ರಾಮನಗರ: ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣ ಉಪ ಚುನಾವಣೆಯ ಟಿಕೆಟ್ ರಾಜಕಾರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಿಜೆಪಿ–ಜೆಡಿಎಸ್ ಮೈತ್ರಿಕೂಟಕ್ಕೆ ಕ್ಷೇತ್ರ ಸುಲಭದ ತುತ್ತಾಗಿದ್ದರೂ ಟಿಕೆಟ್ ವಿಷಯದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಬಿಜೆಪಿಯ ಸಿ.ಪಿ. ಯೋಗೇಶ್ವರ್ ಮತ್ತು ಜೆಡಿಎಸ್ ನಡುವೆ ಹಗ್ಗಜಗ್ಗಾಟ ನಡೆಯುತ್ತಲೇ ಇದೆ.
ನಾಮಪತ್ರ ಸಲ್ಲಿಕೆಗೆ ಇನ್ನು ಮೂರೇ ದಿನವಿದ್ದರೂ ಮೈತ್ರಿಯಲ್ಲಿ ಅಭ್ಯರ್ಥಿ ಯಾರೆಂಬ ಕಾರ್ಯಕರ್ತರ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಯೋಗೇಶ್ವರ್, ಬಿಜೆಪಿ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಸ್ಪರ್ಧೆ ಅಥವಾ ಬೇರೆ ಪಕ್ಷದಿಂದ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ.
ಮೈತ್ರಿಕೂಟದ ಟಿಕೆಟ್ ಕಲಹವನ್ನು ಕುತೂಹಲದಿಂದ ಗಮನಿಸುತ್ತಿರುವ ಕಾಂಗ್ರೆಸ್, ಕಡೆವರೆಗೆ ಕಾದು ನೋಡುವ ತಂತ್ರದ ಮೊರೆ ಹೋಗಿದೆ. ಇಬ್ಬರ ಆಟದಲ್ಲಿ ಮೂರನೇಯವನಾಗಿ ಲಾಭ ಪಡೆಯಲು ತಂತ್ರ ಹೆಣೆಯುತ್ತಿದೆ.
2028ರ ಮೇಲೆ ಕಣ್ಣು: ಇಷ್ಟಕ್ಕೂ ಬಿಜೆಪಿ–ಜೆಡಿಎಸ್ ನಡುವೆ ಟಿಕೆಟ್ ವಿಷಯದಲ್ಲಿ ಸಂಘರ್ಷ ನಡೆಯಲು ಕಾರಣವೇನು? ಈ ಪ್ರಶ್ನೆಗೆ ಕ್ಷೇತ್ರದಲ್ಲಿ ಕೇಳಿ ಬರುತ್ತಿರುವ ಸ್ಪಷ್ಟ ಉತ್ತರ 2028ರ ಸಾರ್ವತ್ರಿಕ ಚುನಾವಣೆ. ಹೌದು, ಟಿಕೆಟ್‌ಗೆ ಪಟ್ಟು ಹಿಡಿದಿರುವ ಯೋಗೇಶ್ವರ್ ಮತ್ತು ಕ್ಷೇತ್ರ ಪ್ರತಿನಿಧಿಸುತ್ತಿದ್ದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಟಿಕೆಟ್ ರಾಜಕಾರಣದ ಹಿಂದಿರುವುದು 2028ರ ಚುನಾವಣೆ.
2018ರಲ್ಲಿ ರಾಮನಗರವನ್ನು ಪುತ್ರ ನಿಖಿಲ್‌ಗೆ ಬಿಟ್ಟು ಚನ್ನಪಟ್ಟಣದಿಂದ ಕಣಕ್ಕಿಳಿದ ಕುಮಾರಸ್ವಾಮಿ ಅವರು, ಯೋಗೇಶ್ವರ್ ವಿರುದ್ಧ ಗೆದ್ದು ಜೆಡಿಎಸ್‌ಗೆ ಬಲ ತುಂಬಿದರು. 2023ರ ಚುನಾವಣೆಯಲ್ಲೂ ‘ಸೈನಿಕ’ನನ್ನು ಮಣಿಸಿದರು. ಬದಲಾದ ರಾಜಕೀಯ ಸಮೀಕರಣದಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಕೈ ಜೋಡಿಸಿದರು. ಮಂಡ್ಯದಿಂದ ಸ್ಪರ್ಧಿಸಿ ಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.
1999ರಲ್ಲಿ ಪಕ್ಷೇತರ ಶಾಸಕನಾಗಿ ಆಯ್ಕೆಯಾಗುವ ಮೂಲಕ, ಕ್ಷೇತ್ರದಲ್ಲಿ ರಾಜಕಾರಣ ಶುರು ಮಾಡಿದ ಯೋಗೇಶ್ವರ್, ಕಳೆದ 25 ವರ್ಷಗಳಿಂದ ಕ್ಷೇತ್ರ ಬಿಟ್ಟು ಕದಲಿಲ್ಲ. ಲೋಕಸಭಾ ಚುನಾವಣೆಯಲ್ಲೂ ಅದೃಷ್ಟ ಪರೀಕ್ಷೆಗಿಳಿದಿದ್ದ ಅವರು, ರಾಜ್ಯ ರಾಜಕಾರಣದಲ್ಲೂ ಛಾಪು ಮೂಡಿಸಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಗಿರುವ ಏಕೈಕ ಆಸರೆ ಅವರೇ.
ಕ್ಷೇತ್ರ ಕೈ ತಪ್ಪುವ ಭೀತಿ: ತನ್ನಿಂದ ತೆರವಾಗಿರುವ ಕ್ಷೇತ್ರವನ್ನು ಮೈತ್ರಿ ಹೆಸರಿನಲ್ಲಿ ಬಿಜೆಪಿಯ ಯೋಗೇಶ್ವರ್ ಅವರಿಗೆ ಬಿಟ್ಟು ಕೊಟ್ಟರೆ, 2028ರ ಚುನಾವಣೆಯಲ್ಲಿ ಮತ್ತೆ ಕ್ಷೇತ್ರವನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸಿಪಿವೈ ಇರುವವರೆಗೆ ಮತ್ತೆ ಪಕ್ಷ ಇಲ್ಲಿ ತಲೆ ಎತ್ತುವುದಿಲ್ಲ ಎಂಬ ಆತಂಕ ಎಚ್‌ಡಿಕೆ ಅವರದ್ದು.
ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ‘ಸೈನಿಕ’ನಿಗೆ, ಉಪ ಚುನಾವಣೆ ನೆಪದಲ್ಲಿ ಕ್ಷೇತ್ರದಲ್ಲಿ ಮತ್ತೆ ನೆಲೆ ಕಂಡುಕೊಳ್ಳುವ ಅವಕಾಶ ಬಂದಿದೆ. ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದಲೂ ಕಣಕ್ಕಿಳಿಯಲು ಸಿದ್ದ ಎನ್ನುತ್ತಿದ್ದ ಅವರು, 2028ರ ಚುನಾವಣೆಗೆ ಎಚ್‌ಡಿಕೆ ಅಡ್ಡಗಾಲು ಹಾಕುವ ಆತಂಕದಿಂದ ಯೂ ಟರ್ನ್ ತೆಗೆದುಕೊಂಡು ಬಿಜೆಪಿ ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ.
ಟಿಕೆಟ್ ವಿಷಯದಲ್ಲಿ ಯೋಗೇಶ್ವರ್ ಅವರ ರಾಜಕೀಯ ನಡೆಗೆ ಅವರಿಗೆ ವ್ಯಕ್ತವಾಗುತ್ತಿರುವ ಜನಬೆಂಬಲವೂ ಕಾರಣ. ಎರಡು ಸಲ ಸೋತಿರುವ ಈ ಸ್ಥಳೀಯ ನಾಯಕನ ಮೇಲೆ ಅನುಕಂಪದ ಜೊತೆಗೆ ನಮ್ಮೂರಿನವರು ಎಂಬ ಅಭಿಮಾನವೂ ಮೇಳೈಸಿದೆ. ಬರಗಾಲಕ್ಕೆ ಸಾಕ್ಷಿಯಾಗಿರುವ ರೈತರು ಕೆರೆಗಳನ್ನು ತುಂಬಿಸಿದ ಯೋಗೇಶ್ವರ್ ಅವರ ಕೆಲಸಗಳನ್ನು ನೆನೆಯುತ್ತಿದ್ದಾರೆ. ಈ ಬೆಳವಣಿಗೆಗಳು ಪಕ್ಷದ ಟಿಕೆಟ್ ಸಿಗದಿದ್ದರೆ ಬೇರೆ ಪಕ್ಷದ ಟಿಕೆಟ್ ತರುವ ಅಥವಾ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲುವ ಆತ್ಮವಿಶ್ವಾಸವನ್ನು ಯೋಗೇಶ್ವರ್ ಅವರಿಗೆ ನೀಡಿದೆ.
ಕ್ಷೇತ್ರದ ಟಿಕೆಟ್ ವಿಷಯ ಎಚ್‌ಡಿಕೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಯೋಗೇಶ್ವರ್‌ಗೆ ವ್ಯಕ್ತವಾಗುತ್ತಿರುವ ಜನಬೆಂಬಲದ ಜೊತೆಗೆ ಬದಲಾಗಿರುವ ರಾಜಕೀಯ ಚಿತ್ರಣವು ಕ್ಷೇತ್ರ ಎಲ್ಲಿ ಕೈ ತಪ್ಪುತ್ತದೊ ಎಂಬ ಆತಂಕ ಸೃಷ್ಟಿಸಿದೆ. ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಳ್ಳಬೇಕೆಂದು ಜೆಡಿಎಸ್‌ನಿಂದಲೇ ಸಿಪಿವೈ ಕಣಕ್ಕಿಳಿಸಲು ಎಚ್‌ಡಿಕೆ ಒಪ್ಪಿದರೂ ಆ ತಂತ್ರ ಫಲಿಸಿಲ್ಲ. ಬಿಜೆಪಿ ನಾಯಕರ ನಿಯಂತ್ರಣಕ್ಕೂ ಸಿಗದ ಸಿಪಿವೈಗೆ ಬಿಜೆಪಿಯಿಂದಲೇ ಸ್ಪರ್ಧಿಸಲು ಬಿಟ್ಟರೆ ಕ್ಷೇತ್ರ ಕೈ ತಪ್ಪಿದಂತೆ ಎಂಬುದು ಅವರಿಗೆ ಗೊತ್ತಿದೆ. ನಿಯಂತ್ರಣಕ್ಕೆ ಸಿಗದ ಯೋಗೇಶ್ವರ್ ಹಾಗೂ ಕ್ಷೇತ್ರ ‘ಕೈ’ವಶಕ್ಕೆ ಕಾಯುತ್ತಿರುವ ಡಿ.ಕೆ ಸಹೋದರರು ಎಚ್‌ಡಿಕೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದಾರೆ. ಜಟಿಲವಾಗಿರುವ ಟಿಕೆಟ್ ಬಿಕ್ಕಟ್ಟನ್ನು ಹೇಗೆ ಬಗೆಹರಿಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.