ADVERTISEMENT

ಚನ್ನಪಟ್ಟಣ ಉಪಚುನಾವಣೆ: ಮೈತ್ರಿ ಸವಾಲು ಗೆದ್ದ ‘ಸೈನಿಕ’

ಫಲಿಸಿದ ಡಿ.ಕೆ ಸಹೋದರರ ರಣತಂತ್ರ; ನಿಖಿಲ್‌ಗೆ ಹ್ಯಾಟ್ರಿಕ್ ಸೋಲು; ಜಿಲ್ಲೆಯಲ್ಲಿ ಶೂನ್ಯಕ್ಕಿಳಿದ ಜೆಡಿಎಸ್

ಓದೇಶ ಸಕಲೇಶಪುರ
Published 23 ನವೆಂಬರ್ 2024, 18:32 IST
Last Updated 23 ನವೆಂಬರ್ 2024, 18:32 IST
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಸಿ.ಪಿ. ಯೋಗೇಶ್ವರ್ ಅವರು ವಿಜಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನಸಮೂಹದತ್ತ ಕೈ ಬೀಸಿದರು
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಸಿ.ಪಿ. ಯೋಗೇಶ್ವರ್ ಅವರು ವಿಜಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನಸಮೂಹದತ್ತ ಕೈ ಬೀಸಿದರು   

ರಾಮನಗರ: ಚನ್ನಪಟ್ಟಣದ ರಾಜಕೀಯ ಗೊಂಬೆಯಾಟದ ಕುತೂಹಲಕ್ಕೆ ಶನಿವಾರ ತೆರೆ ಬಿದ್ದಿದ್ದು, ತಮ್ಮ ರಾಜಕೀಯ ಜೀವನದ ಅಳಿವು–ಉಳಿವಿನ ಪ್ರಶ್ನೆಯಾಗಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಗೆಲುವಿನ ನಗೆ ಬೀರಿದ್ದಾರೆ. 

ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಜೆಪಿ ತೊರೆದು ‘ಕೈ’ ಹಿಡಿದ ಸೈನಿಕ, ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಸವಾಲು ಗೆದ್ದಿದ್ದಾರೆ. ಸತತ ಎರಡು ಸೋಲುಂಡು ಮೂರನೇ ಸಲ ಅಗ್ನಿಪರೀಕ್ಷೆಗೆ ಇಳಿದಿದ್ದ ಯೋಗೇಶ್ವರ್‌ ಅವರಿಗೆ ಆರೂವರೆ ವರ್ಷದ ಬಳಿಕ ಮತದಾರರು ಮತ್ತೆ ಮಣೆ ಹಾಕಿದ್ದಾರೆ.

ತಂದೆ ಎಚ್‌.ಡಿ. ಕುಮಾರಸ್ವಾಮಿ ಸತತ ಎರಡು ಸಲ ಗೆದ್ದು, ಒಮ್ಮೆ ಮುಖ್ಯಮಂತ್ರಿ ಹುದ್ದೆಗೇರಿದ್ದ ಕ್ಷೇತ್ರದಲ್ಲಿ ಗೆಲುವಿನ ದಡ ಸೇರುವಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಮತ್ತೊಮ್ಮೆ ಎಡವಿದ್ದಾರೆ.

ADVERTISEMENT

‘ಸೈನಿಕ’ ಯೋಗೇಶ್ವರ್ ಮತ್ತು ಡಿ.ಕೆ ಸಹೋದರರಾದ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ರಚಿಸಿದ ಚುನಾವಣಾ ಚಕ್ರವ್ಯೂಹ ಭೇದಿಸಲಾಗದೆ ಹ್ಯಾಟ್ರಿಕ್ ಸೋಲು ಕಂಡಿದ್ದಾರೆ.

ಕ್ಷೇತ್ರ ಕಂಡಿರುವ 19 ಚುನಾವಣೆಗಳಲ್ಲಿ ಮೊದಲ ಬಾರಿಗೆ ಅಭ್ಯರ್ಥಿಯೊಬ್ಬರು ಒಂದು ಲಕ್ಷಕ್ಕೂ ಹೆಚ್ಚು (1,12,642) ಮತಗಳನ್ನು ಪಡೆದು ಜಯಭೇರಿ ಬಾರಿಸಿದ ಕೀರ್ತಿಗೆ ಯೋಗೇಶ್ವರ್ ಪಾತ್ರರಾಗಿದ್ದಾರೆ. ಕ್ಷೇತ್ರದ ರಾಜಕಾರಣದಲ್ಲಿ 25 ವರ್ಷಗಳಿಂದ ಸಕ್ರಿಯವಾಗಿರುವ ಅವರು 16 ವರ್ಷಗಳ ಬಳಿಕ ಕ್ಷೇತ್ರದಲ್ಲಿ ಮತ್ತೆ ‘ಕೈ’ ಬಾವುಟ ಹಾರಿಸಿದ್ದಾರೆ. ಕ್ಷೇತ್ರದ ಶಾಸಕನಾಗಿ ಆರನೇ ಸಲ ವಿಧಾನಸೌಧ ಪ್ರವೇಶಿಸಲಿದ್ದಾರೆ. 

ಸೋಲಿನ ಸೇಡು: ಮತ ಎಣಿಕೆಯ 20 ಸುತ್ತಗಳ ಪೈಕಿ ಮೊದಲ ಸುತ್ತಿನಲ್ಲಿ ಹಾಗೂ 7ರಿಂದ ಕಡೆಯ ಸುತ್ತಿನವರೆಗೂ ಯೋಗೇಶ್ವರ್‌ ಸತತ ಮುನ್ನಡೆ ಕಾಯ್ದುಕೊಂಡರು. ಸೈನಿಕನ ಬೆನ್ನಿಗೆ ನಿಂತು ಗೆಲುವಿನ ದಡ ಸೇರಿಸಿದ ಡಿ.ಕೆ ಸಹೋದರರು ಲೋಕಸಭಾ ಚುನಾವಣೆಯಲ್ಲಿ ತಮಗಾದ (ಸುರೇಶ್‌ ಸೋಲು) ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲುವಿನೊಂದಿಗೆ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳು ‘ಕೈ’ ಪಾಲಾಗಿವೆ. ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ್‌ ಅವರಿಗೆ ಈ ಗೆಲುವು ಹೆಚ್ಚಿನ ಶಕ್ತಿ ತುಂಬಿದೆ.

ಮೂರು ಸಲ ಪ್ರಚಾರದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಮತಗಳ ಶಕ್ತಿ ತುಂಬಿದ್ದಾರೆ. ಅಭಿವೃದ್ಧಿ ಜಪದ ಜೊತೆಗೆ ಗ್ಯಾರಂಟಿಗಳು ‘ಕೈ’ ಹಿಡಿದಿವೆ. ಸಚಿವರು, ಶಾಸಕರು, ಮುಖಂಡರ ಬಿಡುವಿಲ್ಲದ ಶ್ರಮ ಗೆಲುವಿನ ಸಿಹಿ ಕೊಟ್ಟಿದೆ.

ಶೂನ್ಯಕ್ಕಿಳಿದ ಜೆಡಿಎಸ್: ಜಿಲ್ಲೆಯಲ್ಲಿ 1985ರಿಂದ 39 ವರ್ಷ ತಮ್ಮ ಹಿಡಿತ ಹೊಂದಿದ್ದ ದೇವೇಗೌಡರ ಕುಟುಂಬದ ಶಾಸನಸಭೆಯ ಪ್ರಾತಿನಿಧ್ಯ ಮೊದಲ ಬಾರಿಗೆ ಶೂನ್ಯಕ್ಕಿಳಿದಿದೆ. ತಮ್ಮ ಕುಟುಂಬದವರನ್ನು ಪ್ರಧಾನಿ ಮತ್ತು ಮುಖ್ಯಮಂತ್ರಿ ಹುದ್ದೆಗೇರಿಸಿದ್ದ ಜಿಲ್ಲೆಯಲ್ಲಿ ಪುತ್ರನಿಗೆ ರಾಜಕೀಯ ಜನ್ಮ ಕೊಡಿಸಲು ಕುಮಾರಸ್ವಾಮಿ ನಡೆಸಿದ ಹೋರಾಟ ಫಲ ಕೊಟ್ಟಿಲ್ಲ. ಇಳಿ ವಯಸ್ಸಿನಲ್ಲೂ ಮೊಮ್ಮಗನ ಗೆಲುವಿಗಾಗಿ ದೇವೇಗೌಡರು ಹಾಕಿದ ಶ್ರಮ ವ್ಯರ್ಥವಾಗಿದೆ. ಕ್ಷೇತ್ರದಲ್ಲಿ ಗೌಡರ ಕುಟುಂಬ ರಾಜಕಾರಣದ ಬದಲು ಸ್ಥಳೀಯ ನಾಯಕತ್ವಕ್ಕೆ ಮತದಾರರು ಸೈ ಎಂದಿದ್ದಾರೆ.

ಯೋಗೇಶ್ವರ್, ಡಿ.ಕೆ ಸಹೋದರರು ಸೇರಿದಂತೆ ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ಮಾಡಿದ ವೈಯಕ್ತಿಕ ಮಟ್ಟದ ಟೀಕೆಗಳನ್ನು ಗೌಡರ ಕುಟುಂಬ ಪ್ರಚಾರದ ಅಸ್ತ್ರ ಮಾಡಿಕೊಂಡರೂ ಮತಗಳ ಫಸಲು ಬಂದಿಲ್ಲ. ಪ್ರಚಾರದ ಕಡೆಯಲ್ಲಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಆಡಿದ ಮಾತುಗಳು, ಒಕ್ಕಲಿಗ ಮತ್ತು ಹಿಂದೂ ಮತಗಳನ್ನು ನಿಖಿಲ್ ಪರ ಕ್ರೋಡೀಕರಿಸಲಿವೆ ಎಂಬ ಲೆಕ್ಕಾಚಾರ ಉಲ್ಟಾ ಆಗಿದೆ. ವಕ್ಫ್ ವಿಷಯವನ್ನು ಮತದಾರರ ಮೇಲೆ ಪರಿಣಾಮ ಬೀರಿಲ್ಲ.

‘ಕೈ’ ಹಿಡಿದ ಅಲ್ಪಸಂಖ್ಯಾತರು: ಕ್ಷೇತ್ರದ ಚುನಾವಣೆಯಲ್ಲಿ ಚನ್ನಪಟ್ಟಣ ನಗರ ವ್ಯಾಪ್ತಿಯಲ್ಲಿ ಹೆಚ್ಚು ಮತಗಳನ್ನು ಪಡೆದವರಿಗೆ ಗೆಲುವು ಖಚಿತ ಎಂಬ ಮಾತು ಉಪ ಚುನಾವಣೆಯಲ್ಲೂ ಸಾಬೀತಾಗಿದೆ. ನಗರದಲ್ಲಿ ಚಲಾವಣೆಯಾದ 48,084 ಮತಗಳಲ್ಲಿ 33,512 ಮತಗಳು ‘ಕೈ’ಗೆ ಬಂದಿದ್ದರೆ 13,914 ಮತಗಳಷ್ಟೇ ದಳದ ಪಾಲಾಗಿವೆ. ನಗರದಲ್ಲೇ ‘ಕೈ’ಗೆ 19,598 ಮತಗಳ ಮುನ್ನಡೆ ಸಿಕ್ಕಿದೆ. ಇದರಲ್ಲಿ ಸಿಂಹಪಾಲು ಅಲ್ಪಸಂಖ್ಯಾತ ಸಮುದಾಯದ್ದು.

ಜೆಡಿಎಸ್‌ನ ಬಿಜೆಪಿ ಸಖ್ಯದ ಕಾರಣಕ್ಕೆ ಅಲ್ಪಸಂಖ್ಯಾತರು ದಳದಿಂದ ಅಂತರ ಕಾಯ್ದುಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೆಡಿಎಸ್‌ ನಿರೀಕ್ಷಿಸಿದ್ದ ಮತಗಳು ಬಾರದೆ ವಿಭಜನೆಯಾಗಿದ್ದು ‘ಕೈ’ಗೆ ವರವಾಗಿದೆ. ಯೋಗೇಶ್ವರ್ ಮತ್ತು ನಿಖಿಲ್ ಹೊರತುಪಡಿಸಿ ಕಣದಲ್ಲಿದ್ದ ಇತರ 29 ಅಭ್ಯರ್ಥಿಗಳಿಗೆ ಠೇವಣಿಯೂ ಉಳಿದಿಲ್ಲ. ಈ ಎಲ್ಲ ಅಭ್ಯರ್ಥಿಗಳು  ಹಾಗೂ ನೋಟಾಗೆ 7,476 ಮತಗಳು ಬಂದಿವೆ.

ಸಿ.ಪಿ. ಯೋಗೇಶ್ವರ್ ಅವರ ಗೆಲವನ್ನು ಸಂಭ್ರಮಿಸಿದ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು
ಕ್ಷೇತ್ರದ ಜನರಿಗೆ ಈ ಗೆಲುವನ್ನು ಅರ್ಪಿಸುವೆ. ಈ ಗೆಲುವಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಜಿ ಸಂಸದ ಡಿ.ಕೆ. ಸುರೇಶ್ ಸಚಿವರು ಸೇರಿದಂತೆ ಹಲವರ ಶ್ರಮವಿದೆ. ಎದುರಾಳಿಯಾಗಿದ್ದ ನಿಖಿಲ್‌ ಕುಮಾರಸ್ವಾಮಿಗೆ ಒಳ್ಳೆಯದಾಗಲಿ
-ಸಿ.ಪಿ. ಯೋಗೇಶ್ವರ್ ಚನ್ನಪಟ್ಟಣದ ನೂತನ ಶಾಸಕ
ಫಲಿತಾಂಶ ಆಘಾತ ತಂದಿದೆ. ಹಿಂದಿನಿಂದಲೂ ಜೊತೆಗಿದ್ದ ಅಲ್ಪಸಂಖ್ಯಾತರು ನಮ್ಮ ಕೈ ಹಿಡಿಯಲಿಲ್ಲ. ಅಭ್ಯರ್ಥಿ ಆಯ್ಕೆ ವಿಳಂಬವಾಗದಿದ್ದಿದ್ದರೆ ಗೆಲುವು ಸಾಧ್ಯವಾಗುತ್ತಿತ್ತು. ಎಲ್ಲೂ ಹೋಗದೆ ಜಿಲ್ಲೆಯ ಜನರ ಜೊತೆಗಿದ್ದು ಋಣ ತೀರಿಸುವೆ. ನನ್ನ ಹೋರಾಟ ನಿರಂತರವಾಗಿರಲಿದೆ
-ನಿಖಿಲ್ ಕುಮಾರಸ್ವಾಮಿ ಪರಾಜಿತ ಜೆಡಿಎಸ್ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.