ADVERTISEMENT

ಚನ್ನಪಟ್ಟಣ: ಹುಟ್ಟೂರು ಚಕ್ಕೆರೆಯಲ್ಲಿ ಪತ್ನಿ ಜೊತೆ ಹಕ್ಕು ಚಲಾಯಿಸಿದ ಯೋಗೇಶ್ವರ್

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 5:30 IST
Last Updated 13 ನವೆಂಬರ್ 2024, 5:30 IST
   

ಚನ್ನಪಟ್ಟಣ (ರಾಮನಗರ): ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹಾಗೂ ಅವರ ಪತ್ನಿ ಶೀಲಾ ಯೋಗೇಶ್ವರ್ ಅವರು ಬೆಳಿಗ್ಗೆ 10.30 ಕ್ಕೆ ಚಕ್ಕರೆ ಗ್ರಾಮದಲ್ಲಿ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಇಬ್ಬರು ಸಹ ಪ್ರತೇಕ ಸಾಲಿನಲ್ಲಿ ಸುಮಾರು 5 ನಿಮಿಷ ಸರದಿಯಲ್ಲಿ ಕಾದರು. ಬಳಿಕ ಸರದಿಯ ಹೊರಬಂದು ನೇರವಾಗಿ ಮತಗಟ್ಟೆ ಪ್ರವೇಶಿಸಿದ ದಂಪತಿ ತಮ್ಮ ಹಕ್ಕು ಚಲಾಯಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೇಶ್ವರ್, ಹುಟ್ಟೂರಿನಲ್ಲಿ ಮತದಾನ ಮಾಡಿದ್ದೇನೆ. ನಮಗೆ ಒಳ್ಳೆಯ ವಾತಾವರಣ ಇದೆ. ಜನ ಸಾಮಾನ್ಯರು ರಾಜ್ಯ ಸರ್ಕಾರದ ಪರವಾಗಿದ್ದಾರೆ. ಈ ಚುನಾವಣೆ ನನಗೆ ಆಶಾಭಾವನೆ ಮೂಡಿಸಿದೆ. ಮತದಾನ ಎಲ್ಲರ ಕರ್ತವ್ಯ. ಎಲ್ಲರೂ ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಮತದಾನ ಮಾಡುವಂತೆ ನಾವು ಸಹ ಮನವಿ ಮಾಡಿಕೊಂಡಿದ್ದೆವು ಎಂದರು.

ADVERTISEMENT

ಇಡೀ ರಾಜ್ಯದಲ್ಲಿ ಮೂರು ಕಡೆ ಉಪ ಚುನಾವಣೆ ನಡೆಯುತ್ತಿದೆ. ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಸೇರಿದಂತೆ ಸಚಿವರು ಸಹ ನನ್ನ ಪರವಾಗಿ ಪ್ರಚಾರ ಮಾಡಿದ್ದಾರೆ‌. ಮಾಜಿ ಸಿ.ಎಂ ಹಾಗೂ ಹಾಲಿ‌ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ನನ್ನ ಎದುರಾಳಿಯಾಗಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಸಾಕಷ್ಟು ಕೂತುಹಲ ಇದೆ ಎಂದು ಹೇಳಿದರು.

ಸಚಿವ ಜಮೀರ್ ಹೇಳಿಕೆ‌ ನಿಮಗೆ ನೆಗೆಟಿವ್ ಆಗಲಿದೆಯೇ? ಎಂಬ‌ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ಏನು ಹೇಳಿಕೆ ನೀಡಿದ್ದಾರೋ ನನಗೆ ಗೊತ್ತಿಲ್ಲ. ಇದು ನನ್ನ ಚುನಾವಣೆ. ನನ್ನ ವೈಯಕ್ತಿಕ ಮತಗಳಿವೆ. ಯಾರದ್ದೊ ಹೇಳಿಕೆಗಳು ಈ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಇದು ಇಬ್ಬರು ಎದುರಾಳಿಗಳ ಹೋರಾಟ ಅಷ್ಟೆ ಎಂದರು.

ಈ ಚುನಾವಣೆಯ ಫಲಿತಾಂಶವು ರಾಜ್ಯ ಸರ್ಕಾರದ ಒಂದೂವರೆ ವರ್ಷದ ಸಾಧನೆ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಜನರು ಅಧಿಕೃತ ಮುದ್ರೆ ಒತ್ತುವುದಾಗಿದೆ. ಜನರು ಗ್ಯಾರಂಟಿಗಳ ಮೇಲೆ ಜನ ಯಾವ ರೀತಿಯ ಭರವಸೆ ಇರಿಸಿಕೊಂಡಿದ್ದಾರೆ ಎಂಬುದನ್ನು ಸಹ ತೋರಿಸುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.