ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನ.13ರಂದು ಮತದಾನ ನಡೆಯಲಿದ್ದು, ನ.11ಕ್ಕೆ ಬಹಿರಂಗ ಪ್ರಚಾರ ತೆರ ಬೀಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಕ್ಷೇತ್ರದ ಮತದಾರರಲ್ಲದವರು ನ.11ರ ಸಂಜೆ 5.30ರ ನಂತರ ಕ್ಷೇತ್ರ ಬಿಟ್ಟು ಹೊರಹೋಗಬೇಕು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವಂತಿಲ್ಲ. ಆ ವೇಳೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ ಎಂದು ತಿಳಿಸಿದರು.
ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಹೋಟೆಲ್, ರೆಸಾಟ್ಸ್, ಹೋಂ ಸ್ಟೇ, ಕಲ್ಯಾಣ ಮಂಟಪಗಳ ಮಾಲೀಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅವರಿಂದ ಕ್ಷೇತ್ರದ ಮತದಾರರಲ್ಲದವರು ಅಥವಾ ಕ್ಷೇತ್ರದ ಚುನಾವಣಾ ಗುರುತಿನ ಚೀಟಿ ಇಲ್ಲದವರ ವಾಸ್ತವ್ಯಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದು. ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು 16 ಎಸ್‌ಎಸ್‌ಟಿ ತಂಡ ಮತ್ತು ಒಂಬತ್ತು ಎಫ್‌ಎಸ್‌ಟಿ ತಂಡಗಳನ್ನು ನಿಯೋಜಿಸಲಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 276 ಮತಗಟ್ಟೆ ಸ್ಥಾಪಿಸಲಾಗಿದೆ. ಎಲ್ಲಾ ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್‌ಗೆ ಪ್ರಕ್ರಿಯೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 119 ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗಿದೆ. ಅವರು ಚುನಾವಣಾ ವೀಕ್ಷಕರ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು.
ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವ್ಯಕ್ತಿಯೊಬ್ಬರು ಗರಿಷ್ಠ ₹ 50 ಸಾವಿರ ನಗದು ಸಾಗಿಸಬಹುದಾಗಿದೆ. ಅದಕ್ಕೂ ಹೆಚ್ಚಿನ ಮೊತ್ತ ಕೊಂಡೊಯ್ಯಬೇಕಾದರೆ ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕು ಎಂದರು.
ಸೂಕ್ತ ಬಂದೋಬಸ್ತ್: ಈಗಾಗಲೇ 8 ಪ್ಯಾರಾ ಮಿಲಿಟರಿ ತಂಡ ಜಿಲ್ಲೆಗೆ ಆಗಮಿಸಿದೆ. ಅದರಲ್ಲಿ ಏಳು ಪ್ಯಾರಾ ಮಿಲಿಟರಿ ಪಡೆಯನ್ನು 197 ಮತಗಟ್ಟೆಗಳ ಬಂದೋಬ್ತ್‌ಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದರು.
119 ಕ್ರಿಟಿಕಲ್ ಮತಗಟ್ಟೆ ಸ್ಥಾಪಿಸಲಾಗಿದೆ. ಅದರಲ್ಲಿ ಒಬ್ಬರು ಪೊಲೀಸ್ ಹಾಗೂ ಒಬ್ಬರು ಗೃಹ ರಕ್ಷಕರು (ಹೋಮ್ ಗಾರ್ಡ್) ಇರುತ್ತಾರೆ. ಸಾಮಾನ್ಯ ಮತಗಟ್ಟೆಗಳಿಗೆ ಪೊಲೀಸ್ ಸಿಬ್ಬಂದಿ ಹಾಗೂ 54 ಕ್ಲಸ್ಟರ್ ಮತಗಟ್ಟೆಗಳಿಗೆ ಎಎಸ್‌ಐ ರ‍್ಯಾಂಕ್ ಅಧಿಕಾರಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಚುನಾವಣಾ ಮತದಾನಕ್ಕೆ ಪಿಆರ್‌ಒ, ಎಪಿಆರ್‌ಓ ಹಾಗೂ ಪಿಒಎಸ್ ಸೇರಿದಂತೆ 1,252 ಮತಗಟ್ಟೆ ಸಿಬ್ಬಂದಿ ನಿಯೋಜಿಸಲಾಗಿದೆ. ಇವರಿಗೆ ತರಬೇತಿ ನೀಡಲಾಗಿದೆ. 119 ಮೈಕ್ರೋ ವೀಕ್ಷಕರಿಗೂ ತರಬೇತಿ ನೀಡಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ.ವಿ. ಸುರೇಶ್ ಮತ್ತು ರಾಮಚಂದ್ರ ಭಾಗವಹಿಸಿದ್ದರು.
ಇದೂವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಒಟ್ಟು 14 ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸ್ ಇಲಾಖೆ ವ್ಯಾಪ್ತಿಗೆ ಒಳಪಡುವ ಒಂಬತ್ತು ಅಬಕಾರಿ ಪ್ರಕರಣಗಳು ಸೇರಿವೆ 676 ಸೀರೆ ಜಫ್ತಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ವ್ಯವಸ್ಥಾಪಕ ಹಾಗೂ ಮತ್ತೊಬ್ಬರ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದರು. ದೂರು ನೀಡಲು ಮತದಾರರ ಸೆಳೆಯಲು ಹಣ ಮತ್ತು ಇತರೆ ಆಮಿಷ ಒಡುತ್ತಿದ್ದರೆ ದೂರು ದಾಖಲಿಸಲು 1950ಗೆ ಕರೆ ಮಾಡಬಹುದು ಅಥವಾ ಸಿ-ವಿಜಿಲ್ ಆಪ್ ಮೂಲಕ ದೂರು ನೀಡಬಹುದು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನ.12ರ ಮಂಗಳವಾರ ಸಂಜೆ 6 ಗಂಟೆಯಿಂದ ನ.14ರ ಗುರುವಾರ ಬೆಳಿಗ್ಗೆ 6 ಗಂಟೆಯ ವರೆಗೆ ವಿವಿಧ ಷರತ್ತುಗಳನ್ನು ವಿಧಿಸಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ನ.11ರ ಸೋಮವಾರ ಸಂಜೆ 6 ಗಂಟೆಯಿಂದ ನ.14ರ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೆ 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಾದ್ಯಂತ ಎಲ್ಲಾ ರೀತಿಯ ಮದ್ಯ ಮಾರಾಟ ಹಂಚಿಕೆ ಸಾಗಾಣಿಕೆ ನಿಷೇಧಿಸಿ ಶುಷ್ಕ ದಿನ ಎಂದು ಘೋಷಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.