದ ಕುರಿತು ಭಾರೀ ಕುತೂಹಲ ಮೂಡಿದೆ. ಈ ಉಪ ಚುನಾವಣೆ ರಾಜ್ಯದ ಇತಿಹಾಸದ ಪುಟದಲ್ಲಿ ಉಳಿಯುತ್ತೆ. ಈ ಚುನಾವಣೆ ನಿಖಿಲ್ ಚುನಾವಣೆ ಆಗಿರಲಿಲ್ಲ. ಮೈತ್ರಿ ಕಾರ್ಯಕರ್ತರ ಚುನಾವಣೆಯಾಗಿತ್ತು’ ಎಂದು ಹೇಳಿದರು.
‘ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಆಶೀರ್ವಾದ ಮಾಡಿ ಅಭ್ಯರ್ಥಿಯಾಗಿ ಹೆಸರು ಘೋಷಿಸಿದರು. ಕಳೆದ 18 ದಿನಗಳಿಂದ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಎರಡೂ ಪಕ್ಷಗಳ ನಾಯಕರು ನನ್ನ ಪರವಾಗಿ ಬಂದು ಬೆವರು ಹರಿಸಿದ್ದಾರೆ. ಯುವಜನರು ಹಾಗೂ ಹಿರಿಯರು ಪ್ರೀತಿ ತೋರಿಸಿದ್ದಾರೆ. ಎಲ್ಲರಿಗೂ ನಾನು ಧನ್ಯವಾದ ತಿಳಿಸುವೆ’ ಎಂದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎ. ಮಂಜುನಾಥ್, ತಾಲ್ಲೂಕು ಅಧ್ಯಕ್ಷ ಸಿ.ಎಚ್. ಜಯಮುತ್ತು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಂ. ಆನಂದಸ್ವಾಮಿ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು ಇದ್ದರು.
‘ಗೆಲುವು ನಿಶ್ಚಿತ; ಪ್ರಾಮಾಣಿಕ ಸೇವೆಗೆ ಬದ್ಧ’
‘ಚುನಾವಣೆಯಲ್ಲಿ ನನಗೆ ಗೆಲುವು ನಿಶ್ಚಿತವಾಗಿದ್ದು ಮೂರೂವರೆ ವರ್ಷ ಪ್ರಾಮಾಣಿಕವಾಗಿ ಕ್ಷೇತ್ರದ ಜನರ ಸೇವೆ ಮಾಡುವೆ. 1983ರಿಂದಲೂ ಚನ್ನಪಟ್ಟಣದ ಜೊತೆ ದೇವೇಗೌಡರು ವಿಶೇಷ ಸಂಬಂಧ ಹೊಂದಿದ್ದಾರೆ. ಅದು ಚುನಾವಣೆ ರಾಜಕೀಯ ಮೀರಿದ್ದಾಗಿದೆ. ಅದಕ್ಕಾಗಿ ಅವರು ಪ್ರಚಾರಕ್ಕೆ ಬಂದು ಹೆಚ್ಚಿನ ಶಕ್ತಿ ತುಂಬಿದರು. ಆರು ದಿನದಲ್ಲಿ ಕ್ಷೇತ್ರದ ವಿವಿಧ ಭಾಗದಲ್ಲಿ 32 ಪ್ರಚಾರ ಸಭೆಗಳನ್ನು ನಡೆಸಿದರು. ಚನ್ನಪಟ್ಟಣ ನೀರಾವರಿಗೆ ಅವರ ಕೊಡುಗೆ ಶಾಶ್ವತವಾದುದು. ಇಗ್ಗಲೂರು ಬ್ಯಾರೇಜ್ ಕಟ್ಟದಿದ್ದರೆ ನೀರಾವರಿ ಸಾಕಾರವಾಗುತ್ತಿರಲಿಲ್ಲ. ಅವರ ಆಶೀರ್ವಾದ ನಮಗೆ ಶ್ರೀರಕ್ಷೆ’ ಎಂದು ನಿಖಿಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.